ಉತ್ತರ ಕನ್ನಡ: ಶಿರಸಿ ಬಳಿ ಹಳ್ಳಿಗಳಲ್ಲಿ ಕ್ಯಾನ್ಸರ್‌ ರೌದ್ರಾವತಾರ..!

By Kannadaprabha News  |  First Published Aug 25, 2022, 9:12 PM IST

ಒಂದೆಡೆ ಆತಂಕ, ಇನ್ನೊಂದೆಡೆ ಭರಿಸಲಾಗದ ಆಸ್ಪತ್ರೆ ಬಿಲ್‌ ಇಲ್ಲಿಯ ಕೃಷಿಕರನ್ನು ಹಸಿ ಬಟ್ಟೆ ಹಿಂಡಿದಂತೆ ಹಿಂಡುತ್ತಿವೆ.
 


ಮಂಜುನಾಥ ಸಾಯೀಮನೆ

ಶಿರಸಿ(ಆ.25):  ತಾಲೂಕಿನ ನೆಗ್ಗು ಗ್ರಾಪಂನ ಹಲವು ಹಳ್ಳಿಗಳಲ್ಲಿ ಪ್ರತಿ ದಿನದ ಬೆಳಗು ನೋವಿನೊಂದಿಗೆ ಆರಂಭಗೊಳ್ಳುತ್ತಿದೆ. ಮುಂಜಾನೆಯೋ, ಮುಸ್ಸಂಜೆಯೋ ಎಂಬ ಆತಂಕ ಇಲ್ಲಿಯ ಹಲವು ಮನೆಗಳಲ್ಲಿವೆ. ಕ್ಯಾನ್ಸರ್‌ ಎಂಬ ಮಹಾಮಾರಿ ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಜಾಸ್ತಿಯಾಗಿದ್ದು, ಜನತೆಯ ಬದುಕನ್ನು ಹಿಂಡುತ್ತಿವೆ.

Latest Videos

undefined

ಇಲ್ಲಿಯ ತಟಗುಣಿ, ತಡಗುಣಿ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಕಳೆದ ಆರೇಳು ವರ್ಷದಲ್ಲಿ ಎಂಟಕ್ಕೂ ಅಧಿಕ ಮಂದಿ ಸಾವಿನ ಮನೆಯ ಕದ ತಟ್ಟಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರು ಇನ್ನೂ ಅನೇಕರು. ಸಣ್ಣ ಹಿಡುವಳಿದಾರರಾಗಿ ಬರುವ ಪುಟ್ಟ ಆದಾಯವನ್ನೂ ಮಹಾನಗರಗಳ ದೊಡ್ಡಾಸ್ಪತ್ರೆಗೆ ಸುರಿಯುತ್ತಿದ್ದಾರೆ. ಒಂದೆಡೆ ಆತಂಕ, ಇನ್ನೊಂದೆಡೆ ಭರಿಸಲಾಗದ ಆಸ್ಪತ್ರೆ ಬಿಲ್‌ ಇಲ್ಲಿಯ ಕೃಷಿಕರನ್ನು ಹಸಿ ಬಟ್ಟೆ ಹಿಂಡಿದಂತೆ ಹಿಂಡುತ್ತಿವೆ.

UTTARA KANNADA : ನದಿಗೆ ಉರುಳಿದ ಲಾರಿ- ಐವರ ರಕ್ಷಣೆ, ಓರ್ವ ನಾಪತ್ತೆ

ನೆಗ್ಗು ಪಂಚಾಯಿತಿ ವ್ಯಾಪ್ತಿಯ ಈ ಭಾಗದ 20ಕ್ಕೂ ಅಧಿಕ ಹಳ್ಳಿಗಳಲ್ಲಿ ಸುಮಾರು 15ಕ್ಕೂ ಅಧಿಕ ಕ್ಯಾನ್ಸರ್‌ ರೋಗಿಗಳಿದ್ದಾರೆ. ಆರಂಭಿಕ ಹಂತದಲ್ಲಿ ನಮಗೆ ಗೊತ್ತಾಗಲಿಲ್ಲ. ಆ ಮೇಲೆ ಪರೀಕ್ಷೆ ಮಾಡಿಸಿದಾಗ ಗೊತ್ತಾಯ್ತು. ಈಗ ಬೆಂಗಳೂರಿನಲ್ಲೇ ಇದ್ದಾರೆ. ಮೂರು ಕಿಮೋ ಥೆರಪಿ ಆಯ್ತು... ಎಂದು ಜಗುಲಿಯ ಮೂಲೆಯಲ್ಲಿ ಕುಳಿತ ಕುಟುಂಬದ ಹಿರಿಯರಿಗೆ ಹೇಳುವಷ್ಟರಲ್ಲಿ ಕಣ್ಣಂಚಿನಲ್ಲಿ ನೀರು ಮೂಡಿತ್ತು.

