
ಚಿತ್ರದುರ್ಗ (ಅ.05): ಒಂದು ಕ್ವಿಂಟಲ್ ಬೀಜ ತಂದು ಭೂಮಿಗೆ ಹಾಕಿದ್ದೇನೆ, ಇಳುವರಿ ಬರಲಿ ಅಂತ ರಸಗೊಬ್ಬರ ಕೂಡಾ ಕೊಟ್ಟಿದ್ದೇನೆ, ಬಿತ್ತನೆಗೆ ಸಾವಿರಾರು ರು. ಖರ್ಚು ಮಾಡಿದ್ದೇನೆ. ಮಳೆ ಇಲ್ಲದೆ ಶೇಂಗಾ ಒಣಗಿ ಹೋಗಿದೆ. ನಮ್ ಬದುಕು ಹೇಗೆ. ಡೆಲ್ಲಿಯಿಂದ ಬಂದೋರು ನೀವೇ ಹೇಳಿ.
ಕೇಂದ್ರದ ಬರ ಅಧ್ಯಯನ ತಂಡದ ಮುಂದೆ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿ ಸಕ್ಕರ ಗ್ರಾಮದ ರೈತ ತಿರುಮಲ್ಲಪ್ಪ ಹರವಿದ ನೋವಿನ ನುಡಿಗಳಿವು. ಸುಮಾರು 2.5 ಎಕರೆ ಜಮೀನಿನಲ್ಲಿ 1 ಕ್ವಿಂಟಲ್ ಶೇಂಗಾ ಬೀಜ ಬಿತ್ತಿರುವ ಆತ ಒಟ್ಟಾರೆ 87 ಸಾವಿರ ಖರ್ಚು ಮಾಡಿದ್ದಾನೆ. ನಮ್ ಬದುಕು ಯಾರಿಗೂ ಬೇಡವಾಗಿದೆ. ನೀವು ನೋಡ್ಕಂಡು ಹೋಗಿ ಪರಿಹಾರ ಕೊಟ್ರೂ ಅದೂ ಬೀಜಕ್ಕೆ ಆಗೋದಿಲ್ಲ ಎಂದರು.
ಮೊದಲ ಹಂತದಲ್ಲಿ ಬರ ಘೋಷಣೆಯಾದ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕಿನ ಹಳ್ಳಿಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದಲ್ಲಿ, ಉಪ ನಿರ್ದೇಶಕ ಚೇತ್ ರಾಮ್ ಮೀನಾ, ಕೇಂದ್ರದ ನೀತಿ ಆಯೋಗದ ಒಎಸ್‍ಡಿ ಕರ್ನಲ್ ಅಮರೇಂದ್ರ ಸಿಂಗ್, ಜಲಸಂಪನ್ಮೂಲ ಹಾಗೂ ನದಿ ಪುನಶ್ಚೇತನ ನಿದೇರ್ಶಕ ಡಾ.ಜೆ.ಹರ್ಷ ಅವರು ಅಧ್ಯಯನ ತಂಡದಲ್ಲಿದ್ದರು.
1 ಲಕ್ಷ ರು. ನಷ್ಟ ಅನುಭವಿಸಿರುವ ರೈತ ತಿರುಮಲಪ್ಪ ತಲೆ ಮೇಲೆ ಕೈ ಹೊತ್ತು ಕೂತು ತಂಡದ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದರು. ಹೇಗೂ ಬಂದಿದ್ದೀರಾ ಒಂದಿಷ್ಟು ನೆರವು ಘೋಷಣೆ ಮಾಡಿ ಹೋಗಿ ಎಂದು ಮನವಿ ಮಾಡಿದ. ಇದೇ ಗ್ರಾಮದ ಮುಕುಂದಪ್ಪನವರ ಜಮೀನಿನಲ್ಲಿ ಅಂರ್ತಜಲ ಮಟ್ಟ ಕುಸಿದು, ನೀರಾವರಿ ಆಶ್ರಿತ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳು ಕುಂಠಿತವಾಗಿರುವುದನ್ನು ತಂಡ ವೀಕ್ಷಿಸಿತು.
