
ಬೆಂಗಳೂರು: ರೇಸ್‌ಕೋರ್ಸ್ ರಸ್ತೆಯಲ್ಲಿ ಮಳೆ ನೀರು ಹಾಗೂ ಒಳ ಚರಂಡಿ ಕಾಮಗಾರಿ ಮತ್ತು ಮೌರ್ಯ ಜಂಕ್ಷನ್‌ನಿಂದ ಹರೇಕೃಷ್ಣ ರಸ್ತೆ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಇಂದಿನಿಂದ ಆರಂಭವಾಗುತ್ತಿರುವುದರಿಂದ ಮುಂದಿನ 60 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸುಗಮ ವಾಹನ ಸಂಚಾರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ಹಾಗೂ ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸ್ಯಾಂಕಿ ರಸ್ತೆಯಲ್ಲಿ ಕೆ.ಆರ್. ಮಾರ್ಕೆಟ್ ಕಡೆಗೆ ಸಂಚರಿಸುವ ಬಿ.ಎಂ.ಟಿ.ಸಿ ಬಸ್ಸುಗಳು, ಖಾಸಗಿ ಬಸ್ಸುಗಳು ಹಾಗೂ ಹೆಚ್.ಜಿ.ವಿ. ವಾಹನಗಳು ವಿಂಡ್ಲರ್ ಮ್ಯಾನರ್‌ನಿಂದ ನೇರವಾಗಿ ಎಲ್.ಆರ್.ಡಿ.ಇ. ಜಂಕ್ಷನ್ ಕಡೆಗೆ ಚಲಿಸಿ, ಎಲ್.ಆರ್.ಡಿ.ಇ. ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಬಸವೇಶ್ವರ ಜಂಕ್ಷನ್ ಮುಖಾಂತರ ಸಂಚರಿಸುವುದು.
ಸ್ಯಾಂಕಿ ರಸ್ತೆಯಲ್ಲಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಬಿ.ಎಂ.ಟಿ.ಸಿ ಬಸ್ಸುಗಳು, ಖಾಸಗಿ ಬಸ್ಸುಗಳು ಹಾಗೂ ಹೆಚ್.ಜಿ.ವಿ. ವಾಹನಗಳು ಒಳಗೊಂಡಂತೆ ಎಲ್ಲಾ ರೀತಿಯ ವಾಹನಗಳು ಕುಮಾರಕೃಪ ರಸ್ತೆಯ ಮುಖಾಂತರ ಶಿವಾನಂದ ಸರ್ಕಲ್ ತಲುಪಿ ಬಲ ತಿರುವು ಪಡೆದು ಎಸ್. ಸಿ. ರಸ್ತೆಯಲ್ಲಿ ಎಡತಿರುವು ಪಡೆದು ಮೆಜೆಸ್ಟಿಕ್ ಕಡೆಗೆ ಸಂಚರಿಸುವುದು.
ಓಲ್ಡ್ ಜೆ.ಡಿಎಸ್ ಜಂಕ್ಷನ್‌ನಿಂದ ಟ್ರಿಲೈಟ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಓಲ್ಡ್ ಜೆ.ಡಿಎಸ್ ಜಂಕ್ಷನ್‌ನಲ್ಲಿ ಎಡಭಾಗದ ರಸ್ತೆಯಲ್ಲಿ ಟ್ರಿಲೈಟ್ ಜಂಕ್ಷನ್ ಕಡೆಗೆ ಮತ್ತು ರೆಸ್ ಜಂಕ್ಷನ್‌ನಲ್ಲಿ ಎಡತಿರುವ ಪಡೆದು ಕುಮಾರ ಕೃಪ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ತರದ ವಾಹನಗಳು ಟ್ರಿಲೈಟ್ ಜಂಕ್ಷನ್‌ನಿಂದ ಶಿವಾನಂದ ಪ್ರೈಓವರ್ ಮೇಲೆ ನೇರವಾಗಿ ಚಲಿಸುವ ಮೂಲಕ ನೆಹರು ಸರ್ಕಲ್‌ನಿಂದ ಎಸ್.ಸಿ. ರಸ್ತೆಯನ್ನು ತಲುಪಿ ಮೆಜೆಸ್ಟಿಕ್ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕೈಗೊಂಡಿರುವ ಈ ವ್ಯವಸ್ಥೆಯು ದಿನಾಂಕ: 05.10.2026 ರಿಂದ ಮುಂದಿನ 60 ದಿನಗಳ ಕಾಲ ಜಾರಿಯಲ್ಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ.