
ಬಳ್ಳಾರಿ (ಜ.02): ಬಳ್ಳಾರಿ ನಗರದಲ್ಲಿ ಜನಾರ್ಧನ ರೆಡ್ಡಿ ಮನೆಯ ಮುಂದೆ ಬ್ಯಾನರ್ ಅಳವಡಿಕೆ ವಿಚಾರವಾಗಿ ಗುರುವಾರ ರಾತ್ರಿ ನಡೆದ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (28) ಸಾವು ಪೊಲೀಸರ ಗುಂಡಿನಿಂದ ಸಂಭವಿಸಿದ್ದಲ್ಲ, ಬದಲಾಗಿ ಖಾಸಗಿ ವ್ಯಕ್ತಿಯ ರಿವಾಲ್ವಾರ್‌ನಿಂದ ಹಾರಿದ ಗುಂಡು ತಗುಲಿ ಸಾವು ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಂಜಿತ್ ಕುಮಾರ್ ಭಂಡಾರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನಗರದ ಹೃದಯಭಾಗದಲ್ಲಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ನಡೆದ ನಾರಾ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವಿನ ಸಂಘರ್ಷ ಈಗ ಭೀಕರ ತಿರುವು ಪಡೆದುಕೊಂಡಿದೆ. ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆಗೆ ಬ್ಯಾನರ್ ಕಟ್ಟುವ ವಿಚಾರದಲ್ಲಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿತ್ತು. ಕಲ್ಲು ತೂರಾಟ, ಲಾಠಿ ಪ್ರಹಾರದ ನಡುವೆ ಗುಂಡಿನ ಸದ್ದು ಕೇಳಿಬಂದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ರಾಜಶೇಖರ್ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಪೊಲೀಸರ ಫೈರಿಂಗ್‌ನಿಂದ ಸಾವು ಸಂಭವಿಸಿದೆ ಎಂಬ ವದಂತಿ ಹಬ್ಬಿತ್ತು.
ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್, 'ಘಟನಾ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಫೈರ್ ಮಾಡಿರುವ ಮಾಹಿತಿ ಇದೆ. ಮೃತನ ದೇಹ ಸೇರಿರುವುದು ಖಾಸಗಿ ರಿವಾಲ್ವಾರ್ ಗುಂಡು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಶಾಸಕ ನಾರಾ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 'ಜನಾರ್ದನ ರೆಡ್ಡಿ ಅವರ ವಿರುದ್ಧ ಎಫ್‌ಐಆರ್ ಆಗುವವರೆಗೂ ನಾನು ಸ್ಥಳ ಬಿಟ್ಟು ಕದಲುವುದಿಲ್ಲ. ಅವರ ಕುತಂತ್ರದಿಂದಲೇ ಒಬ್ಬ ಅಮಾಯಕ ಕಾರ್ಯಕರ್ತನ ಪ್ರಾಣ ಹೋಗಿದೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಕೂಡ ಜಂಟಿ ಸುದ್ದಿಗೋಷ್ಠಿಗೆ ಮುಂದಾಗಿದ್ದು, ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ರಾಜಕೀಯ ಬಿಸಿ ಏರಿದೆ.
ಮೃತ ರಾಜಶೇಖರ್ ತಾಯಿ ತುಳಸಿ ಅವರ ಆಕ್ರಂದನ ಮುಗಿಲು ಮುಟ್ಟಿದೆ. 'ಮಗನಿಗೆ ಪೆಟ್ಟಾಗಿದೆ' ಎಂದು ಸಮಾಧಾನ ಹೇಳಿದ್ದ ಪೊಲೀಸರು ಶವಗಾರದ ಮುಂದೆ ಕಾವಲಿಟ್ಟಿದ್ದಾರೆ. ಈಗಾಗಲೇ ಈ ಗಲಭೆಗೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಬಳ್ಳಾರಿ ನಗರವೀಗ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ನಗರದಾದ್ಯಂತ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಎಲ್ಲೆಡಟೆ ಪೊಲೀಸರ ಕಟ್ಟೆಚ್ಚರ ಮುಂದುವರೆದಿದೆ.