ಶಾಸಕ ಯು. ಟಿ. ಖಾದರ್ ಅವರು ನೀಡಿದ ಹೇಳಿಕೆಯೇ ಮಂಗಳೂರು ಗಲಭೆ ಹಾಗೂ ಹಿಂಸಾಚಾರಕ್ಕೆ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ, ಮಂಗಲೂರಿನ ಮೂರು ಕಡೆ ಕೇಸು ದಾಖಲಿಸಲಾಗಿದೆ.
ಮಂಗಳೂರು(ಡಿ.23): ಪೌರತ್ವ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ಅನುಷ್ಠಾನ ಮಾಡಿದಲ್ಲಿ ಕರ್ನಾಟಕ ಹೊತ್ತಿ ಉರಿಯುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಯು.ಟಿ.ಖಾದರ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಡಿ.17ರಂದು ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನಡೆಸಿದ ಭಾಷಣದಲ್ಲಿ ಶಾಸಕ ಯು.ಟಿ.ಖಾದರ್ ಅವರು ಈ ರೀತಿ ಹೇಳಿಕೆ ನೀಡುವ ಮೂಲಕ ಜನತೆಯನ್ನು ಕ್ರಿಮಿನಲ್ ಅಪರಾಧ ಎಸಗಲು ಹುರಿದುಂಬಿಸಿ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಜಿ ಸಚಿವ ಯು.ಟಿ. ಖಾದರ್‌ಗೆ ಜ್ಞಾನದ ಕೊರತೆ ಇದೆ ಎಂದ ಕಾರಜೋಳ
ಈ ಕುರಿತು ಬಿಜೆಪಿ ಯುವ ಮೋರ್ಚಾ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿಅವರು ಗುರುವಾರ ಮಂಗಳೂರು ದಕ್ಷಿಣ ಠಾಣೆಗೆ ದೂರು ನೀಡಿದ್ದಾರೆ.ಈಗಾಗಲೇ ಉಳ್ಳಾಲ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಎಂಬವರು ಖಾದರ್ ವಿರುದ್ಧ ಇದೇ ಹೇಳಿಕೆ ವಿರೋಧಿಸಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಜರಂಗದಳದಿಂದ ದೂರು:
ಜಿಲ್ಲೆಯಲ್ಲಿ ನಡೆದ ಎಲ್ಲ ಘಟನೆಗಳಿಗೆ ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯೇ ಕಾರಣವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
'ಗೋಲಿಬಾರ್ ನಡೆಸಲು RSS ಮುಖಂಡ ಕಲ್ಲಡ್ಕ ಪ್ರಭಾಕರ ಸೂಚನೆ ನೀಡಿದರೇ..'?
ಶಾಂತಿಯುತವಾಗಿದ್ದ ದ.ಕ. ಜಿಲ್ಲೆಯಲ್ಲಿ ಒಂದು ಸಮುದಾಯದವರನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ವಾಸ್ತವ ಅಂಶವನ್ನು ಮರೆಮಾಚಿ ಪ್ರತಿಭಟನೆ ಮತ್ತು ದಂಗೆಗೆ ಇಳಿಯುವಂತೆ ಖಾದರ್ ಅವರ ಹೇಳಿಕೆ ಕಾರಣವಾಗಿದೆ. ಜಿಲ್ಲೆಗೆ ಮತ್ತು ರಾಜ್ಯಕ್ಕೆ ಬೆಂಕಿ ಹಂಚುವಂತೆ ಮತ್ತು ಅಶಾಂತಿ ನಿರ್ಮಾಣ ಮಾಡುವಂತೆ ಶಾಸಕ ಯು.ಟಿ. ಖಾದರ್ ಅವರು ಹೇಳಿಕೆ ನೀಡಿರುವುದೇ ಗುರುವಾರದ ಬಳಿಕ ಮಂಗಳೂರು ಮತ್ತು ದ.ಕ. ಜಿಲ್ಲೆಯಲ್ಲಿ ನಡೆದ ಎಲ್ಲ ಘಟನೆಗಳಿಗೆ ಕಾರಣವಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿನಲ್ಲಿ ತಿಳಿಸಲಾಗಿದೆ. ಬಜರಂಗ ದಳದ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿಂದೂ ಜಾಗರಣ ವೇದಿಕೆಯಿಂದ ದೂರು:
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಶಾಸಕ ಯು.ಟಿ. ಖಾದರ್ ಅವರ ಪ್ರಚೋದನಕಾರಿ ಭಾಷಣದ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲ್ಕಿಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಶಾಸಕ ಯು.ಟಿ. ಖಾದರ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಭಾನುವಾರ ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಜಯರಾಮ ಗೌಡ ಅವರಿಗೆ ದೂರು ಸಲ್ಲಿಸಿದ್ದಾರೆ. ಮೂಲ್ಕಿ ಹಿಂಜಾವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.