ಹಾಸನ ಜಿಲ್ಲೆಯ ವಿವಿಧೆಡೆ ತಡರಾತ್ರಿ ಧಾರಾಕಾರ ಮಳೆ ಮುಂದುವರಿದ್ದು, ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಚನ್ನರಾಯಪಟ್ಟಣದ ದಡ್ಡಿಹಳ್ಳಿಯ ಕೆರೆ ಕೋಡಿಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್,
ಹಾಸನ (ಅ.20): ಹಾಸನ ಜಿಲ್ಲೆಯ ವಿವಿಧೆಡೆ ತಡರಾತ್ರಿ ಧಾರಾಕಾರ ಮಳೆ ಮುಂದುವರಿದ್ದು, ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹೊಳೆನರಸೀಪುರ ತಾಲೂಕು ದೊಡ್ಡಕಾಡನೂರು ಗ್ರಾಮದಲ್ಲಿ ಎಲೆಕೋಸು, ಹೊಗೆಸೊಪ್ಪು, ತರಕಾರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದೆ. ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಭಾರೀ ಮಳೆಗೆ ಚನ್ನರಾಯಪಟ್ಟಣ ತಾಲೂಕಿನ ದೇವಿಗೆರೆ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತಗಳಿಗೆ ಹಾನಿಯಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ, ಮನೆಗಳಿಗೆ ನೀರು ನುಗ್ಗಿ ತೊಂದರೆ ಪಡುವಚಿತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಾಲುವೆ ತೋಡಿ ನೀರು ಹರಿಯುವಂತೆ ಮಾಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಪಿಡಿಓ, ವಿಎ ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆಯೇ ಹೊರತು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
undefined
ಮಳೆಯಿಂದ ಬೆಳೆಹಾನಿ: ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟು ಪರಿಹಾರ..!
ಕೆರೆ ಏರಿ ಕುಸಿತ: ಅರಸೀಕೆರೆ ತಾಲೂಕಿನ ನೇರ್ಲಗಿ ಗ್ರಾಮದಲ್ಲಿ ನೀರಿನ ಒತ್ತಡ ಹೆಚ್ಚಾಗಿ ಕೆರೆ ಏರಿ ಕುಸಿದಿದೆ. ರಸ್ತೆ ಸಮೇತ ಹಂತ ಹಂತವಾಗಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ ಏರಿಯ ಕುಸಿತ ಮುಂದುವರಿದಿದೆ. ಇದರಿಂದ ಅರಸೀಕೆರೆ ತಾಲೂಕಿನ ಜಾವಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಕ್ಷಣ ತಾತ್ಕಾಲಿಕ ಪರಿಹಾರ ಕಾರ್ಯ ಕೈಗೊಳ್ಳಲು ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಅಕಸ್ಮಾತ್ ಕೆರೆ ಏರಿ ಒಡೆದರೆ ನೂರಾರು ಎಕರೆ ಬೆಳೆ ನಾಶವಾಗೋ ಆತಂಕ ಎದುರಾಗಿದೆ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಮಾಡಲಾಗಿದೆ. ಈ ಕುರಿತು ಮಾತನಾಡಿದ ಅರಸೀಕೆರೆ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ಶೀಘ್ರ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ.
ತುಮಕೂರಲ್ಲಿ ನಿಲ್ಲದ ಮಳೆ: ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್‌ಗೆ ನುಗ್ಗಿದ ನೀರು..!
ಬಾಲಕಿ ನೀರು ಪಾಲು: ಚನ್ನರಾಯಪಟ್ಟಣ ತಾಲ್ಲೂಕಿನ ದಡ್ಡಿಹಳ್ಳಿಯ ಕೆರೆ ಕೋಡಿಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ದಡ್ಡಿಹಳ್ಳಿ ಬಳಿ ನಡೆದಿದೆ. ಹೆಗ್ಗಡಗೆರೆ ಗ್ರಾಮದ ರಾಜಾಭೋವಿ ಎಂಬುವರ ಪುತ್ರಿ ರಂಜಿತಾ(11) ನೀರು ಪಾಲಾಗಿರುವ ವಿದ್ಯಾರ್ಥಿನಿ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕೆರೆ ಕೋಡಿಯಲ್ಲಿ ರಭಸವಾಗಿ ನೀರು ಹರಿಯುತಿತ್ತು. ಆದರೂ ತನ್ನ ದೊಡ್ಡಪ್ಪನ ಮಗನ ಜೊತೆ ಬೈಕ್‌ನಲ್ಲಿ ರಂಜಿತಾ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಬೈಕ್ ಜಾರಿಬಿದ್ದು ರಂಜಿತಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಐದನೇ ತರಗತಿ ಓದುತ್ತಿದ್ದ ರಂಜಿತಾಳನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.