ಅಪ್ಪಟ ಹಳ್ಳಿಗಳಾದ ಇಲ್ಲಿ ಕೃಷಿಕರೇ ಅಧಿಕ. ತಂಬಾಕು ತಿಂದರೆ ಕ್ಯಾನ್ಸರ್‌ ಬರುತ್ತದೆ ಎಂಬ ಮಾತಿದೆ. ಆದರೆ, ಈ ಹಳ್ಳಿಗಳ ಪರಿಸ್ಥಿತಿ ವಿಭಿನ್ನ. ತಂಬಾಕು ತಿನ್ನದವರಿಗೂ ಕ್ಯಾನ್ಸರ್‌ ಆವರಿಸಿದೆ. ರೋಗಿಗಳ ಸಂಖ್ಯೆಯಲ್ಲಿ ಜೀವನದಲ್ಲಿ ಒಮ್ಮೆಯೂ ತಂಬಾಕು ಸೇವಿಸದ ಮಹಿಳೆಯರ ಸಂಖ್ಯೆ ಅರ್ಧದಷ್ಟಿದೆ. ಸ್ತನ ಕ್ಯಾನ್ಸರ್‌, ಎಲುಬು ಕ್ಯಾನ್ಸರ್‌ನಂತಹ ತಂಬಾಕು ಚಟಕ್ಕೆ ಸಂಬಂಧವಿಲ್ಲದ ಕ್ಯಾನ್ಸರ್‌ ಪ್ರಕರಣಗಳು ದಾಖಲಾಗಿವೆ.

ಕಳೆದೊಂದು ದಶಕದಿಂದ ಯಲ್ಲಾಪುರ ಭಾಗದ ಮತ್ತು ಕೈಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಯಾನ್ಸರ್‌ ಪ್ರಮಾಣ ಅಧಿಕವಾಗುತ್ತಿರುವ ಬಗ್ಗೆ ವರದಿಗಳು ದಾಖಲಾಗಿದ್ದವು. ಅಣು ವಿಕಿರಣದ ಪ್ರಭಾವದಿಂದಲೇ ಆ ಭಾಗದಲ್ಲಿ ಕ್ಯಾನ್ಸರ್‌ ಸಂಭವಿಸುತ್ತಿದೆ ಎಂದೂ ಹೇಳಲಾಗುತ್ತಿತ್ತು. ಆದರೆ ನೆಗ್ಗು ಪಂಚಾಯಿತಿ ಕೈಗಾದಿಂದ ದೂರದಲ್ಲಿದ್ದು, ಸುರಕ್ಷಿತ ಸ್ಥಳದಲ್ಲಿದೆ. ಇಷ್ಟಾದರೂ ಕ್ಯಾನ್ಸರ್‌ ಜಾಸ್ತಿ ಆಗುತ್ತಿರುವುದು ಹೇಗೆ ? ಈ ಭಾಗದಲ್ಲಿ ಕ್ಯಾನ್ಸರ್‌ ರೋಗದಿಂದ ಹಿಂದೆಯೂ ಸಾವನ್ನಪ್ಪಿದ್ದರೂ ಇಂದಿನ ಪರಿಸ್ಥಿಗೆ ಹೋಲಿಸಿದರೆ ಕಳೆದ 30 ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಒಳಗಾದವರ ಸಂಖ್ಯೆ ಕಡಿಮೆ.

