ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ದಸರಾ ಮಾದರಿಯಲ್ಲಿ ನಾಡಹಬ್ಬವಾಗಿ ಆಚರಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಬೆಂಗಳೂರು (ಜೂ.28): ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ದಸರಾ ಮಾದರಿಯಲ್ಲಿ ನಾಡಹಬ್ಬವಾಗಿ ಆಚರಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಸೋಮವಾರ ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಪಾಳೇಗಾರರಲ್ಲ, ರಾಜರಾಗಿದ್ದರು. ಸುಂದರ ಮತ್ತು ಸುಸಜ್ಜಿತ ಬೆಂಗಳೂರು ನಗರ ನಿರ್ಮಾಣವಾಗಲು ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಕಾರಣ.
ಈ ಹಿನ್ನೆಲೆ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮತ್ತು ಕೆಂಪೇಗೌಡ ಜಯಂತಿಯನ್ನು ಮೈಸೂರು ದಸರಾ ರೀತಿಯಲ್ಲಿ ನಾಡಹಬ್ಬವಾಗಿ ಆಚರಿಸಬೇಕು ಎಂಬ ಒತ್ತಾಯಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು. ರಾಷ್ಟ್ರಕವಿ ಕುವೆಂಪು ಬಗ್ಗೆ ಕೆಲವರು ವ್ಯಂಗ್ಯವಾಗಿ ಬರೆದಿರುವುದು ತಪ್ಪು. ಶೂದ್ರರು ಜ್ಞಾನಪೀಠ ಪ್ರಶಸ್ತಿ ತಂದುಕೊಡುತ್ತಾರೆ ಎಂಬುದನ್ನು ಕುವೆಂಪು, ಪ್ರಧಾನಿಯಾಗಿ ದೇಶವನ್ನು ಆಳ್ವಿಕೆ ಮಾಡುತ್ತಾರೆ ಎಂಬುದನ್ನು ದೇವೇಗೌಡರು ತಿಳಿಸಿದ್ದಾರೆ. ದೇಶವನ್ನು ಆಳುವ ಶಕ್ತಿ ಒಕ್ಕಲಿಗ ಸಮುದಾಯದ ರಕ್ತದಲ್ಲಿದೆ ಎಂದು ಹೇಳಿದರು.
ಕೆಂಪೇಗೌಡರ 513ನೇ ಜಯಂತಿ: ದೂರದೃಷ್ಟಿಯ ನಗರ ನಿರ್ಮಾತೃ, ಕಟ್ಟಿಸಿದ ಕೋಟೆ, ಕೆರೆಗಳೆಲ್ಲಾ ಚಿರಸ್ಥಾಯಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಒಕ್ಕಲಿಗ ಸಮಾಜದ ಎಲ್ಲರೂ ಒಂದೇ ತಾಯಿ ಮಕ್ಕಳಾಗಿದ್ದು, ಐಕ್ಯತೆಯಿಂದ ಮುಂದೆ ಸಾಗಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯ ಹೆಸರು ಬರುತ್ತದೆ. ಒಕ್ಕಲಿಗ ಸಂಘ ಪಕ್ಷಾತೀತವಾಗಿ ಸಮಾಜದ ಹಿತಕ್ಕೆ ಕಾರ್ಯನಿರ್ವಹಿಸಬೇಕು. ನಾನು ಸಾಯುವ ತನಕ ನಾಡಿನ ಒಳಿತಿಗೆ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಸಂಸದ ಸದಾನಂದಗೌಡ ಮಾತನಾಡಿ, ಸ್ಮಾರ್ಟ ಸಿಟಿ ಯೋಜನೆ ಕೆಂಪೇಗೌಡರ ಕಲ್ಪನೆಯಾಗಿದೆ. 500 ವರ್ಷಗಳ ಹೊಂದೆಯೇ ಕೆಂಪೇಗೌಡರು ಕೆರೆ, ರಸ್ತೆಗಳು ಮತ್ತು ಉದ್ಯಾನಗಳು ಎಲ್ಲೆಲ್ಲಿ ಇರಬೇಕು ಎಂಬುದನ್ನು ಯೋಜನೆ ಹಾಕಿದವರು.
ಒಂದು ಸಮುದಾಯದಲ್ಲಿ ಹುಟ್ಟಿರುವ ಇವರು ಎಲ್ಲ ಸಮುದಾಯದ ರಾಜರಾಗಿ ಬೆಳೆದಿದ್ದಾರೆ. ಇವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೊಣ ಎಂದರು. ಕಾರ್ಯಕ್ರಮಕ್ಕೂ ಮುನ್ನ ನಗರದ ವಿವಿಧೆಡೆ ಒಕ್ಕಲಿಗ ಸಂಘದಿಂದ ಕೆಂಪೇಗೌಡರ ಪ್ರತಿಮೆ ಮರವಣಿಗೆ ನಡೆಸಲಾಯಿತು. ಶಾಸಕ ಎಸ್.ಆರ್.ವಿಶ್ವನಾಥ್, ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಅಂಗ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿದ್ದರು.
