
ಸಾವಳಗಿ(ಜ.11): ಸಮೀಪದ ಕಾಜಿಬೀಳಗಿ ಗ್ರಾಮದ ಗುಡ್ಡದಲ್ಲಿ ನಡೆದಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಹೆಸರಲ್ಲಿ ಗನ್ ಹಾಗೂ ಇತರೆ ಸಾಹಸ ತರಬೇತಿ ಪಡೆಯುತ್ತಿದ್ದ 27 ಜನ ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಬಾಗಲಕೋಟೆ ಜಿಲ್ಲೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗನ್ ತರಬೇತಿ, ಕರಾಟೆ ಸೇರಿದಂತೆ ವಿವಿಧ ಸಾಹಸ ತರಬೇತಿಯನ್ನು 2024 ಡಿ.24ರಿಂದ ಡಿ.29ರವರೆಗೆ ಶ್ರೀ ರಾಮ ಸೇನೆಯ ಕಾರ್ಯಕರ್ತರು ಮತ್ತು ಆಯೋಜಕರು ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿದ್ದರು. ಬಂದೂಕು ತರಬೇತಿ ನೀಡಿದ್ದಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದಾರೆ.
ಮಸೀದಿ, ಚರ್ಚ್‌ನಲ್ಲೂ ಪೂಜೆಗೆ ಅವಕಾಶ ನೀಡಿ: ಪ್ರಮೋದ್ ಮುತಾಲಿಕ್
ಪ್ರಕಾಶ ಪತ್ತಾರ, ಮಹೇಶ ಬಿರಾದಾರ, ಯಮನಪ್ಪ ಕೋರಿ, ಆನಂದ ಜಂಬಗಿಮಠ, ರಾಜು ಖಾನಪ್ಪನವರ, ಗಂಗಾಧರ ಕುಲಕರ್ಣಿ ಮಹೇಶ ರೋಕಡೆ, ಮಹಾಂತೇಶ ಹೊನ್ನಪನ ವರ, ಭರತ ಲದ್ದಿ, ಈರಪ್ಪ ಪೂಜಾರಿ ಸೇರಿ 27 ಜನ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ.
ಶ್ರೀರಾಮ ಸೇನೆಯಿಂದ ಯುವಕರಿಗೆ ವ್ಯಕ್ತಿತ್ವ ವಿಕಸನ ಅಭ್ಯಾಸ ವರ್ಗ ತರಬೇತಿ, ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ತರ ಬೇತಿ ನೀಡಲಾಗಿತ್ತು. ದಂಡ ಪ್ರಯೋಗ, ನಕಲಿ ಗನ್ ಮೂಲಕ ತರಬೇತಿ, ಕರಾಟೆ ಸೇರಿ ವಿವಿಧ ಕೌಶಲ್ಯ ತರಬೇತಿ ನೀಡಲಾಗಿತ್ತು. ಸುರಕ್ಷತೆಗಾಗಿ ವಿವಿಧ ರಕ್ಷಾ ತರಬೇತಿ, ಮುಳ್ಳುಕಂಟಿಯ ಗುಂಡಿಯಲ್ಲಿ ಹಾದು ಹೋಗುವುದು, ಸಂದಿಗ್ಧ ಸ್ಥಳಗಳಲ್ಲಿ ಪಾರಾಗುವುದು, ಬಂದೂಕು ಬಳಕೆ ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ಕೊಡುತ್ತಿದ್ದರು ಎನ್ನಲಾಗಿದೆ. ನಿಂಗಪ್ಪ ಹೂಗಾರ ಎಂಬುವರ ದೂರಿನ ಮೇರೆಗೆ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏರ್‌ಗನ್ ವೆಪನ್ ಅಲ್ಲ: ಪ್ರಮೋದ ಮುತಾಲಿಕ್