80 ವರ್ಷ ದಾಟಿದರೂ ಅಡಕೆ ತೋಟಕ್ಕೆ ಹೋಗಿ ಕೆಲಸ ಮಾಡುವವರ ಸಂಖ್ಯೆ ಜಾಸ್ತಿ ಇದ್ದ ಈ ಗ್ರಾಮಗಳಿಗೆ ಈಗ ಏಕೆ ಈ ಪರಿಸ್ಥಿತಿ ಎಂಬ ಚಿಂತೆ ಕಾಡುತ್ತಿದೆ. ಹಿರಿ ಜೀವಗಳು ಗಟ್ಟಿಯಾಗಿರುವಾಗಲೇ 30-40 ವರ್ಷ ವಯಸ್ಸಿನ ಯುವಕರೇ ಕ್ಯಾನ್ಸರ್‌ಗೆ ಒಳಗಾಗಿ ಆಸ್ಪತ್ರೆ ಹಿಡಿದಿರುವುದು ಊರಿಗೆ ಊರೇ ಕಂಗಾಲಾಗುವಂತೆ ಮಾಡಿದೆ. ತಾಲೂಕಿನ ಗ್ರಾಮೀಣ ಪ್ರದೇಶ ಉತ್ತಮ ವಾತಾವರಣ ಹೊಂದಿದೆ.

ಕಲುಷಿತ ಗಾಳಿಯ ವಾತಾವರಣ ಇಲ್ಲ. ಇಲ್ಲಿಯ ಬದುಕು ನೈಸರ್ಗಿಕವಾಗಿಯೇ ಆರೋಗ್ಯಯುತ ಜೀವನ ಆಗಬೇಕಿತ್ತು. ಆದರೆ, ಈ ಭಾಗದಲ್ಲಿ ಏಕೆ ಈ ರೀತಿ ಕ್ಯಾನ್ಸರ್‌ ಹಬ್ಬುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ದೊಡ್ಮನೆ ಗ್ರಾಮದ ಗೃಹಿಣಿ ಸುಮಾ ಹೆಗಡೆ.

ಹಲವು ಮನೆಗಳಲ್ಲಿ ಕುಟುಂಬದ ಸದಸ್ಯರಿಗೆ ಕ್ಯಾನ್ಸರ್‌ ಲಕ್ಷಣ ಇದ್ದರೂ ಬಹಿರಂಗಪಡಿಸಿಕೊಳ್ಳುತ್ತಿಲ್ಲ. ದೊಡ್ಡಾಸ್ಪತ್ರೆಗೆ ತೆರಳಿದರೆ ದೊಡ್ಡ ಸುದ್ದಿಯಾಗಬಹುದು. ಮುಂದಿನ ಜೀವನದಲ್ಲಿ ಸಾರ್ವಜನಿಕರು ಕನಿಕರದ ಭಾವನೆಯಿಂದ ನೋಡಬಹುದು ಎಂಬ ಆತಂಕ ಕಾಡುತ್ತಿದೆ.

ಉತ್ತರಕನ್ನಡ: ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವರ ನವರಥಕ್ಕೆ ಮುನ್ನುಡಿ

ಇತ್ತೀಚೆಗಷ್ಟೇ ಇಬ್ಬರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ನೆಗ್ಗು ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿ ಮುನ್ನೆಚ್ಚರಿಕೆ ವಹಿಸಬೇಕು ಅಂತ ಸ್ಥಳೀಯ ನಿವಾಸಿ ಕೆ.ಆರ್‌. ಹೆಗಡೆ ಅಮ್ಮಚ್ಚಿ ತಿಳಿಸಿದ್ದಾರೆ. 

ನೆಗ್ಗು ಗ್ರಾಪಂನಲ್ಲಿ ಕಾರ್ಯಕರ್ತರ ಮೂಲಕ ಮನೆ ಮನೆ ಆರೋಗ್ಯ ಸಮೀಕ್ಷೆ ಕೈಗೊಳ್ಳುತ್ತೇವೆ. ಕ್ಯಾನ್ಸರ್‌ ಚಿಕಿತ್ಸೆಗೆ ಸರ್ಕಾರದಿಂದ .5 ಲಕ್ಷವರೆಗೂ ಸಹಾಯಧನ ಲಭಿಸಲಿದೆ. ರೋಗಿಗಳಿಗೆ ಸಹಾಯಧನ ಒದಗಿಸುವ ಯತ್ನ ನಡೆಸುತ್ತೇವೆ ಅಂತ ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್‌ ಹೇಳಿದ್ದಾರೆ. 
 

click me!