ಕೆಂಪೇಗೌಡರ 513ನೇ ಜಯಂತಿ: ದೂರದೃಷ್ಟಿಯ ನಗರ ನಿರ್ಮಾತೃ, ಕಟ್ಟಿಸಿದ ಕೋಟೆ, ಕೆರೆಗಳೆಲ್ಲಾ ಚಿರಸ್ಥಾಯಿ

ಕೆಂಪೇಗೌಡರು ಕಟ್ಟಿಸಿದ ಕೋಟೆಗಳು, ಕೆರೆಗಳು, ಪಾರಂಪರಿಕ ತಾಣಗಳೆಲ್ಲವೂ ಚಿರಸ್ಥಾಯಿಯಾಗಿ ಉಳಿಯಬೇಕೆನ್ನುವುದು ಸರ್ಕಾರದ ಸಂಕಲ್ಪ. 

Remembering the History of the Bengaluru on Occasion of Kempegowda Jayanti hls

ಇವತ್ತು ಕನ್ನಡ ನಾಡಿನ ಪಾಲಿಗೆ ಒಂದು ಶುಭದಿನ; ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲರೂ ಗೌರವ ಭಾವದಿಂದ ಸ್ಮರಿಸಬೇಕಾದ ದಿನ; ಆಡಳಿತಗಾರರು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಾದ ದಿನ. ಏಕೆಂದರೆ, ಬೆಂಗಳೂರಿನಂಥ ಮಹಾಮಹಿಮ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ 513ನೇ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ‘ಬೆಂಗಳೂರಿನ ಜನಕ’ರನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ತರುಣ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ.

ಬೆಂಗಳೂರಿಗೆ ಏನಿಲ್ಲವೆಂದರೂ 1,100 ವರ್ಷಗಳ ಇತಿಹಾಸವಿದೆ. ಕನ್ನಡ ನಾಡಿನ ಬಹುಭಾಗದಿಂದ ಹಿಡಿದು ತಮಿಳುನಾಡಿನ ಮದುರೆಯವರೆಗೂ ಆಳಿದ ಹೊಯ್ಸಳರ ದೊರೆ ಬಲ್ಲಾಳನ ಕಾಲದಿಂದಲೂ ಬೆಂಗಳೂರಿನ ಉಲ್ಲೇಖವು ನಮಗೆ ಅನೇಕ ಕಡೆಗಳಲ್ಲಿ ಸಿಗುತ್ತದೆ. ಬೆಂಗಳೂರಿಗೆ ತಾಗಿಕೊಂಡೇ ಇರುವ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಎರಡೂ ಬಲ್ಲಾಳನ ನೆನಪಿನಲ್ಲಿ ಇರುವ ಊರುಗಳೇ ಆಗಿವೆ. ಅಂದರೆ, ‘ಬಲ್ಲಾಳಪುರ’ ಎನ್ನುವ ಹೆಸರೇ ಹೀಗೆ ಅಪಭ್ರಂಶಗೊಂಡು ಚಾಲ್ತಿಯಲ್ಲಿವೆ. ಆದರೆ, ಆ ಕಾಲಕ್ಕೆ ಈ ಊರು ಬಹುಶಃ ಒಂದು ದೊಡ್ಡ ಹಳ್ಳಿಯಾಗಿದ್ದು, ಬಹುಶಃ ಏಳೆಂಟು ಚದರ ಮೈಲಿಗಳಲ್ಲಿ ವಿಸ್ತರಿಸಿಕೊಂಡಿತ್ತೆನಿಸುತ್ತದೆ.

18 ಬಗೆಯ ಕಸುಬುಗಳನ್ನು ಆಧರಿಸಿದ ಮೂಲ ಬೆಂಗಳೂರಿನ ‘ಪೇಟೆ’ಗಳನ್ನು (ಉದಾ: ದೊಡ್ಡಪೇಟೆ, ಚಿಕ್ಕಪೇಟೆ, ತಿಗಳರ ಪೇಟೆ, ಕುರುಬರ ಪೇಟೆ, ಅರಳೇಪೇಟೆ, ಬಳೇಪೇಟೆ, ತರಗುಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಕುಂಬಾರರ ಪೇಟೆ, ನಗರ್ತರ ಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಉಪ್ಪಾರಪೇಟೆ ಇತ್ಯಾದಿಗಳು) ನೋಡಿದರೆ, ಇದು ಗೊತ್ತಾಗುತ್ತದೆ.

