Hassan: ಜಾನುವಾರು ಚರ್ಮಗಂಟು ರೋಗ: ಐತಿಹಾಸಿಕ ಬೂಕನಬೆಟ್ಟ ರಾಸುಗಳ ಜಾತ್ರೆ ನಿಷೇಧ

By Sathish Kumar KH  |  First Published Jan 8, 2023, 4:59 PM IST

ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ರಾಜ್ಯದ ಐತಿಹಾಸಿಕ ರಾಸುಗಳ ಜಾತ್ರೆಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ  92ನೇ ಬೂಕನಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಜಾನುವಾರುಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. 


ಹಾಸನ (ಜ.08): ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ರಾಜ್ಯದ ಐತಿಹಾಸಿಕ ರಾಸುಗಳ ಜಾತ್ರೆಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ  92ನೇ ಬೂಕನಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಜಾನುವಾರುಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. 

ಕಳೆದ ವಾರವಷ್ಟೇ ಜಿಲ್ಲೆಯ ರೈತರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಸಭೆ ನಡೆಸಿದ್ದರು. ಈ ವೇಳೆ ಜಾನುವಾರುಗಳ ಜಾತ್ರೆಯನ್ನು ಆಯೋಜನೆ ಮಾಡುವ ಬಗ್ಗೆ ಧನಾತ್ಮಕ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಪ್ರತಿ ವರ್ಷದಂತೆ ಒಂದು ವಾರದ ಬದಲಿಯಾಗಿ ಕೇವಲ 3 ದಿನದಗಳ ಕಾಲ ಜಾನುವಾರುಗಳ ಸಂತೆಯನ್ನು ನಡೆಸಲು ತೀರ್ಮಾಣ ಕೈಗೊಳ್ಳಲಾಗಿತ್ತು. ಆದರೆ, ಈಗ ಜಿಲ್ಲಾಡಳಿತ ಮತ್ತು ಪಶು ಸಂಗೋಪನಾ ಇಲಾಖೆಗಳ ಅಧಿಕಾರಿಗಳು ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ಚರ್ಮಗಂಟು ರೋಗವು ಇನ್ನೂ ತೀವ್ರ ಪ್ರಮಾಣದಲ್ಲಿದ್ದು, ಜಾತ್ರೆಯನ್ನು ನಡೆಸದಂತೆ ಸೂಚನೆ ನೀಡಿದ್ದಾರೆ.

Tap to resize

Latest Videos

Chikkamagaluru: ಚರ್ಮಗಂಟು ರೋಗ ಉಲ್ಬಣ, 480 ಜಾನುವಾರುಗಳು ಬಲಿ

ರೈತರಿಂದ ಭಾರಿ ಆಕ್ರೋಶ: ಪ್ರತಿ ವರ್ಷ ಜಾತ್ರೆಯನ್ನು ನಂಬಿಕೊಂಡೇ ಜಾನುವಾರುಗಳನ್ನು ಮೇಯಿಸಿ ತಯಾರಿ ಮಾಡಿರುತ್ತಾರೆ. ಇನ್ನು ಈ ವೇಳೆ ದಲ್ಲಾಳಿಗಳು ತಮ್ಮ ವ್ಯಾಪಾರದಿಂದ ಭಾರಿ ಪ್ರಮಾಣದ ಆದಾಯ ಗಳಿಸುವ ಉದ್ದೇವನ್ನೂ ಇಟ್ಟುಕೊಂಡಿರುತ್ತಾರೆ. ಜೊತೆಗೆ, ರಾಸುಗಳ ಮಾರಾಟಕ್ಕೆ ರೈತರಿಗೂ ಒಂದು ಸೂಕ್ತ ವೇದಿಕೆ ಲಭ್ಯವಾಗುತ್ತಿತ್ತು. ಆದರೆ, ಒಂದು ವಾರದ ಹಿಂದೆ ಜಾನುವಾರುಗಳ ಜಾತ್ರೆ ನಡೆಸಲು ತೀರ್ಮಾನ ಕೈಗೊಂಡಿದ್ದನ್ನು ದಿಢೀರನೆ ರದ್ದು ಮಾಡಲಾಗಿದೆ. ಈಗಾಗಲೇ ರಾಸುಗಳನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡವರಿಗೂ ಸಮಸ್ಯೆ ಎದುರಾಗಿದೆ. ಸರ್ಕಾರದ ದಿಢೀರ್ ಜಾತ್ರೆ ನಿಷೇಧ ನಿರ್ಧಾರದಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ಮೂರು ದಿನಗಳ ಕಾಲಾವಕಾಶ ಕೊಡುವಂತೆಯೂ ಪಟ್ಟು ಹಿಡಿದಿದ್ದಾರೆ. 

