ಕೆನಡಾ ಸಂಸದ ಚಂದ್ರಆರ್ಯ ಇಂದು ಹುಟ್ಟೂರು ತುಮುಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆದರು.
ತುಮಕೂರು : ಕೆನಡಾ ಸಂಸದ ಚಂದ್ರಆರ್ಯ ಇಂದು ಹುಟ್ಟೂರು ತುಮುಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆದರು. ತುಮಕೂರು ಜಿಲ್ಲೆ ಶಿರಾ (Shira) ತಾಲೂಕಿನ ದ್ವಾರಾಳು (Dwaralu) ಗ್ರಾಮದಲ್ಲಿ ಜನಿಸಿದ ಚಂದ್ರ ಆರ್ಯ (Chandra Arya) ಅವರು ನಂತರ ಕೆನಡಾಗೆ (Canada) ತೆರಳಿ ಅಲ್ಲಿ ಉನ್ನತವಾಗಿ ಬೆಳೆದು ಸಂಸದರಾಗಿ ಆಯ್ಕೆಯಾಗಿದ್ದಲ್ಲದೇ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದ್ದರು. ಅವರು ಇತ್ತೀಚೆಗೆ ಕೆನಡಾ ಸಂಸತ್‌ನಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಕನ್ನಡಿಗರೆಲ್ಲಾ ಹೆಮ್ಮೆ ಪಡುವಂತೆ ಮಾಡಿತ್ತು.
ಇದೀಗ ಚಂದ್ರ ಆರ್ಯ ಕುಟುಂಬ ಸಮೇತರಾಗಿ ಹುಟ್ಟೂರು ದ್ವಾರಾಳುಗೆ ಭೇಟಿ ನೀಡಿದ್ದು, ಅಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರೊಂದಿಗೆ ಆತ್ಮೀಯತೆಯಿಂದ ಚರ್ಚೆ ನಡೆಸಿದ್ದಾರೆ. ಅಲ್ಲದೆ ಕುಟುಂಬದ ಸಂಬಂಧಿಕರೊಂದಿಗೆ ಬೆರೆತು ಸಂಭ್ರಮಿಸಿದ್ದಾರೆ. ಬಳಿಕ ಗಜ್ಜಿಗರಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಚಂದ್ರ ಆರ್ಯಗೆ ಗ್ರಾಮಸ್ಥರು ಹಾರ ಹಾಕಿ ಪೇಟ ತೊಡಿಸಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಕೆನಡಾ ಸಂಸತ್ತಲ್ಲಿ ಸಂಸದ ಚಂದ್ರ ಕನ್ನಡ ಭಾಷಣ: ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷಣ ಇದೇ ಮೊದಲು
ವಿದ್ಯಾರ್ಥಿಗಳೊಂದಿಗೆ ಸಂವಾದ:
ಕೆನಡಾ ಸಂಸತ್ ಸದಸ್ಯರಾಗಿರುವ ಚಂದ್ರ ಆರ್ಯ ಅವರೊಂದಿಗೆ ಇಂದು ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ. ತುಮಕೂರಿನ ಕೋತಿತೋಪಿನ ರವೀಂದ್ರ ಕಲಾನಿಕೇತನ ಸ್ಮಾರಕ ಭವನದಲ್ಲಿ ಸಂವಾದ ನಡೆಯಲಿದೆ. ಹಾಲಪ್ಪ ಪ್ರತಿಷ್ಠಾನ ಹಾಗೂ ತುಮಕೂರು (Tumkur) ಜಿಲ್ಲಾ ನಾಗರಿಕ ವೇದಿಕೆಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕೆನಡಾದಲ್ಲಿ ಕನ್ನಡದ ಕಂಪು: ಕನ್ನಡದಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಕನ್ನಡಿಗ
ಕರ್ನಾಟಕದ ತುಮಕೂರು ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಕೆನಡಾದ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲೇ ಭಾಷಣ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೇಶದ ಹೊರಗಡೆ ವಿದೇಶದ ಸಂಸತ್ತಿನಲ್ಲಿ ಸಂಸದರೊಬ್ಬರು ಕನ್ನಡದಲ್ಲಿ ಮಾತನಾಡಿದ್ದು ಇದೇ ಮೊದಲ ಬಾರಿ. ಕರ್ನಾಟಕದ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲೇ ಕೆನಡಾದ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಇದು ಸುದೀರ್ಘ ಇತಿಹಾಸವನ್ನು ಹೊಂದಿರುವಂತಹ ಸುಂದರ ಭಾಷೆಯಾಗಿದೆ. ಸುಮಾರು 5 ಕೋಟಿ ಜನರಿಂದ ಮಾತನಾಡಲ್ಪಡುತ್ತದೆ. ಭಾರತದ ಹೊರಗಡೆ ವಿಶ್ವದ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು ಎಂದು ಟ್ವೀಟ್ ಮಾಡಿದ್ದರು.
ಗ್ರಾಮದ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿ ಹಿರಿಯ ಪುತ್ರರಾಗಿರುವ ಚಂದ್ರ ಆರ್ಯ. ತುಮಕೂರಿನಲ್ಲಿ ಹುಟ್ಟಿಬೆಳೆದು, ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಬಳ್ಳಾರಿಯಲ್ಲಿ ಪ್ರೌಢ ಶಿಕ್ಷಣ, ಧಾರವಾಡದಲ್ಲಿ ಎಂಬಿಎ, ರಾಮನಗರದ ಗೌಸಿಯಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್‌ನಲ್ಲಿ ಪದವಿ ಪೂರೈಸಿದ್ದಾರೆ. ಬಳಿಕ ಡೆಹ್ರಾಡೂನ್‌ನಲ್ಲಿ ಡಿಆರ್‌ಡಿಒ, ಕೆಎಸ್‌ಎಫ್‌ಸಿಯ ಉಪ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003ಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ದಿಮೆ ಆರಂಭಿಸಲು ಆರ್ಯ ಕೆನಡಾಗೆ ತೆರಳಿದರು. ಇವರ ಪತ್ನಿ ಸಂಗೀತ ಸಹ ಎಂಜಿನಿಯರ್ ಆಗಿದ್ದಾರೆ.