ಈ ‘ಮೂಲ ಬೆಂಗಳೂರೇ’ ಕೆಂಪೇಗೌಡರು ಕಟ್ಟಿದ ಬೆಂಗಳೂರು ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರ ಆಧಾರದ ಮೇಲೆ, ನಂತರದ ಕಾಲದಲ್ಲಿ ಬಂದ ಆಳ್ವಿಕೆಗಾರರು ಬೆಂಗಳೂರನ್ನು ಪೇಟೆಯಾಗಿ, ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಳೆಸಿದ್ದಾರೆ. ಈಗಂತೂ ನಮ್ಮ ರಾಜಧಾನಿಯು ಈ ಹಿರಿಮೆಗಳನ್ನೆಲ್ಲ ದಾಟಿ, ಜಪಾನಿನಿಂದ ಹಿಡಿದು ಅಮೆರಿಕದವರೆಗೂ ಎಲ್ಲರಿಗೂ ಗೊತ್ತಿರುವ ಒಂದು ‘ಕಾಸ್ಮೋಪಾಲಿಟನ್‌ ಸಿಟಿ’ ಆಗಿ, ಹೆಮ್ಮರದಂತೆ ಬೆಳೆದಿದೆ.

ಪೇಟೆಯಿಂದ ಸಿಟಿಯವರೆಗೆ

ಬೆಂಗಳೂರು ಇಂದು ಐಟಿ ಸಿಟಿ, ಬಿಟಿ ಸಿಟಿ, ನವೋದ್ಯಮಗಳ ನಗರ, ಸಂಶೋಧನೆಗಳ ನಗರ, ಏರೋನಾಟಿಕ್ಸ್‌ ಸಿಟಿ.. ಇತ್ಯಾದಿಗಳೆಲ್ಲ ಆಗಿದೆ. ಜೊತೆಗೆ, ಉದ್ಯಾನ ನಗರಿ ಎಂಬ ಖ್ಯಾತಿಯನ್ನೂ ಉಳಿಸಿಕೊಂಡಿದೆ. ಇದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಕೇಂದ್ರವಾಗಿಯೂ ನಮ್ಮ ಬೆಂಗಳೂರು ಬೆಳೆದಿದೆ; ಇದಕ್ಕೆ ಪೂರಕವಾಗಿ ಇದು ನಿಜವಾದ ಅರ್ಥದಲ್ಲಿ ‘ನಾಲೆಡ್ಜ್‌ ಸಿಟಿ’ಯೂ ಆಗಿ ಬೆಳೆಯುತ್ತಿದೆ. ಒಟ್ಟಿನಲ್ಲಿ, ಇಲ್ಲಿ ಎಲ್ಲವೂ ಕೆಂಪೇಗೌಡರು ಹಾಕಿದ ಬುನಾದಿಯ ಮೇಲೆಯೇ ವಿಸ್ತರಣೆ ಆಗುತ್ತಿವೆ ಎನ್ನುವುದು ಹೆಮ್ಮೆಯ ಸಂಗತಿ.

ಹೀಗಾಗಿಯೇ ಬೆಂಗಳೂರು ಇಂದು ಬಹುದೊಡ್ಡ ಶಿಕ್ಷಣ ತಾಣವಾಗಿದೆ; ಒಂದೂ ಕಾಲು ಕೋಟಿ ಜನರ ಪಾಲಿಗೆ ಸೂರಾಗಿದೆ; ವಿದೇಶೀಯರ ಪಾಲಿಗೆ ಅಚ್ಚುಮೆಚ್ಚಿನ ‘ಡೆಸ್ಟಿನೇಶನ್‌’ ಆಗಿದೆ! ಕಲಿಕೆ, ಹೂಡಿಕೆ, ಕೈಗಾರಿಕೆ, ಆಡಳಿತ, ಸಂಸ್ಕೃತಿ, ಶಾಂತಿ, ಹಿತಕರ ಹವೆ- ಹೀಗೆ ಎಲ್ಲದಕ್ಕೂ ಬೆಂಗಳೂರು ಇನ್ನೊಂದು ಹೆಸರಾಗಿದೆ. ಇವೆಲ್ಲಕ್ಕೆ ಕಿರೀಟವಿಟ್ಟಂತೆ ಈಗ ಇದು ‘ದೇಶದ ಡೆಕಾಕಾರ್ನ್‌ ಕಂಪನಿಗಳ ರಾಜಧಾನಿ’ಯಾಗಿಯೂ ಹೊರಹೊಮ್ಮಿದೆ. ಐಟಿ-ಬಿಟಿ ಖಾತೆಗಳ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ನನಗೆ ದಿನನಿತ್ಯವೂ ಇದರ ಸಾಕ್ಷಾತ್‌ ದರ್ಶನವೇ ಆಗುತ್ತಿದೆ.

