ರಾಷ್ಟ್ರೀಯ ಹೆದ್ದಾರಿ ಹೆದ್ದಾರಿಯಲ್ಲಿ ಸಂಚಾರ ಮಾಡುವಾಗ ಕನ್ಫ್ಯೂಸ್ ಆಗ್ತಿರೋ ವಾಹನ ಸವಾರರು
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಅ.04): ಅದೊಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ್ರೆ ಅಪಘಾತಗಳ ಸಂಖ್ಯೆ ಕ್ಷೀಣಿಸಲಿದೆ. ವ್ಯಾಪಾರ ವಹಿವಾಟಿಗೆ ಸಹಕಾರಿಯಾಗಲಿದೆ ಎಂಬ ಮಾತಿತ್ತು. ಆದ್ರೆ ಈ ಹೈವೆ ಉದ್ಘಾಟನೆ ಆಗಿದ್ದು ವಾಹನ ಸವಾರರಿಗೆ ಭಾರೀ ತಲೆ ನೋವೆನಿಸಿದೆ. ಅಷ್ಟಕ್ಕೂ ಅಲ್ಲಾಗಿರುವ ಸಮಸ್ಯೆ ಆದ್ರೂ ಏನಂತೀರ!. ಹಾಗಾದ್ರೆ ಈ ಸ್ಟೋರಿ ನೋಡಿ...
undefined
ನೋಡಿ ಹೀಗೆ ಆಕರ್ಷಕವಾಗಿ ಕಾಣ್ತಿರುವ ಹೆದ್ದಾರಿ. ಒಂದೇ ರಸ್ತೆಯಿಂದ ಕವಲೊಡೆದು ವಿವಿದೆಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗದ ಹೊರವಲಯದಲ್ಲಿ ನಿರ್ಮಾಣವಾಗಿರುವ ರಿಂಗ್ ರೋಡ್ ಖ್ಯಾತಿಯ ಎರಡನೇ ಹೆದ್ದಾರಿ. ಹೌದು ,ಈ ರಸ್ತೆ ನಿರ್ಮಾಣವಾದ್ರೆ ಬೆಂಗಳೂರಿನಿಂದ ದಾವಣಗೆರೆ ಹಾಗೂ ಮಂಗಳೂರಿಗೆ ತೆರಳುವ ಪ್ರಯಾಣಿಕರು ಹಾಗು ಹೂವು, ಹಣ್ಣು, ತರಕಾರಿಯನ್ನು ವೇಗವಾಗಿ ರವಾನಿಸಲು ಸಹಕಾರಿಯಾಗಲಿದೆ ಎಂಬ ಮಾತಿದೆ. ಆದ್ರೆ ಈ ರಸ್ತೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿ ಉದ್ಘಾಟನೆ ಆಗಿದ್ದು, ಬೃಹತ್ ವಾಹನಗಳು ಸೇರಿದಂತೆ ಇತರೆ ವಾಹನಗಳು ಈ ರಸ್ತೆಯಲ್ಲಿ ತಮ್ಮ ಓಡಾಟ ಆರಂಭಿಸಿವೆ. ಹೀಗಾಗಿ ಅವಘಡಗಳ ಭೀತಿ ಜನರಲ್ಲಿ ಶುರುವಾಗಿದೆ. ಅಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕಗಳನ್ನು ಸರಿಯಾಗಿ ಅಳವಡಿಸಿಲ್ಲ ಹಾಗೂ ಯಾವ ರಸ್ತೆ ಎಲ್ಲಿಗೆ ಲಿಂಕ್ ಆಗಲಿದೆ ಎಂಬ ಮಾಹಿತಿ ಸಹ ಪ್ರದರ್ಶಿಸಿಲ್ಲ. ಹೀಗಾಗಿ ಜನರು ಸೂಚನೆಯಿಲ್ಲದೇ ಪರದಾಡುವಂತಾಗಿದೆ. ಅದರಲ್ಲೂ ದಾವಣಗೆರೆ ಆಸ್ಪತ್ರೆಗೆ ತೆರಳುವ ಚಿತ್ರದುರ್ಗದ ರೋಗಿಗಳು ಹರಸಾಹಸ ಪಡುವಂತಾಗಿದೆ ಎಂದು ಕೋಟೆನಾಡಿನ ಸ್ಥಳೀಯರಾದ ಷಫಿವುಲ್ಲಾ ಆರೋಪಿಸಿದ್ದಾರೆ.
CHITRADURGA: ಅಕ್ರಮ ಲೇಔಟ್ ಕಾಮಗಾರಿಯಿಂದ ಗುಡ್ಡ ಕುಸಿಯುವ ಭೀತಿಯಲ್ಲಿ ಸ್ಥಳೀಯರು!
ಇನ್ನು ಈ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಕಾಮಗಾರಿ ಮಾಡಿರುವ ಖಾಸಗಿ ಕಂಪನಿ ನಿರ್ಲಕ್ಷ್ಯ ವಹಿಸಿದೆ. ಅಲ್ಲದೇ ಯೋಜನಾ ಬದ್ಧವಾಗಿ ಸರ್ಕಾರದ ಸೂಚನೆಯಂತೆ ಕಾಮಗಾರಿ ಮಾಡದೇ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಿ, ಮಾಹಿತಿ ನೀಡಬೇಕು. ಇಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಮುಂದಿನ ಸಮಸ್ಯೆಗಳಿಗೆ ಅಧಿಕಾರಿಗಳೇ ಹೊಣೆ ಹೊರಬೇಕಾಗ್ತದೆ ಎಂದು ಚಿತ್ರದುರ್ಗದ ಹೋರಾಟಗಾರರಾದ ಪ್ರತಾಪ್ ಜೋಗಿ ಎಚ್ಚರಿಸಿದ್ದಾರೆ.
ಒಟ್ಟಾರೆ ಕೋಟೆನಾಡಲ್ಲಿ ಹೊಸ ಹೆದ್ದಾರಿ ಆಗಿ ವರ್ಷಗಳು ಕಳೆದ್ವು ಎಂಬ ಖುಷಿ ಒಂದೆಡೆಯಾದ್ರೆ, ಸೂಚನಾ ಫಲಕ ಅಳವಡಿಸದೇ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿರೋದ್ರಿಂದ ಅಪಘಾತಗಳ ಭೀತಿ ಜನರನ್ನು ಕಾಡುತ್ತಿದೆ ಮತ್ತೊಂದೆಡೆ ಆಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತು ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.