ಜಾನುವಾರು ಜಾತ್ರೆಗೆ ಪೂರ್ಣ ಸಿದ್ಧತೆ: ಈಗಾಗಲೇ ರೈತರು ಜಾನುವಾರುಗಳನ್ನು ಕಟ್ಟಲು ಸಿದ್ದತೆ ಮಾಡಿಕೊಂಡಿದ್ದಾರೆ. ಕೆಲವರು ಪೆಂಡಾಲ್‌ ಹಾಕಿ, ರಾಸುಗಳನ್ನು ಮೇಯಿಸಲು ಸ್ಥಳ ಹಾಗೂ ಮೇವುಗಳನ್ನು ತರಿಸಿಕೊಂಡಿದ್ದಾರೆ. ಇನ್ನು ವ್ಯಾಪಾರಿಗಳು ಸಿಹಿ ತಿಂಡಿ, ಕೃಷಿ ಉಪಕರಣದ ಅಂಗಡಿಗಳು, ಹೋಟೆಲ್‌ಗಳನ್ನು ತೆರೆದಿದ್ದಾರೆ. ತಾಲೂಕು ಆಡಳಿತದಿಂದ ಬೂಕನಬೆಟ್ಟಕ್ಕೆ ಬರುವ ಎರಡು ಕಡೆಗಳಲ್ಲೂ ಫ್ಲೆಕ್ಸ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಚರ್ಮಗಂಟು ರೋಗದ ನೆಪವನ್ನು ಒಡ್ಡಿ ಜಾತ್ರೆಯನ್ನೇ ರದ್ದು ಮಾಡಲಾಗಿದೆ. ಈಗ ಎಲ್ಲ ಸಿದ್ಧತೆಗಳಿಗೆ ಹೂಡಿದ ಬಂಡವಾಳ ನಷ್ಟವಾಗಲಿದೆ ಎಂದು ರೈತರು, ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರ್ಮಗಂಟಿಗೆ ಒಂದೇ ತಿಂಗಳಲ್ಲಿ 10,305 ರಾಸುಗಳ ಸಾವು: ಸಿದ್ದು

20 ಸಾವಿರ ರಾಸುಗಳು ಸೇರುವ ಜಾತ್ರೆ: ರಾಜ್ಯದ ಜಾನುವಾರಗಳ ಜಾತ್ರೆಯಲ್ಲಿ ಪ್ರಸಿದ್ಧಿಯಾಗಿರುವ ಬೂಕನಬೆಟ್ಟ ರಾಸುಗಳ ಜಾತ್ರೆಗೆ  ಸುಮಾರು ಇಪ್ಪತ್ತು ಸಾವಿರ ರಾಸುಗಳು ಸೇರುವ ಬೃಹತ್ ಜಾತ್ರೆಯಾಗಿದೆ. ಹತ್ತಾರು ಹೊರ ಜಿಲ್ಲೆಗಳಿಂದ ರಾಸುಗಳನ್ನು ಕೊಳ್ಳಲು ಸಾವಿರಾರು ಜನರು ಆಗಮಿಸುತ್ತಾರೆ. ಜಾನುವಾರುಗಳಿಗೆ ರೋಗ ಬಂದರೆ ನಮಗೆ ಸರ್ಕಾರದ ಪರಿಹಾರ ಬೇಡ. ಮೂರು ದಿನ ಜಾತ್ರೆ ನಡೆಸಲು ಅವಕಾಶ ನೀಡುವಂತೆ ಸ್ಥಳೀಯರು ಹಾಗೂ ರೈತರ ಒಕ್ಕೊರಲ ಒತ್ತಾಯ ಮಾಡುತ್ತಿದ್ದಾರೆ. ನಾಳೆಯಿಂದ ನಡೆಯಬೇಕಿದ್ದ 92ನೇ ಬೂಕನಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವವನ್ನು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಜಾತ್ರೆ ನಿಷೇಧ ಮಾಡಿದ್ದು, ಅಂಗಡಿಗಳ ಮಾಲೀಕರು ಕಂಗಾಲಾಗಿದ್ದಾರೆ.

click me!