ವೇದಿಕೆಯಲ್ಲಿ ಇರುವವರೇ ಮುಖ್ಯಮಂತ್ರಿ: ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯದ ಜೀವಾಳಗಳಿಗೆ ಅವಮಾನ ಮಾಡುತ್ತಿರುವ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಇರಬಾರದು ಎಂದು ಕೆಲವರು ಆಟವಾಡುತ್ತಿದ್ದಾರೆ. ಇದು ಬದಲಾಗಬೇಕಿದ್ದು, ನಾಡಿಗೆ ಬುದ್ದಿ ಹೇಳುವ ಸಂಘ ಇದಾಗಿದ್ದು, ಮುದ್ದಿತ್ಸನ ತೋರಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮುದಾಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಮುಂದಿನ ಬಾರಿ ಈ ವೇದಿಕೆಯಲ್ಲಿ ಇರುವವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಭವಿಷ್ಯ ನುಡಿದರು.
‘ಪೆನ್ ನೀಡಿದರೆ ಬಾಕಿ ಮನ್ನಾ’: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ‘ನಾನು ಏನಾದರು ಮಾತನಾಡಿದರೇ ವಿವಾದವಾಗುತ್ತದೆ. ಒಕ್ಕಲಿಗ ಸಂಘದ ಕಟ್ಟದ ಭೋಗ್ಯ (ಲೀಸ್) ಗುತ್ತಿಗೆ ಅವಧಿ ಮುಗಿದಿದ್ದು, ಬಾಕಿ ಹಣದ ಬಡ್ಡಿ ವಿನಾಯ್ತಿಗೆ ರಾಜ್ಯ ಸರ್ಕಾರಕ್ಕೆ ಸಂಘವು ಮನವಿ ಮಾಡುತ್ತಿದೆ. ಆದರೆ, ನನಗೆ ಪೆನ್ ಕೊಡಿ ಹೇಗೆ ಸಂಘದ ಎಲ್ಲಾ ಬಾಕಿಯನ್ನು ಮನ್ನಾ ಮಾಡ್ತಿನಿ ನೋಡಿ ಎಂದು ನಾನು ಸ್ವಾಮೀಜಿಗಳ ಬಳಿ ಹೇಳುತ್ತಿದೆ’ ಎಂದರು. ಈ ಹಿಂದೆ ಕೆಂಗಲ್ ಹನುಮಂತಯ್ಯವಿಧಾನಸೌಧ ಕಟ್ಟಿದರು, ಎಚ್.ಡಿ.ಕುಮಾರಸ್ವಾಮಿ ಸುವರ್ಣಸೌಧ ಕಟ್ಟಿದರು. ಆದರೆ, ಅವರಿಬ್ಬರೂ ಅಲ್ಲಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲಿಲ್ಲ. ಇದು ನಮ್ಮ ಒಕ್ಕಲಿಗ ಸಮುದಾಯದವರ ಹಣೆಬರಹ. ನನ್ನ ಕಷ್ಟಕಾಲದಲ್ಲಿ ಸಮುದಾಯ ಜೊತೆ ನಿಂತಿದ್ದು, ಎಲ್ಲರಿಗೂ ಋುಣಿ ಎಂದರು.
ಎಸ್ಎಂಕೆ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ
ನಗರದ ಕೆರೆಗಳನ್ನು ರಕ್ಷಿಸಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕೆಂಪೇಗೌಡರು ನಾಡಿಗೆ ಅಭಿವೃದ್ಧಿಗೆ ಸಾಕಷ್ಟುಶ್ರಮಿಸಿದ್ದು, ಅವರ ಜಯಂತಿ ರಾಜ್ಯಾದ್ಯಂತ ನಡೆಯಬೇಕು. ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರು. ದುಂದು ವೆಚ್ಚ ಮಾಡಲಾಗುತ್ತದೆ. ಸರ್ಕಾರ ಬೆಂಗಳೂರು ನಗರದಲ್ಲಿರುವ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ಕನಿಷ್ಠ ಪಕ್ಷ ಸಾಕಷ್ಟುಕಸದಿಂದ ತುಂಬಿರುವ ಕೆಂಪಾಬುದಿ ಕೆರೆ ಸ್ವಚ್ಛ ಮಾಡಬೇಕು. ಈ ಕೆಲಸ ಸರ್ಕಾರದಿಂದ ಸಾಧ್ಯವಾಗದಿದ್ದರೆ ಆ ಕೆರೆಯನ್ನು ರಾಜ್ಯ ಒಕ್ಕಲಿಗರ ಸಂಘದಿಂದ ಸಂರಕ್ಷಣೆ ಮಾಡುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.