
ರಾಮನಗರ [ಜ.03] : ಏಸು ಪ್ರತಿಮೆ ಸ್ಥಾಪನೆಯಿಂದಾಗಿ ವಿವಾದದ ಕೇಂದ್ರ ಬಿಂದುವಾಗಿರುವ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆ ಬಳಿಯ ಕಪಾಲಬೆಟ್ಟದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಪಾಲಬೆಟ್ಟಅಭಿವೃದ್ಧಿ ಟ್ರಸ್ಟ್ ಬೆಟ್ಟದ ಮೇಲೆ ಏಸು ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದಿಂದ 50 ಮೀಟರ್ ದೂರದಲ್ಲಿಯೇ ಕಂಬದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ.
ಪ್ರತಿಮೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಬೆಟ್ಟಕ್ಕೆ ಭೇಟಿ ನೀಡುವವರು ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಅಲ್ಲದೆ, ಬೆಟ್ಟದ ಮೇಲಕ್ಕೆ ಹಾದು ಹೋಗುವ ರಸ್ತೆಯನ್ನು ಅಗೆದು ಗುಂಡಿ ನಿರ್ಮಿಸಿರುವುದರಿಂದ ವಾಹನಗಳನ್ನು ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಅಗೆದಿರುವುದರಿಂದ ಬೆಟ್ಟದ ಮೇಲೆ ತೆರಳಲು ಸುಮಾರು ಎರಡು ಕಿ.ಮೀ. ನಡೆಯಬೇಕು.
ಸರ್ಕಾರಿ ಗೋಮಾಳದಲ್ಲಿ ಏಸು ಪ್ರತಿಮೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಆಗಿಂದಾಗ್ಗೆ ಬೆಟ್ಟಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಹಾಗಾಗಿ ಬೆಟ್ಟದ ಮೇಲೆ ಪೊಲೀಸ್ ಕಾವಲು ಹಾಕಲಾಗಿದೆ.
ಯೇಸು ಕ್ರಿಸ್ತನ ಪೋಟೋಕ್ಕೆ ಡಿಕೆಶಿ ಮುಖ.. ಇದೆಂಥಾ ಕುಚೇಷ್ಟೆ!...
ಕನಕಪುರ ನೂತನ ತಹಸೀಲ್ದಾರ್ ಆಗಿ ವರ್ಷಾ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಮೂರು ನಾಲ್ಕು ದಿನದೊಳಗೆ ಜಿಲ್ಲಾಡಳಿತಕ್ಕೆ ವರದಿ ರವಾನಿಸಲಿದ್ದು, ಆನಂತರ ಜಿಲ್ಲಾಡಳಿತ ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.