
ಬೆಂಗಳೂರು (ಡಿ.22): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅನಧಿಕೃತ ನೀರು ಹಾಗೂ ಒಳಚರಂಡಿ ಸಂಪರ್ಕಗಳ ವಿರುದ್ಧ ಸಮರ ಸಾರಿದೆ. ಮಂಡಳಿ ರಚಿಸಿರುವ ವಿಶೇಷ ಕಾರ್ಯಪಡೆ 'ಬ್ಲೂ ಫೋರ್ಸ್' (Blue Force) ಕಳೆದ ಒಂದು ತಿಂಗಳಲ್ಲಿ ನಗರದಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 4,000ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ ನೂರಾರು ಅನಧಿಕೃತ ಸಂಪರ್ಕಗಳನ್ನು ಪತ್ತೆಹಚ್ಚಿದೆ.
ಡಿಸೆಂಬರ್ 20, 2025 ರಂದು ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಬ್ಲೂ ಫೋರ್ಸ್ ತಂಡಗಳು ನಗರದ ವಿವಿಧ ವಲಯಗಳ 237 ಕಟ್ಟಡಗಳನ್ನು ತಪಾಸಣೆ ನಡೆಸಿವೆ. ಈ ವೇಳೆ ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ನೀರು ಬಳಸುತ್ತಿದ್ದ 70 ಸಂಪರ್ಕಗಳನ್ನು ಸ್ಥಳದಲ್ಲೇ ಕಡಿತಗೊಳಿಸುವ ಮೂಲಕ ಮಂಡಳಿ ಆದಾಯ ಸೋರಿಕೆಗೆ ಬ್ರೇಕ್ ಹಾಕಿದೆ. ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಅನಧಿಕೃತ ಸಂಪರ್ಕಗಳು ಪತ್ತೆಯಾಗಿವೆ. ಜಲಮಂಡಳಿಯ ಅಂಕಿಅಂಶಗಳ ಪ್ರಕಾರ, ನಗರದ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಅಂದರೆ 33 ಅನಧಿಕೃತ ನೀರಿನ ಸಂಪರ್ಕಗಳು ಪತ್ತೆಯಾಗಿವೆ.
ಈ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, 'ನೀರು ಕಳ್ಳತನ ಮತ್ತು ಅನಧಿಕೃತ ಸಂಪರ್ಕಗಳಿಂದ ಮಂಡಳಿಗೆ ದೊಡ್ಡ ಪ್ರಮಾಣದ ಆದಾಯ ನಷ್ಟವಾಗುತ್ತಿದೆ. ಇದನ್ನು ತಡೆಯಲು ಬ್ಲೂ ಫೋರ್ಸ್ ಹಗಲಿರುಳು ಶ್ರಮಿಸುತ್ತಿದೆ. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ತಪಾಸಣೆ ಇನ್ನೂ ತೀವ್ರಗೊಳ್ಳಲಿದೆ. ಅನಧಿಕೃತ ಸಂಪರ್ಕ ಹೊಂದಿರುವವರು ಕೂಡಲೇ ಮಂಡಳಿಯ ನಿಯಮಾನುಸಾರ ಸಕ್ರಮಗೊಳಿಸಿಕೊಳ್ಳಬೇಕು. ಇಲ್ಲದಿದ್ದರೆ ಭಾರಿ ದಂಡ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಆಸ್ತಿ ಮಾಲೀಕರು ಅನಧಿಕೃತ ಸಂಪರ್ಕಗಳನ್ನು ಹೊಂದಿದ್ದರೆ ತಕ್ಷಣವೇ ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಸಂಪರ್ಕಿಸಿ ಸಕ್ರಮ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಮಂಡಳಿ ಕೋರಿದೆ. ಬ್ಲೂ ಫೋರ್ಸ್‌ನ ಈ ಬಿಗಿ ಕ್ರಮದಿಂದಾಗಿ ಪ್ರಾಮಾಣಿಕವಾಗಿ ಬಿಲ್ ಪಾವತಿಸುವ ಗ್ರಾಹಕರಿಗೆ ನ್ಯಾಯ ಸಿಗಲಿದೆ ಎಂಬ ಆಶಯ ವ್ಯಕ್ತವಾಗಿದೆ.