ಸಾವಿರ ಕೆರೆಗಳ ನಾಡು

ಕೆಂಪೇಗೌಡರು ಬೆಂಗಳೂರನ್ನು ತುಂಬಾ ವೈಜ್ಞಾನಿಕವಾದ ಒಂದು ನಗರವನ್ನಾಗಿ ಬೆಳೆಸಬೇಕೆಂಬ ಮಹದಾಕಾಂಕ್ಷೆಯನ್ನು ಹೊತ್ತಿದ್ದರು ಎನಿಸುತ್ತದೆ. ಏಕೆಂದರೆ, ಜನಜೀವನ ಮತ್ತು ನಾಗರಿಕತೆಗಳ ವಿಕಸನಕ್ಕೆ ನೀರಿನ ಆಸರೆ ಇರಬೇಕು. ಆದರೆ, ಕೆಂಪೇಗೌಡರು ಬೆಂಗಳೂರನ್ನು ಕಟ್ಟಿರುವುದು ನದಿ/ಸಮುದ್ರಗಳೇನೂ ಇಲ್ಲದಂತಹ, ರಕ್ಷಣೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಒಂದು ಎತ್ತರದ ಸ್ಥಳದಲ್ಲಿ. ಇಂತಹ ಜಾಗದಲ್ಲಿ ಈ ನಗರವನ್ನು ಕಟ್ಟಿದ ಕೆಂಪೇಗೌಡರು, ಬೆಂಗಳೂರಿನ ತುಂಬೆಲ್ಲ ಕೆರೆಗಳನ್ನು ಕಟ್ಟುತ್ತ, ಇದನ್ನು ‘ಸಾವಿರ ಕೆರೆಗಳ ನಾಡ’ನ್ನಾಗಿ ಮಾಡಿದರು. ಇದಕ್ಕೆ ಉದಾಹರಣೆಯಾಗಿ, ಧರ್ಮಾಂಬುಧಿ, ಕೆಂಪಾಂಬುಧಿ, ಸಂಪಂಗಿರಾಮನ ಕೆರೆ, ಚೆನ್ನಮ್ಮನ ಕೆರೆ, ಹಲಸೂರು ಕೆರೆ, ಮತ್ತೀಕೆರೆ ಇತ್ಯಾದಿಗಳನ್ನು ಕಟ್ಟಿದರು.

ಈ ಮೂಲಕ ಕೃಷಿ ಚಟುವಟಿಕೆಗಳಿಗೆ ಬೇಕಾದ ನೀರು ಮತ್ತು ಕುಡಿಯುವ ನೀರು- ಹೀಗೆ ಎರಡು ಅಗತ್ಯಗಳೂ ಸುಸೂತ್ರವಾಗಿ ಪೂರೈಕೆಯಾಗುವಂತೆ ಅವರು ನೋಡಿಕೊಂಡರು. ಒಬ್ಬ ಜನಪರ ಆಡಳಿತಗಾರನಿಗೆ ಇರಬೇಕಾಗಿದ್ದ ದೂರದರ್ಶಿತ್ವವನ್ನು ಹೊಂದಿದ್ದ ಕೆಂಪೇಗೌಡರು ಈ ವಿಷಯದಲ್ಲಿ ಇಂದಿಗೂ ನಮಗೆ ಮೇಲ್ಪಂಕ್ತಿಯಾಗಿದ್ದಾರೆ. ಇದರ ಜತೆಯಲ್ಲೇ ಅವರು ಗವಿ ಗಂಗಾಧರೇಶ್ವರ ದೇವಸ್ಥಾನ, ಬಸವೇಶ್ವರ ದೇವಾಲಯ, ದೊಡ್ಡ ಗಣೇಶನ ದೇಗುಲ, ಹನುಮಂತನ ಗುಡಿ ಮತ್ತು ಚೆನ್ನಿಗರಾಯಸ್ವಾಮಿಯ ದೇವಸ್ಥಾನಗಳನ್ನು ಕಟ್ಟಿಸಿ, ಬೆಂಗಳೂರಿಗೆ ಸಂಸ್ಕೃತಿಯ ಮೆರುಗನ್ನೂ ತುಂಬಿದರು. ಈ ಸಂಸ್ಕೃತಿ ನಮ್ಮ ರಾಜಧಾನಿಯಲ್ಲಿ ಇಂದಿಗೂ ಮುಂದುವರಿದಿದೆ.

