Kodagu: ಕಾವೇರಿ ನೀರು ಕ್ಷೀಣದೊಂದಿಗೆ ನದಿಯ ಬಣ್ಣವೂ ಬದಲು!

By Kannadaprabha News  |  First Published Apr 9, 2023, 8:26 AM IST
  •  ಕಾವೇರಿ ನೀರು ಕ್ಷೀಣದೊಂದಿಗೆ ನದಿಯ ಬಣ್ಣವೂ ಬದಲು...
  • ಕುಶಾಲನಗರ ಪಟ್ಟಣ ಸೇರಿದಂತೆ ವಿವಿಧೆಡೆ ಕಲುಷಿತ ತ್ಯಾಜ್ಯ ಕಾವೇರಿ ಒಡಲಿಗೆ
  • ಅನುಷ್ಠಾನಗೊಳ್ಳದ ಒಳಚರಂಡಿ ಯೋಜನೆ

ಕೀರ್ತನ

ಕುಶಾಲನಗರ (ಏ.9) : ಬೇಸಿಗೆಯ ಬಿರು ಬಿಸಿಲಿನ ನಡುವೆ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಳ್ಳುತ್ತಿರುವುದು ಒಂದೆಡೆಯಾದರೆ, ನದಿ ತಟದ ಪಟ್ಟಣ ಗ್ರಾಮಗಳಿಂದ ನಿತ್ಯ ಹರಿಯುವ ಕಲುಷಿತ ತ್ಯಾಜ್ಯಗಳಿಂದ ನದಿಯ ನೀರಿನ ಗುಣಮಟ್ಟಹಾಗೂ ಬಣ್ಣ ಸಂಪೂರ್ಣ ಬದಲಾಗಿರುವುದು ಕಂಡುಬಂದಿದೆ.

Tap to resize

Latest Videos

undefined

ಕುಶಾಲನಗರ(Kushalanagar) ಪಟ್ಟಣದ ಮೂಲಕ ಹರಿಯುವ ಕಾವೇರಿ ನದಿ(Kaveri river) ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು ಈ ನೀರು ಬಳಸಿದ್ದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕಕಾರಿ ಬೆಳವಣಿಗೆ ಎದುರಾಗುತ್ತಿದೆ. ಪಟ್ಟಣ ಗ್ರಾಮಗಳಿಂದ ನೇರವಾಗಿ ತ್ಯಾಜ್ಯ ಕಲುಷಿತ ನೀರು ನೇರವಾಗಿ ನದಿ ಒಡಲು ಸೇರುತ್ತಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.

ಬೆಂಗಳೂರಲ್ಲಿ ನಾಳೆ ಕಾವೇರಿ ನೀರು ಪೂರೈಕೆ ಸ್ಥಗಿತ: ನಿಮ್ಮ ಏರಿಯಾ ಇದೆಯೇ ಪರಿಶೀಲಿಸಿ

ಕಾವೇರಿ ಒಡಲಿಗೆ ಕಲುಷಿತ ನೀರು: ತಲಕಾವೇರಿಯಿಂದ ನದಿ ಹರಿಯುವ ಜಿಲ್ಲೆಯಲ್ಲಿ 24 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ಪ್ರದೇಶದ ಇಡೀ ತ್ಯಾಜ್ಯ ಕಲುಷಿತ ನೀರು ನದಿ ಒಡಲು ಸೇರುತ್ತಿದೆ. ಇದನ್ನು ತಡೆಯಲು ಕಳೆದ ಹತ್ತು ವರ್ಷಗಳಿಂದ ಪ್ರಾರಂಭವಾದ ಒಳಚರಂಡಿ ಯೋಜನೆ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿರುವುದೇ ಈ ಎಲ್ಲ ಅವಾಂತರಗಳಿಗೆ ಕಾರಣವಾಗಿದೆ.