ಕಾಜಿಬೀಳಗಿಯಲ್ಲಿ ಶಾರೀರಿಕ ಶಿಕ್ಷಣ ವರ್ಗ, ವ್ಯಕ್ತಿತ್ವ ವಿಕಸನ ಶಿಬಿರವನ್ನು ಶ್ರೀರಾಮಸೇನೆ ಸಂಘಟನೆಯಿಂದ ಆಯೋಜಿಸಲಾಗಿತ್ತು. ಯುವಕರಲ್ಲಿ ಶೌರ್ಯ, ಶಿಸ್ತು, ದುಶ್ಚಟ ಮುಕ್ತ ಯುವಕರನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮ ಯೋಜನೆ ಮಾಡುತ್ತೇವೆ. ಪ್ರತಿ ವರ್ಷ ಯುವಕರಿಗೆ ಏರ್‌ಗನ್ ಮೂಲಕ ಗುರಿ ಇಡುವ ಪ್ರಕ್ರಿಯೆ ಕೂಡ ಕಲಿಸುತ್ತೇವೆ. ಇದೇನು ಹೊಸದೇನಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಘಟನೆ ಕುರಿತು ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, ಏರ್‌ಗನ್ ಅನ್ನೋದು ವೆಪನ್ ಅಲ್ಲ. ಕಾನೂನು ಬಾಹಿರ ಅಲ್ಲ. ಆದರೂ ಇವತ್ತು ಸಾವಳಗಿ ಪೊಲೀಸರು ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ವೆಪನ್ ಕೇಸ್ ಹಾಕಿದ್ದಾರೆ. ಇವರಿಗೇನಾದರೂ ತಲೆ ಇದೆಯಾ? ಏರ್‌ಗನ್ ನಿಮಗೆ ಕೊಟ್ಟಿದ್ದೇವೆ, ಅದ್ದೇಗೆ ವೆಪನ್ ಆಗುತ್ತೆ? ಹೇಗೆ ಕಾನೂನು ಬಾಹಿರ ಆಗುತ್ತದೆ? ಎನ್‌ಸಿಸಿಯಲ್ಲಿ ಇದೇ ಏರ್‌ಗನ್ ಮೂಲಕ ಟ್ರೈನಿಂಗ್ ಕೊಡಲ್ವ ನೀವು? ಪೊಲೀಸ್ ಇಲಾಖೆಯವರು ನಾಗರಿಕರಿಗೆ ಟ್ರೈನಿಂಗ್ ಕೊಡ್ತಿರೋದು ಏರ್‌ಗನ್ ಮೂಲಕ. ಹಾಗಾದ್ರೆ ನಿಮ್ಮ ಮೇಲೂ ಕೇಸ್ ಹಾಕಬೇಕಾ? ಕಾಂಗ್ರೆಸ್ ಸರ್ಕಾರ ಮಾತು ಕೇಳಿ ನೀವು ಬಾಲ ಬಡಿತಿದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಯೋತ್ಪಾದನೆಯಲ್ಲಿ ತೀರ್ಥಹಳ್ಳಿ 2ನೇ ಭಟ್ಕಳ: ಪ್ರಮೋದ್ ಮುತಾಲಿಕ್
ಯುವಕರಲ್ಲಿ ದೇಶಭಕ್ತಿ ಮೂಡಿಸಲು, ಶಿಸ್ತು ಕಲಿಸಲು ನಮಗೆ ಅವಕಾಶ ಮಾಡಿಕೊಡಿ. ಇಂದು ಮದ್ಯ ಗುಟಕಾ, ಡ್ರಗ್ಸ್‌ನಲ್ಲಿ ಮುಳುಗುವ ಯುವಕರನ್ನು ದುಶ್ಚಟಮುಕ್ತ ಮಾಡುವ ಪ್ರಕ್ರಿಯೆ ಮಾಡುತ್ತಿದ್ದೇವೆ. ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿಲ್ಲ. ಕೇಸ್ ಹಾಕಿ ಹೆದರಿಸುವ ನಿಮ್ಮ ಹೆದರಿ ಕೆಗೆ ನಾವು ಹೆದರುವವರಲ್ಲ, ಪ್ರತಿವರ್ಷ ಮಾಡ್ತೀವಿ, ಇದನ್ನು ಮುಂದೆಯೂ ಮಾಡುತ್ತೇವೆ. ಇದೇ ಏರ್‌ಗನ್ ಮೂಲಕ ತರಬೇತಿ ಮಾಡುತ್ತೇವೆ. ತಾಕತ್ತಿದ್ರೆ ತಡೀರಿ ನೋಡೋಣ ಎಂದು ಸವಾಲು ಹಾಕಿದರು.
ಪೊಲೀಸ್ ಇಲಾಖೆ ಡ್ರಗ್ ಮಾಫಿಯಾ ಬೆಳೆಸುತ್ತಿದೆ. ಕಾಂಗ್ರೆಸ್ ರಾಜಕಾರಣಿಗಳು ಡ್ರಗ್ ಮಾಫಿಯಾ ಬೆಳೆಸುತ್ತಿದ್ದಾರೆ. ನಮ್ಮ ಶಿಬಿರದ ಮೇಲೆ ಕೇಸ್ ಹಾಕುತ್ತೀರಿ ಎಂದರೆ ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ರೆ ಕೇಸ್ ವಾಪಸ್ ತೆಗೆದುಕೊಳ್ಳಿ. ಇಲ್ಲದಿದ್ರೆ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.