ಕೆಂಪೇಗೌಡ ಪ್ರತಿಮೆ, ಥೀಮ್‌ ಪಾರ್ಕ್

ಇಂತಹ ಕೆಂಪೇಗೌಡರನ್ನು ಅರ್ಥಪೂರ್ಣವಾಗಿ ಮುಂದುವರಿಸಿ ಕೊಂಡು ಹೋಗಬೇಕು ಎನ್ನುವುದು ನಮ್ಮ ಈಗಿನ ಸರಕಾರದ ಆಸ್ಥೆಯಾಗಿದೆ. ಇದಕ್ಕೆ ತಕ್ಕಂತೆ, ದೇವನಹಳ್ಳಿಯ ಬಳಿ ಇರುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಬೃಹತ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿದ್ದು, ಇದರ ಲೋಕಾರ್ಪಣೆ ಸದ್ಯದಲ್ಲೇ ಆಗಲಿದೆ. ದೆಹಲಿಯ ಖ್ಯಾತ ಶಿಲ್ಪಿ ಶ್ರೀರಾಮ್‌ ಸುತರ್‌ ಅವರ ಕೈಯಲ್ಲಿ ಮೈದಾಳಿರುವ ಈ ಪ್ರತಿಮೆಗೆ 200 ಟನ್‌ ಲೋಹವನ್ನು ಬಳಸಲಾಗಿದೆ. ಇದರ ಜತೆಯಲ್ಲೇ, ಇದೇ ಆವರಣದಲ್ಲಿ ‘ಕೆಂಪೇಗೌಡ ಥೀಮ್‌ ಪಾರ್ಕ್’ ಕೂಡ ಅಸ್ತಿತ್ವಕ್ಕೆ ಬರುತ್ತಿದೆ. ಮುಂಬರುವ ದಿನಗಳಲ್ಲಿ ಇವು ಬೆಂಗಳೂರಿನ ಆಕರ್ಷಕ ತಾಣಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ನಮ್ಮ ಸರ್ಕಾರ ಮಾಡುತ್ತಿರುವ ವೆಚ್ಚ 64 ಕೋಟಿ ರುಪಾಯಿ!

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ

ಕೆಂಪೇಗೌಡರಿಗೆ ಸಂಬಂಧಿಸಿದ 46 ತಾಣಗಳನ್ನು ಅಭಿವೃದ್ಧಿಪಡಿಸಲು ‘ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರ’ವನ್ನೇ ರಚಿಸಲಾಗಿದ್ದು, ಇದಕ್ಕೆ ಅಗತ್ಯ ಹಣಕಾಸಿನ ಅನುದಾನ ಒದಗಿಸಲಾಗುತ್ತಿದೆ. ಇದರಡಿಯಲ್ಲಿ ಮಾಗಡಿ ತಾಲ್ಲೂಕಿನಲ್ಲಿರುವ ಕೆಂಪೇಗೌಡರ ಸಮಾಧಿ ಸ್ಥಳವಾದ ಕೆಂಪಾಪುರವನ್ನು ಸ್ಥಳಾಂತರಿಸಿ, ಅಲ್ಲಿ ‘ವೀರಸಮಾಧಿ ಅಭಿವೃದ್ಧಿ’ಯನ್ನು ಕೋಟ್ಯಂತರ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಭೂಸ್ವಾಧೀನ ಕಾರ್ಯ ಈಗಾಗಲೇ ಅಂತಿಮ ಹಂತದಲ್ಲಿ ಪ್ರಗತಿಯಲ್ಲಿದೆ.

ಹಾಗೆಯೇ, ಮಾಗಡಿಯಲ್ಲಿ ಕೆಂಪೇಗೌಡರು ಕಟ್ಟಿದ ಕೋಟೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಒಟ್ಟಿನಲ್ಲಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಕೆಂಪೇಗೌಡರಿಗೆ ಸಂಬಂಧಿಸಿದ ಸ್ಥಳಗಳನ್ನೆಲ್ಲ ‘ಮಾಗಡಿ, ಬೆಂಗಳೂರು ಮತ್ತು ನಂದಿ ಸಕ್ರ್ಯೂಟ್‌ ಗಳನ್ನಾಗಿ’ ವಿಂಗಡಿಸಿ, ಆಕರ್ಷಕ ಸ್ಥಳಗಳನ್ನಾಗಿ ಮಾಡಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗಳೂ ಗರಿಗೆದರುತ್ತವೆ. ಈಗಾಗಲೇ ಈ ಪೈಕಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ‘ಐಡೆಕ್‌’ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.