ನದಿ ತಟದ ಜನತೆ ಕುಡಿಯಲು ಮತ್ತು ಇತರ ಬಳಕೆಗೆ ಕಾವೇರಿ ನದಿಯ ನೀರನ್ನು ಅವಲಂಬಿಸಿದ್ದು ಇದೀಗ ನೇರವಾಗಿ ಬಳಸಿದಲ್ಲಿ ಸಾಂಕ್ರಾಮಿಕ ರೋಗಗಳು ಎದುರಾಗುವ ಸಾಧ್ಯತೆಗಳು ಅಧಿಕವಾಗಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು. ಪಟ್ಟಣ ಪ್ರದೇಶದ ಬೃಹತ್‌ ವಾಣಿಜ್ಯ ಕಟ್ಟಡಗಳಿಂದ ಹೊರ ಸೂಸುವ ಕಲುಷಿತ ತ್ಯಾಜ್ಯ ಜಲಪಾತದ ರೀತಿಯಲ್ಲಿ ನದಿಗೆ ಚರಂಡಿಗಳ ಮೂಲಕ ನೇರವಾಗಿ ಹರಿಯುತ್ತಿರುವುದು ಕುಶಾಲನಗರ ವ್ಯಾಪ್ತಿಯಲ್ಲಿ ಕಾಣಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರಘುರಾಮ್‌ ಪ್ರತಿಕ್ರಿಯಿಸಿದ್ದಾರೆ.

ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರಾಜ್ಯ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಕೂಡ ಮೌನವಹಿಸಿದ್ದು ಈ ಬಗ್ಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಾರೆ.

ವಾಣಿಜ್ಯ ಕಟ್ಟಡಗಳಿಂದ ಕಲುಷಿತ ನೀರು ನೇರವಾಗಿ ನದಿಗೆ ಹರಿಸದಂತೆ ಸಂಬಂಧಿಸಿದ ಕಟ್ಟಡ ಮಾಲಕರಿಗೆ ಸೂಚನೆ ನೀಡಲಾಗಿದೆ ಎಂದು ಕುಶಾಲನಗರ ಪುರಸಭೆಯ ಮುಖ್ಯ ಅಧಿಕಾರಿ ಶಿವಪ್ಪ ನಾಯಕ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

ನೇರವಾಗಿ ಕಲುಷಿತ ತ್ಯಾಜ್ಯಗಳು ನದಿ ಒಡಲು ಸೇರುತ್ತಿರುವ ಕಾರಣ ನದಿಯ ನೀರು ಸಂಪೂರ್ಣ ಗುಣಮಟ್ಟಕಳೆದುಕೊಳ್ಳುತ್ತಿದ್ದು ನದಿಯಲ್ಲಿ ಪಾಚಿ ಕಟ್ಟಿಕೊಳ್ಳುತ್ತಿರುವ ದೃಶ್ಯ ಗೋಚರಿಸಿದೆ ಎಂದು ತಿಳಿಸಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್‌. ಚಂದ್ರಮೋಹನ್‌, ಪಟ್ಟಣ, ಗ್ರಾಮ ವ್ಯಾಪ್ತಿಯಿಂದ ಹೊರ ಸೂಸುವ ಕಲುಷಿತ ನೀರು, ನದಿಗೆ ಹರಿಯದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕೂಡಲೇ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ತಮಿಳುನಾಡಿನಿಂದ ಮತ್ತೆ ಕಾವೇರಿ ನೀರು ಕ್ಯಾತೆ, ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ!

ಕಲುಷಿತ ನೀರು ನೇರವಾಗಿ ನದಿಗೆ ಸೇರುವ ಕಾರಣ ನೀರನ್ನು ಬಳಸುವ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ

- ಕೊಡಗನ ಹರ್ಷ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಪ್ರಮುಖರು

ವಾಣಿಜ್ಯ ಕಟ್ಟಡಗಳಿಂದ ಕಲುಷಿತ ನೀರು ನೇರವಾಗಿ ನದಿಗೆ ಹರಿಸದಂತೆ ಸಂಬಂಧಿಸಿದ ಕಟ್ಟಡ ಮಾಲಕರಿಗೆ ಸೂಚನೆ ನೀಡಲಾಗಿದೆ

- ಶಿವಪ್ಪ ನಾಯಕ

ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ

click me!