ಕೇಂದ್ರ ಸರ್ಕಾರ ಕರ್ನಾಟಕವನ್ನು ಟಾರ್ಗೆಟ್ ಮಾಡುತ್ತಿದೆ: ಸಚಿವ ರಾಮಲಿಂಗಾರೆಡ್ಡಿ

By Kannadaprabha News  |  First Published Nov 9, 2023, 8:06 AM IST

ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದ ಉದ್ದಿಮೆದಾರರ 25 ಲಕ್ಷ ಕೋಟಿಯಷ್ಟು ಸಾಲವನ್ನು ಪ್ರಧಾನಿ ಮೋದಿರವರು ಮನ್ನಾ ಮಾಡಿದರು. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಣ ಲೂಟಿಗೆ ಪೈಪೋಟಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ಹೇಳುತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ: ಸಚಿವ ರಾಮಲಿಂಗಾರೆಡ್ಡಿ 


ರಾಮನಗರ/ಕನಕಪುರ(ನ.09):  ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಬರ ಪರಿಹಾರ ನೀಡಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ದೆಹಲಿಗೆ ಹೋಗಿದ್ದ ನಮ್ಮ ಸಚಿವರನ್ನು ಭೇಟಿಯಾಗುವ ಸೌಜನ್ಯವನ್ನು ಕೇಂದ್ರ ಕೃಷಿ ಸಚಿವರು ತೋರಲಿಲ್ಲ. ಇದನ್ನು ನೋಡಿದರೆ ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ಟಾರ್ಗೆಟ್ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನ ಅಚ್ಚಲು ಕಬ್ಬಾಳು ಗ್ರಾಮದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ನಷ್ಟ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಕೃಷಿ ಸಚಿವರು ರಾಜ್ಯದ ಸಮಸ್ಯೆ ಕೇಳುವಷ್ಟು ಬಿಡುವಿಲ್ಲದೆ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರ ಪರಿಹಾರ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

Tap to resize

Latest Videos

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಕೇಂದ್ರ ಸರ್ಕಾರ ಮಾಡಿರುವ ಮಾರ್ಗಸೂಚಿ ಪ್ರಕಾರವೇ ಬರ ಪರಿಹಾರ ನೀಡುವಂತೆ ಕೇಳುತ್ತಿದ್ದೇವೆ. ಅದನ್ನು ಕೊಡುವುದಿಲ್ಲ ಅಂದರೆ ಏನರ್ಥ. ಕೇಂದ್ರ ಪರಿಹಾರ ನೀಡಲಿಲ್ಲವೆಂದು ನಮ್ಮ ರೈತರನ್ನು ಬಿಡಲು ಆಗುವುದಿಲ್ಲ. ಕುಡಿವ ನೀರು, ಮೇವು ಸೇರಿದಂತೆ ಇತರೆ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದಾಗಿದೆ. ಕರ್ನಾಟಕದಿಂದ ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ. ಜಿಎಸ್‌ಟಿ ಪರಿಹಾರವಾಗಿ 35 ಸಾವಿರ ಕೋಟಿ ಬೇರೆ ಬೇರೆ ಸ್ಕೀಮ್ ಗಳಲ್ಲಿ 15 ಸಾವಿರ ಕೋಟಿ ಸೇರಿ ಒಟ್ಟು 50 ಸಾವಿರ ಕೋಟಿ ಮಾತ್ರ ಕೋಟಿ ಮಾತ್ರ ಕೊಡುತ್ತಿದ್ದಾರೆ. 4 ಲಕ್ಷ ಕೋಟಿ ಕೇಂದ್ರವೇ ಬಾಕಿ ಉಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಸಹಾಯ ಮಾಡದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದ ಉದ್ದಿಮೆದಾರರ 25 ಲಕ್ಷ ಕೋಟಿಯಷ್ಟು ಸಾಲವನ್ನು ಪ್ರಧಾನಿ ಮೋದಿರವರು ಮನ್ನಾ ಮಾಡಿದರು. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಣ ಲೂಟಿಗೆ ಪೈಪೋಟಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ಹೇಳುತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದರು.