ಪಕ್ಕದಲ್ಲಿ ಈಗಾಗಲೇ ಒಣಗಿರುವ ಶೇಂಗಾ ಬೆಳೆಯನ್ನು ಕತ್ತರಿಸಿ ತಂದು ಮನೆಯ ಮುಂದೆ ರಾಶಿ ಹಾಕಿಕೊಂಡಿದ್ದ ರೈತ ನಾಗರಾಜನನ್ನು ತಂಡ ಭೇಟಿ ಮಾಡಿ ಮಾತನಾಡಿಸಿತು. ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದ್ದು, ಬೆಳೆ ಕೈಗೆ ಸಿಗುವ ಸಂಭವ ಕ್ಷೀಣಿಸಿದ್ದರಿಂದ, ಮನೆಯ ಜಾನುವಾರುಗಳಿಗೆ ಮೇವಿನ ಸುಲುವಾಗಿ ಬೆಳೆ ಕಟಾವು ಮಾಡಿರುವುದಾಗಿ ತಿಳಿಸಿದರು.ಸುಮಾರು 10 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿ ನಷ್ಟ ಹೊಂದಿದ ರೈತ ತಿಪ್ಪಯ್ಯನವರ ಹೊಲಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತು.
ಈ ಬಾರಿ ಮೆಳೆ ನೆಚ್ಚಿಕೊಂಡು ₹62,025 ಖರ್ಚು ಮಾಡಿ ತೊಗರಿ ಬಿತ್ತಿದ್ದೇನೆ. ಆದರೆ ಸೂಕ್ತ ಮಳೆ ಇರದ ಕಾರಣ ತೊಗರಿ ಗಿಡಗಳು ಟಿಸಿಲು ಒಡೆಯದೇ, ಬೆಳವಣಿಗೆ ಸಂಪೂರ್ಣ ಕುಂಠಿತವಾಗಿದೆ. ಒಂದು ಕಾಳು ತೊಗರಿಯೂ ಸಿಗುವುದಿಲ್ಲ. ಸುಮಾರು 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಕೃಷಿಕ ತಿಪ್ಪಯ್ಯ ಕೇಂದ್ರ ತಂಡದ ಮುಂದೆ ನೋವು ತೋಡಿಕೊಂಡರು.
ನಂತರ ಹೊಸಕೆರೆ ಗ್ರಾಮಕ್ಕೆ ತೆರಳಿದ ತಂಡವು, ಜಲಮೂಲಗಳ ಸಂರಕ್ಷಣೆ ಯೋಜನೆಯಡಿ (ವಿಬಿ-ಜಿ ರಾಮ್ ಜಿ ಯೋಜನೆ) ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು. ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕಲ್ಪಿಸಲಾಗಿರುವ ಗೃಹ ನಳ ಸಂಪರ್ಕದ ಕಾರ್ಯಕ್ಷಮತೆಯನ್ನು ಪರೀಕ್ಷಿಸಿತು.
ಕೇಂದ್ರ ಬರ ಅಧ್ಯಯನ ತಂಡವು ಪರುಶುರಾಮಪುರ ಹೋಬಳಿಯ ರೈತರ ಸಂಪರ್ಕ ಕೇಂದ್ರ ಆವರಣದಲ್ಲಿನ ರೈತ ಭವನದಲ್ಲಿ ಸ್ಥಳೀಯ ರೈತರೊಂದಿಗೆ ಸಂವಾದ ನಡಿಸಿ, ಮನವಿ ಸ್ವೀಕರಿಸಿತು. ರೈತಮುಖಂಡ ಚಿಕ್ಕಣ್ಣ ಮಾತನಾಡಿ, ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬಿತ್ತನೆಗಾಗಿ ಪ್ರತಿ ಎಕರೆಗೆ ರೂ.30 ಸಾವಿರದಿಂದ ಐವತ್ತು ಸಾವಿರದವರೆಗೆ ವೆಚ್ಚ ಮಾಡಲಾಗಿದ್ದು, ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಪ್ರತಿ ಹೆಕ್ಟೇರ್ ಗೆ 40ಸಾವಿರ ಪರಿಹಾರ ನೀಡಬೇಕೆಂದು ಕೋರಿದರು.
ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಸೇರಿದಂತೆ ಜಿಲ್ಲೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.