ಪರೇಶ್ ಮೇಸ್ತಾ ಸಾವು ಪ್ರಕರಣ: ಸಿಬಿಐ "ಬಿ" ರಿಪೋರ್ಟ್ ಸಲ್ಲಿಕೆ, ಬಿಜೆಪಿ ಪಾಲಿನ ಅಸ್ತ್ರ ಇದೀಗ ಕಾಂಗ್ರೆಸ್ ಕೈಗೆ..!

By Girish Goudar  |  First Published Oct 4, 2022, 10:30 PM IST

ಪರೇಶ್ ಸಾವು ಕೊಲೆಯಲ್ಲ, ಆಕಸ್ಮಿಕವೆಂದು ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಕೆ, ಸಿಬಿಐ ರಿಪೋರ್ಟ್‌ ಹಾಗೂ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪರೇಶ್ ಪೋಷಕರು


ವರದಿ: ಭರತ್‌ ರಾಜ್ ಕಲ್ಲಡ್ಕ‌, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಅ.04):  ರಾಜ್ಯದಲ್ಲೇ ದೊಡ್ಡ ಸದ್ದು ಮಾಡಿದ್ದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಿಬಿಐ ರಿಪೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ. ಅನ್ಯ ಕೋಮಿನವರು ಪರೇಶ್ ಮೇಸ್ತಾನನ್ನು ಕೊಲೆ‌ ಮಾಡಿ ಕೆರೆಯಲ್ಲಿ ಬಿಸಾಕಿ ಹೋಗಿದ್ದಾರೆಂದು ಬಿಜೆಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಆರೋಪ ಮಾಡಿದ್ದವು. ಆದರೆ,‌ ತನಿಖೆ ನಡೆಸಿದ ಸಿಬಿಐ ಇದು ಕೊಲೆಯಲ್ಲ, ಆಕಸ್ಮಿಕ ಸಾವೆಂದು ನ್ಯಾಯಾಲಯಕ್ಕೆ "ಬಿ" ರಿಪೋರ್ಟ್ ಸಲ್ಲಿಸಿದ್ದು , ಇದು ಪರೇಶ್ ಮೇಸ್ತಾ ಕುಟುಂಬಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ...

Tap to resize

Latest Videos

ಪರೇಶ್ ಮೇಸ್ತಾ ಪ್ರಕರಣಕ್ಕೆ ಸಿಬಿಐ ರಿಪೋರ್ಟ್‌ನಿಂದ ಬಿಗ್ ಟ್ವಿಸ್ಟ್‌

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಪರೇಶ್ ಮೇಸ್ತಾ ಸಾವು ಪ್ರಕರಣ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ ಕೂಡಾ ಸಾಕಷ್ಟು ಸದ್ದು ಮಾಡಿತ್ತು. 2017ರ ಡಿಸೆಂಬರ್ ವೇಳೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊನ್ನಾವರದ ಗುಡ್ ಲಕ್ ವೃತ್ತದಲ್ಲಿ ಕೋಮ ಗಲಭೆ ನಡೆದಿತ್ತು. ಈ ವೇಳೆ ಪಟ್ಟಣದ ತುಳುಸಿ ನಗರದ ಪರೇಶ್ ಮೇಸ್ತಾ ಎನ್ನುವ ಮೀನುಗಾರ ಯುವಕ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು. ಅನ್ಯ ಕೋಮಿನವರು ಪರೇಶ್ ಮೇಸ್ತಾನನ್ನ ಹೊಡೆದು ಕೊಲೆ ಮಾಡಿ ಕೆರೆಗೆ ಶವವನ್ನು ಎಸೆದಿದ್ದಾರೆಂದು ಆರೋಪಿಸಲಾಗಿತ್ತು. ಕಾಂಗ್ರೆಸ್ ಸರ್ಕಾರವೇ ಈ ಕೊಲೆಗೆ ನೇರ ಕಾರಣ ಎಂದು ಬಿಜೆಪಿಗರು ರಸ್ತೆಗೆ ಇಳಿದು ಹೋರಾಟ ನಡೆಸಿದ್ದರು. ಜಿಲ್ಲೆಯ ಕುಮಟಾ, ಹೊನ್ನಾವರ, ಕಾರವಾರ ಹಾಗೂ ಶಿರಸಿಯಲ್ಲಿ ಪ್ರತಿಭಟನೆ ವೇಳೆ ಗಲಭೆಗಳು ಕೂಡಾ ನಡೆದಿದ್ದು, ಐಜಿಪಿಯ ವಾಹನಕ್ಕೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದರು. ಸಿಒಡಿಗೆ ತನಿಖಾ ಜವಾಬ್ದಾರಿ ನೀಡಬೇಕೆಂದಿದ್ದ ಸರಕಾರ‌ ಜ‌ನರ ಒತ್ತಾಯದ ಮೇರೆಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸುದೀರ್ಘ ನಾಲ್ಕೂವರೆ ವರ್ಷ ತನಿಖೆ ನಡೆಸಿದ ಸಿಬಿಐ ಇದೀಗ ಪ್ರಕರಣಕ್ಕೆ ಬಿ ರಿಪೋರ್ಟ್ ನೀಡಿ ಹೊನ್ನಾವರದ ನ್ಯಾಯಾಲಯಕ್ಕೆ ಸಲ್ಲಿಸಿದೆ.‌ ಈ ರಿಪೋರ್ಟ್‌ನಲ್ಲಿ ಪರೇಶ್ ಮೇಸ್ತಾ ಸಾವು ಕೊಲೆಯಲ್ಲ, ಆಕಸ್ಮಿಕ ಸಾವು. ಕೊಲೆಯಾದ ಯಾವುದೇ ಕುರುಹುಗಳಿಲ್ಲ. ನೀರಿನಲ್ಲಿ ಮುಳುಗಿ ಪರೇಶ್ ಮೇಸ್ತಾ ಸಾವನ್ನಪ್ಪಿದ್ದಾನೆ ಎಂದು ವರದಿ ನೀಡಿದೆ. ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ವಿರುದ್ಧ ಪರೇಶ್ ಮೇಸ್ತಾ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷದವರು ನಮ್ಮನ್ನು ಚುನಾವಣೆಗೆ ಬಳಸಿಕೊಂಡರೇ ಹೊರತು ಯಾವ ಸರಕಾರವೂ ನಮಗೆ ಆರ್ಥಿಕವಾಗಿಯೂ ಸಹಾಯ ಮಾಡಿಲ್ಲ. ಪ್ರಕರಣ ಸಂಬಂಧಿಸಿ ಎನ್ಐಎ ತನಿಖೆಗೆ ಆಗ್ರಹಿಸಲು ಚಿಂತಿಸುತ್ತೇನೆ ಅಂತ  ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಿಳಿಸಿದ್ದಾರೆ. 

ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲ, ಪ್ರಚಾರಕ್ಕಷ್ಟೇ ಬಳಸಿದ್ದಾರೆ: ಪರೇಶ್‌ ಮೇಸ್ತಾ ತಂದೆ ಅಸಮಾಧಾನ

ಅಂದಹಾಗೆ, ಹೊನ್ನಾವರ ಪಟ್ಟಣದಲ್ಲಿ ಆಟೋ ಹಾಗೂ ಬೈಕ್ ನಡುವೆ ನಡೆದಿದ್ದ ಅಪಘಾತ ಕೋಮು ಗಲಭೆಗೆ ಕಾರಣವಾಗಿತ್ತು. ಇದೇ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ, ಶವವಾಗಿ ಪತ್ತೆಯಾಗಿದ್ದ. ಪ್ರಕರಣ ಸಂಬಂಧಿಸಿ ನಾಲ್ಕೂವರೆ ವರ್ಷಗಳ ಕಾಲ ಸುದೀರ್ಘ ತನಿಖೆಯ ವೇಳೆ ಸುಮಾರು 234 ಜನರನ್ನು ವಿಚಾರಣೆ ನಡೆಸಲಾಗಿತ್ತು. ಇಷ್ಟೆಲ್ಲಾ ಆದ ಬಳಿಕ‌ ಅಂತಿಮವಾಗಿ ಇದು ಕೊಲೆಯಲ್ಲ ಸಹಜ ಸಾವು ಎಂದು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಹೊನ್ನಾವರ ನ್ಯಾಯಾಲಯ ನವೆಂಬರ್ 16 ರಂದು ಈ ಬಗ್ಗೆ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಲಿದೆ. ಇನ್ನು ಈ ಬಗ್ಗೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡರು, ಬಿಜೆಪಿ ಶವದ ಮೇಲೆ ರಾಜಕೀಯ ಮಾಡಿದ್ದು, ಪರೇಶನ ಸಾವನ್ನೇ ಬಳಸಿಕೊಂಡು ಬಿಜೆಪಿಯವರು ಅಧಿಕಾರಕ್ಕೆ ಬಂದರು. ಸಿದ್ಧರಾಮಯ್ಯರನ್ನು ಮೊದಲ ಆರೋಪಿ ಎಂದು ಹೇಳ್ತಿದ್ರು. ಆದರೆ, ಪ್ರಕರಣ ಮೊದಲ ಆರೋಪಿ ಸಂಸದ ಅನಂತ ಕುಮಾರ್ ಹೆಗಡೆ, ದ್ವಿತೀಯ‌ ಶೋಭಾ ಕರಂದ್ಲಾಜೆ, ಮೂರನೇಯದ್ದು ನಾಗರಾಜ ನಾಯ್ಕ್. ಬಿಜೆಪಿಯವರು ಮಾಡಿದ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆ ಯಾಚಿಸಬೇಕೆಂದು ಕುಮಟಾ ಕ್ಷೇತ್ರದ ಮಾಜಿ ಶಾಸಕರು ಶಾರದಾ ಶೆಟ್ಟಿ ಹಾಗೂ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ ಒತ್ತಾಯಿಸಿದ್ದಾರೆ.

ಕಳೆದ ಚುನಾವಣೆಯ ವೇಳೆ ಪರೇಶ್ ಮೇಸ್ತಾ ಸಾವಿನ ಪ್ರಕರಣ ಬಿಜೆಪಿ ಮುಖಂಡರಿಗೆ ಅಧಿಕಾರಕ್ಕೆ ಬರಲು ವರದಾನವಾಗಿತ್ತು. ಕರಾವಳಿಯಲ್ಲಿ ಜನಜಾಗೃತಿ ಸಮಾವೇಶ ನಡೆಸಿ ಬಿಜೆಪಿ ಸಂಘಟನೆಯನ್ನು ಬಲಿಷ್ಟ ಮಾಡಿಕೊಂಡಿತ್ತು. ಈ ವಿಚಾರವೇ ಒಂದು ಹಂತಕ್ಕೆ ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿಗೂ ಕಾರಣವಾಗಿತ್ತು. ಆದರೆ, ಇದೇ ಪ್ರಕರಣ ಇದೀಗ ಬಿ ರಿಪೋರ್ಟ್ ಕಂಡಿರುವುದು ಬಿಜೆಪಿಗೆ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಲು ಮುಂದಾಗಿದ್ದು, ಬಿಜೆಪಿ ವಿರುದ್ಧ ಬಳಸಲು ಸರ್ವ ವ್ಯವಸ್ಥೆಯನ್ನೂ ಮಾಡಿಕೊಂಡಿದೆ.  
 

click me!