ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಮೋಜು- ಮಸ್ತಿಗೆ ಬ್ರೇಕ್ ಹಾಕಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಂದಕಗಳ ನಿರ್ಮಾಣದ ಯೋಜನೆಗೆ ತೀರ್ಮಾನ ಮಾಡಿದ್ದಾರೆ.
ಕುಶಾಲನಗರ (ಮೇ.03): ಹಾರಂಗಿ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಮೋಜು- ಮಸ್ತಿಗೆ ಬ್ರೇಕ್ ಹಾಕಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಂದಕಗಳ ನಿರ್ಮಾಣದ ಯೋಜನೆಗೆ ಮುಂದಾಗಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಿ ನಿರ್ಮಾಣಗೊಂಡಿರುವ ಹಾರಂಗಿ ಅಣೆಕಟ್ಟು ನಿರ್ವಹಣೆ ಕೊರತೆ ಎದುರಿಸುವುದರೊಂದಿಗೆ, ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಮೋಜು- ಮಸ್ತಿ ಹೆಚ್ಚಾಗಿತ್ತು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರೊಂದಿಗೆ ಈ ಪ್ರದೇಶ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿ ಕೇಂದ್ರದಂತೆ ಪರಿವರ್ತನೆ ಯಾಗುತ್ತಿತ್ತು. ಈ ಬಗ್ಗೆ ಹಲವು ದೂರುಗಳು ಸ್ಥಳೀಯ ಜನರಿಂದ ನಿಗಮಕ್ಕೆ ಬರುತ್ತಿದ್ದವು. ಇದೀಗ ಸ್ಪಂದನೆ ದೊರೆತಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ಕ್ರಮ ಕೈಗೊಂಡು, ಪ್ರವಾಸಿಗರ ಮೋಜು-ಮಸ್ತಿಗೆ ನಿರ್ಬಂಧ ಹೇರುವುದರ ಜತೆಗೆ ಹಿನ್ನೀರು ವ್ಯಾಪ್ತಿಯಲ್ಲಿ ಭಾರೀ ಕಂದಕಗಳ ನಿರ್ಮಾಣ ಕಾಮಗಾರಿ ಮಾಡಲು ಪ್ರಾರಂಭ ಮಾಡಿದ್ದಾರೆ.
ಹಾರಂಗಿ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಏರಿಕೆ ...
ಒಂದೆಡೆ ಅಣೆಕಟ್ಟು ಮುಂಭಾಗ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಕಂಡುಬರುತ್ತಿದ್ದರೆ ಇನ್ನೊಂಡೆಡೆ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಯಾವುದೇ ಭದ್ರತೆಯ ವ್ಯವಸ್ಥೆ ಕಂಡುಬರುತ್ತಿಲ್ಲ. ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕುವ ಮೂಲಕ ಜಲಾಶಯದ ಭದ್ರತೆಗೆ ಒತ್ತು ನೀಡಬೇಕೆಂದು ಸ್ಥಳೀಯವಾಗಿ ಮನವಿ ಮಾಡಿದ ಬೆನ್ನಲ್ಲೇ ಸ್ಪಂದನೆ ದೊರೆತಿದ್ದು, ಹಾರಂಗಿ ಅಣೆಕಟ್ಟಿನ ಹಿನ್ನಿರಿನ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ನೀರಾವರಿ ನಿಗಮದ ಮೂಲಕ ಇದಕ್ಕೆ ಶಾಶ್ವತ ಪರಿಹಾರದ ಕ್ರಮಕ್ಕೆ ಮುಂದಾಗಿರುವುದಾಗಿ ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.