ಮೋದಿರವರು ಪ್ರಧಾನಿ ಆಗುವುದಕ್ಕೂ ಮುನ್ನ 2013ರವರೆಗೆ ದೇಶದ ಸಾಲ 52 ಲಕ್ಷ ಕೋಟಿ ಇತ್ತು. ಮೋದಿರವರು ಪ್ರಧಾನಿಯಾದ ಮೇಲೆ 9 ವರ್ಷದಲ್ಲಿ ದೇಶದ ಸಾಲ 150 ಲಕ್ಷ ಕೋಟಿ ಆಗಿದೆ. ಮೋದಿರವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ಇದ್ದಂತಹ ಭ್ರಷ್ಟ ಬಿಜೆಪಿ ಸರ್ಕಾರ ಬಗ್ಗೆ ಮಾತನಾಡಲಿ. ಅದು ಬಿಟ್ಟು ನಮ್ಮ ಗ್ಯಾರಂಟಿ ಗಳನ್ನ ಟೀಕೆ ಮಾಡುವ ಬದಲು ರಾಜ್ಯದ ರೈತರ ನೆರವಿಗೆ ಹೆಚ್ಚಿನ ಪರಿಹಾರ ಒದಗಿಸಲು ಗಮನ ನೀಡಲಿ ಎಂದು ಆಗ್ರಹಿಸಿದರು.

ರಾಮನಗರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತೀವ್ರ ಬರಗಾಲದಿಂದ ಸಂಪೂರ್ಣ ಬೆಳೆ ನಾಶವಾಗಿದ್ದು, ತೆಂಗು, ರೇಷ್ಮೆ, ರಾಗಿ ಬೆಳೆ ಸೇರಿ ಹಲವು ಬೆಳೆಗಳು ನಾಶವಾಗಿರುವುದರಿಂದ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರವನ್ನು ನೀಡಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜ್ಯದಲ್ಲಿ ಈ ಬಾರಿ ಮಳೆಯ ಅಭಾವದಿಂದ ತೀವ್ರ ಬರಗಾಲ ಉಂಟಾಗಿ ರೈತರು ಸಂಕಷ್ಟಕ್ಕೆ ಈಡಾಗಿದ್ದು, ತಾಲೂಕಿನಲ್ಲಿ 320 ಹೆಕ್ಟೆರ್‌ ಪ್ರದೇಶದಲ್ಲಿ ಕಪ್ಪು ತಲೆಹುಳದಿಂದ ತೆಂಗುಬೆಳೆ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್

ಶಾಸಕ ಇಕ್ಬಾಲ್ ಹುಸೇನ್ , ವಿಧಾನಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ, ತಹಸೀಲ್ದಾರ್ ಸ್ಮಿತಾ ರಾಮು ಮತ್ತಿತರರು ಹಾಜರಿದ್ದರು.

25 ಸಂಸದರು ಯಾವ ಪುರುಷಾರ್ಥಕ್ಕೆ ಗೆದ್ದಿದ್ದು

ರಾಜ್ಯದಿಂದ 25 ಬಿಜೆಪಿ ಸಂಸದರು ಗೆದ್ದು ಹೋಗಿದ್ದು ಯಾವ ಪುರುಷಾರ್ಥಕ್ಕೆ ಎಂದು ತಿಳಿಯುತ್ತಿಲ್ಲ. ಪ್ರಧಾನಿ ಮೋದಿ ಬಳಿ ಕುಳಿತು ರಾಜ್ಯದ ವಾಸ್ತವಾಂಶವನ್ನು ಮನವರಿಕೆ ಮಾಡುವ ಧೈರ್ಯ ಯಾರಿಗೂ ಇಲ್ಲದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಹೋಗಿ ಮೋದಿ ಬಳಿ ದೇವರಿಗೆ ನಮಸ್ಕಾರ ಹಾಕುವ ರೀತಿಯಲ್ಲಿ ನಮಸ್ಕಾರ ಹಾಕಿ ಬರುವುದಕ್ಕೆ ಮಾತ್ರ ಸೀಮಿತವಾಗಿದ್ಧು ರಾಜ್ಯದ ಜನತೆ, ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಇಂತವರಿಂದ ನಾವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯ ವಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

click me!