ಒಟ್ಟಿನಲ್ಲಿ, ಕೆಂಪೇಗೌಡರು ಕಟ್ಟಿಸಿದ ಕೋಟೆಗಳು, ಕೆರೆಗಳು, ಪಾರಂಪರಿಕ ತಾಣಗಳೆಲ್ಲವೂ ಚಿರಸ್ಥಾಯಿಯಾಗಿ ಉಳಿಯಬೇಕೆನ್ನುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಮಿಗಿಲಾಗಿ, ಕೆಂಪೇಗೌಡರ ವಂಶಕ್ಕೆ ಸೇರಿದ ಇತಿಹಾಸ, ಕಲೆ, ಸಾಹಿತ್ಯ, ವಾಸ್ತುಶಿಲ್ಪ, ನೀರಾವರಿ, ಯೋಜನೆಗಳು ಇತ್ಯಾದಿಗಳ ಬಗ್ಗೆ ಆಯಾ ಕ್ಷೇತ್ರಗಳ ತಜ್ಞರಿಂದ ಸಮಗ್ರ ಮತ್ತು ತಲಸ್ಪರ್ಶಿ ಅಧ್ಯಯನಕ್ಕೆ ಬೇಕಾದ ಸೌಲಭ್ಯವನ್ನು ಮಾಡಿಕೊಡುವುದೂ ಸರ್ಕಾರದ ಚಿಂತನೆಯಲ್ಲಿದೆ.

ಕೆಂಪೇಗೌಡ ಅಂ.ರಾ. ಪ್ರಶಸ್ತಿ

ಕೆಂಪೇಗೌಡರ ಗೌರವಾರ್ಥವಾಗಿ, ಈ ವರ್ಷದಿಂದಲೇ ನಾನಾ ಕ್ಷೇತ್ರಗಳ ಅನುಪಮ ಸಾಧಕರಿಗೆ ‘ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಸರ್ಕಾರ ಆರಂಭಿಸಿದೆ. ಮೊದಲ ವರ್ಷದ ಈ ಪ್ರಶಸ್ತಿಗೆ ಬೆಂಗಳೂರು ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ ಎಸ್‌.ಎಂ.ಕೃಷ್ಣ, ಇಸ್ಫೋಸಿಸ್‌ ಕಂಪನಿಯನ್ನು ಸ್ಥಾಪಿಸುವ ಮೂಲಕ ನಮ್ಮ ನಗರಕ್ಕೆ ‘ಭಾರತದ ಸಿಲಿಕಾನ್‌ ಸಿಟಿ’ ಎನ್ನುವ ಶ್ರೇಯಸ್ಸನ್ನು ತಂದಿತ್ತ ಎನ್‌.ಆರ್‌.ನಾರಾಯಣಮೂರ್ತಿ ಮತ್ತು ಬ್ಯಾಡ್ಮಿಂಟನ್‌ ತಾರೆ ಪ್ರಕಾಶ್‌ ಪಡುಕೋಣೆ ಅವರನ್ನು ತಜ್ಞರ ಸಮಿತಿಯು ಆರಿಸಿದೆ. ಇಂದು ನಡೆಯಲಿರುವ ‘ಕೆಂಪೇಗೌಡರ ಜಯಂತಿ’ಯಲ್ಲಿ ಈ ಮೂವರಿಗೂ ತಲಾ 5 ಲಕ್ಷ ರು. ನಗದಿನೊಂದಿಗೆ ಈ ಪ್ರತಿಷ್ಠಿತ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

ಕೆಂಪೇಗೌಡರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಹೀಗೆ ಹಲವು ಅರ್ಥಪೂರ್ಣ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು ಇಂದು ಗಳಿಸಿರುವ ಅತಿಶಯವಾದ ಕೀರ್ತಿಗೆ ಕೆಂಪೇಗೌಡರೇ ಮೂಲಕಾರಣ! ಅವರು ಹಾಕಿಕೊಟ್ಟಿರುವ ಹಾದಿಯಲ್ಲೇ ನಾವೂ ಮುಂದಡಿ ಇಡುತ್ತಿದ್ದೇವೆ ಎಂದು ನಾನು ನಮ್ರವಾಗಿ ಹೇಳಬಯಸುತ್ತೇನೆ. ನಾಡಿನ ಸಮಸ್ತ ಜನತೆಗೂ ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯಗಳು!

-  ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಉನ್ನತ ಶಿಕ್ಷಣ, ಐಟಿ-ಬಿಟಿ, ಕೌಶಲ್ಯಾಭಿವೃದ್ಧಿ ಸಚಿವ

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ

Latest Videos
Follow Us:
Download App:
  • android
  • ios