ರೋಷನ್‌ ಬೇಗ್‌ಗೆ ಜೈಲಾ?, ಬೇಲಾ? ಇಂದು ನಿರ್ಧಾರ

By Kannadaprabha NewsFirst Published Dec 5, 2020, 7:22 AM IST
Highlights

ರೋಷನ್‌ ಬೇಗ್‌ಗೆ ಇಂದು ಜಾಮೀನು ಸಿಗುವುದೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ| ಒಂದು ವೇಳೆ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿ ತಿಸ್ಕರಿಸಿದರೆ ಹೈಕೋರ್ಟ್‌ ಮೊರೆ ಹೋಗಬೇಕಾಗುತ್ತದೆ| 

ಬೆಂಗಳೂರು(ಡಿ.05): ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯವು ಇಂದು(ಶನಿವಾರ)ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.

ಪ್ರಕರಣ ಸಂಬಂಧ ಜಾಮೀನು ನೀಡುವಂತೆ ಕೋರಿ ರೋಷನ್‌ಬೇಗ್‌ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರ ಪೂರ್ಣಗೊಳಿಸಿತು. ಶನಿವಾರ ಜಾಮೀನು ಸಿಗುವುದೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ಒಂದು ವೇಳೆ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿಸ್ಕರಿಸಿದರೆ ಹೈಕೋರ್ಟ್‌ ಮೊರೆ ಹೋಗಬೇಕಾಗುತ್ತದೆ.

ರೋಷನ್‌ ಬೇಗ್‌ ಮತ್ತೆ ಸಿಬಿಐ ವಶಕ್ಕೆ

ರೋಷನ್‌ ಬೇಗ್‌ ಪರ ವಕೀಲರು ವಾದ ಮಂಡಿಸಿ, ಸಿಬಿಐ ತನಿಖೆಗೆ ನಮ್ಮ ಕಕ್ಷೀದಾರರು ಸ್ಪಂದಿಸಿದ್ದಾರೆ. ಯಾವಾಗ ಬೇಕಾದರೂ ವಿಚಾರಣೆ ಕರೆದರೆ ಹೋಗಲು ಸಿದ್ಧರಿದ್ದಾರೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಹುರುಳಿಲ್ಲ. ಈಗಾಗಲೇ 36 ಆರೋಪಿಗಳ ಪೈಕಿ 35 ಮಂದಿಗೆ ಜಾಮೀನು ಲಭ್ಯವಾಗಿದೆ. ಅಲ್ಲದೇ, ರೋಷನ್‌ ಬೇಗ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ವಯೋ ಸಹಜ ಸಮಸ್ಯೆ ಇದೆ. ನ್ಯಾಯಾಲಯವು ಯಾವುದೇ ಷರತ್ತು ವಿಧಿಸಿದರೂ ಪಾಲನೆ ಮಾಡಲಾಗುವುದು. ಹೀಗಾಗಿ ಜಾಮೀನು ನೀಡಬೇಕು ಎಂದು ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ವಿಶೇಷ ಅಭಿಯೋಜಕರು, ಪ್ರಕರಣದಲ್ಲಿ ಆರೋಪಿಯಾಗಿರುವ ರೋಷನ್‌ ಬೇಗ್‌ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಜಾಮೀನಿನ ಮೇಲೆ ಹೊರಬಂದರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಕೋಟ್ಯಂತರ ರು. ವಂಚನೆ ಮಾಡಿರುವ ಗಂಭೀರ ಆರೋಪ ಇರುವ ಕಾರಣ ಯಾವುದೇ ಕಾರಣಕ್ಕು ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ವಾದ ಮತ್ತು ಪ್ರತಿವಾದ ಆಲಿಸಿದ ಸಿಬಿಐ ನ್ಯಾಯಾಲಯವು ಶನಿವಾರಕ್ಕೆ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.
 

click me!