ಬೆಂಗಳೂರು ಪೊಲೀಸರಿಗೆ ‘ಶಹಬ್ಬಾಸ್‌’ಗಿರಿ : ಮೆಚ್ಚುಗೆ ಮಹಾಪೂರ

Kannadaprabha News   | Asianet News
Published : Dec 24, 2019, 08:06 AM IST
ಬೆಂಗಳೂರು ಪೊಲೀಸರಿಗೆ ‘ಶಹಬ್ಬಾಸ್‌’ಗಿರಿ : ಮೆಚ್ಚುಗೆ ಮಹಾಪೂರ

ಸಾರಾಂಶ

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಬೆಂಗಳೂರು ಪೊಲೀಸರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.  

ಬೆಂಗಳೂರು [ಡಿ.24]:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾದ ಬಂದೋಬಸ್ತ್ ಮಾಡಿದ ಬೆಂಗಳೂರು ಪೊಲೀಸರ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಪೊಲೀಸರ ಅಂದಾಜಿನ ಪ್ರಕಾರ ಪ್ರತಿಭಟನೆಯಲ್ಲಿ ಸುಮಾರು ಒಂದು ಲಕ್ಷ ಮಂದಿ ಸೇರಿದ್ದು, ಪ್ರತಿ ಹಂತದಲ್ಲೂ ಹೆಜ್ಜೆ-ಹೆಜ್ಜೆಗೂ ಖಾಕಿ ಪಡೆಯ ಸರ್ಪಗಾವಲು ಹಾಕಲಾಗಿತ್ತು. ಪ್ರತಿ 50 ಮೀಟರ್‌ಗೂ ಪೊಲೀಸ್‌ ವಾಹನ, ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಣ್ಣದೊಂದು ಪ್ರಮಾದ ನಡೆದರೂ ಭಾರೀ ಅನಾಹುತ ನಡೆಯುವ ಸಂಭವ ಇತ್ತು. ಆದರೆ ಇದಕ್ಕೆ ಆಸ್ಪದ ನೀಡದಂತೆ ಖಾಕಿ ಪಡೆ ನೋಡಿಕೊಂಡಿತ್ತು.

ಇದೀಗ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

ಇನ್ನು ಪ್ರತಿಭಟನೆಗೆ ಬಂದಿದ್ದ ಮುಸ್ಲಿಂ ಬಾಂಧವರು ಪೊಲೀಸರಿಗೆ ಕೆಂಪು ಗುಲಾಬಿ ನೀಡಿ ಪ್ರೀತಿ ಸಂಕೇತ ನೀಡಿದ್ದು ವಿಶೇಷವಾಗಿತ್ತು. ಅಲ್ಲದೆ, ಪೊಲೀಸರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಭಟನಾಕಾರರು ಪೊಲೀಸರ ಪರ ಘೋಷಣೆ ಕೂಗಿದರು.

ಧನ್ಯವಾದ ಅರ್ಪಿಸಿದ ಭಾಸ್ಕರ್‌ರಾವ್‌:

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಿರುವ ನಗರ. ಇಲ್ಲಿ ಯಾವಾಗಲೂ ಶಾಂತಿ ಇರಬೇಕು. ಒಮ್ಮೆ ಅಹಿತಕರ ಘಟನೆ ನಡೆದರೆ ಅದನ್ನು ಸಹಜ ಸ್ಥಿತಿಗೆ ತರುವುದು ಕಷ್ಟ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಹಾಗೂ ನಗರದ ಜನತೆಗೆ ಧನ್ಯವಾದ ಅರ್ಪಿಸಿದರು.

'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'...

ಪ್ರತಿಭಟನೆಗೆ ಮುನ್ನ ನೀಡಿದ್ದ ಸೂಚನೆಯಂತೆ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಮುಸ್ಲಿಂ ಬಾಂಧವರು ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ಅವರೆಲ್ಲರಿಗೂ ನಮ್ಮ ಪೊಲೀಸ್‌ ಇಲಾಖೆಯಿಂದ ಧನ್ಯವಾದಗಳು. ಇನ್ನು ನನ್ನ ಇಲಾಖೆಯ ಕೆಳ ಹಂತದ ಕಾನ್ಸ್‌ಟೇಬಲ್‌-ಹೆಡ್‌ ಕಾನ್ಸ್‌ಟೇಬಲ್‌ನಿಂದ ಹಿಡಿದು ಪ್ರತಿಯೊಬ್ಬರು ಕಮಿಷನರ್‌ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಎಲ್ಲೆಲ್ಲೂ ಖಾಕಿ ಕಣ್ಗಾವಲು

ಸಮಾವೇಶಕ್ಕೆ ಸುಮಾರು ಒಂದು ಲಕ್ಷ ಮಂದಿ ಸಮಾವೇಶಕ್ಕೆ ಬರುತ್ತಾರೆ ಎಂಬ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತ ಕ್ರಮವಾಗಿ ಖುದ್ದೂಸ್‌ ಸಾಬ್‌ ಈದ್ಗಾ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಕೈಗೊಂಡಿದ್ದರು.

ಮುಸ್ಲಿಮರು ಹೆಚ್ಚಿರುವ ಗೋರಿಪಾಳ್ಯ, ನೀಲಸಂದ್ರ, ಶಿವಾಜಿನಗರ, ಆರ್‌.ಟಿ.ನಗರ, ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಪುಲಕೇಶಿನಗರ, ಚಾಮರಾಜಪೇಟೆ, ಮೈಸೂರು ರಸ್ತೆ, ನಾಗವಾರ, ಮುನಿರೆಡ್ಡಿ, ಸುಲ್ತಾನ್‌ಪಾಳ್ಯ, ಕಾವಲ್‌ಬೈರಸಂದ್ರ, ಮಾಗಡಿ ರಸ್ತೆ, ಪ್ಯಾಲೇಸ್‌ ಗುಟ್ಟಹಳ್ಳಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು, 10ಕ್ಕೂ ಹೆಚ್ಚು ಡಿಸಿಪಿ, 53 ಕೆಎಸ್‌ಆರ್‌ಪಿ, 60 ಸಿಎಆರ್‌ ತುಕಡಿ, ಎರಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌), 40 ಮಂದಿ ಎಸಿಪಿ, ಸಿಸಿಬಿ, ಸುಮಾರು 80 ಇನ್‌ಸ್ಪೆಕ್ಟರ್‌, 100 ಮಂದಿ ಪಿಎಸ್‌ಐ ಸೇರಿ ಐದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಗರದೆಲ್ಲೆಡೆ ಸೋಮವಾರ ಭದ್ರತೆಗೆ ಹಾಕಲಾಗಿತ್ತು.

ತಣ್ಣಗಾದ ಯುವಕ:  ಘೋಷಣೆ ಕೂಗುತ್ತಿದ್ದ ಯುವಕನೊಬ್ಬ ಪೊಲೀಸರ ತಪಾಸಣೆ ವೇಳೆ ಬಾಂಬ್‌ ಹಾಕುತ್ತೇವೆ ಎಂದು ಕಿರುಚಿದ. ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಜತೆಗಿದ್ದ ಸ್ನೇಹಿತರೊಬ್ಬರು ಆತನ ತಲೆಗೆ ಹೊಡೆದು ಸುಮ್ಮನಾಗಿಸಿದರು. ನಂತರ ಪೊಲೀಸರ ಕ್ಷಮೆ ಕೇಳಿದ್ದರಿಂದಾಗಿ ಆತನನ್ನು ಪೊಲೀಸರು ಬಿಟ್ಟು ಕಳುಹಿಸಿದರು.

PREV
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!