ಹೊಳೆನರಸೀಪುರ: ವೈದ್ಯನ ನಿರ್ಲಕ್ಷಕ್ಕೆ ಉದ್ಯಮಿ ಬಲಿ!

By Kannadaprabha NewsFirst Published Oct 13, 2024, 9:54 AM IST
Highlights

ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡದ ವೈದ್ಯರ ನಿರ್ಲಕ್ಷ್ಯದಿಂದ ಸುಬ್ರಹ್ಮಣ್ಯ ಅವರು ಮೃತಪಟ್ಟಿದ್ದಾರೆ. ಇದರಿಂದಾಗಿ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ಇದಕ್ಕೆ ಕಾರಣರಾದ ವೈದ್ಯರು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕುಟುಂಬದ ಸದಸ್ಯರು ವಿನಂತಿಸಿದ್ದಾರೆ. 

ಹೊಳೆನರಸೀಪುರ(ಅ.13):  ಪಟ್ಟಣದ ಖ್ಯಾತ ಉದ್ಯಮಿ ಅಕ್ಕಿಗಿರಿಣಿ ಮಾಲೀಕ ಎಂ.ವಿ.ಸುಬ್ರಮಣ್ಯ ಅವರಿಗೆ ರಕ್ತದೊತ್ತಡ, ಇಸಿಜಿಯ ವರದಿಯಲ್ಲಿ ಹೃದಯಾಘಾತ ಆಗಿರುವ ಬಗ್ಗೆ ಸೂಚನೆ ಇದ್ದರೂ ಸೂಕ್ತ ಚಿಕಿತ್ಸೆ ನೀಡದೆ ಅಥವಾ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೂ ಕಳುಹಿಸದೆ ಕೇವಲ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದ ಸಾರ್ವಜನಿಕ ಆಸ್ಪತ್ರೆಯ ತರಬೇತಿ ವೈದ್ಯನ ಬೇಜವಾಬ್ದಾರಿಯಿಂದ ಉದ್ಯಮಿ ಗುರುವಾರ ಮೃತಪಟ್ಟಿದ್ದಾರೆ. ವೈದ್ಯನ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಪಟ್ಟಣದ ಎಸ್.ಎನ್.ಎಸ್ ರೈಸ್ಟಿಲ್ ಮಾಲೀಕ ಎಂ.ವಿ. ಸುಬ್ರಹ್ಮಣ್ಯ (55) ಅವರಿಗೆ ಗುರುವಾರ ಬೆಳಗಿನ ವೇಳೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬ ಸದಸ್ಯರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಇದ್ದ ವೈದ್ಯರು ಪರೀಕ್ಷಿಸಿ ಇಸಿಜಿ ಮಾಡಿಸಿದ್ದಾರೆ. ವೈದ್ಯರೇ ಚೀಟಿಯಲ್ಲಿ ಬರೆದು ಕೊಟ್ಟಿದ್ದಾರೆ. ಅದರಂತೆ ರೋಗಿಯ ರಕ್ತದೊತ್ತಡ 80/70 ಇದೆ. ಇಸಿಜಿಯಲ್ಲಿ ಅವರಿಗೆ ಹೃದಯಾಘಾತ ಆಗಿರುವ ಬಗ್ಗೆಯೂ ಹೇಳಲಾಗಿದೆ. ಆದರೂ ವೈದ್ಯರು ರೋಗಿಗೆ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ. 

Latest Videos

ಅಕ್ರಮ ಸಂಬಂಧ: ಗಾಂಜಾ ಕೇಸಲ್ಲಿ ಪ್ರಿಯತಮೆ ಪತಿಯ ಸಿಲುಕಿಸಲು ಯತ್ನಿಸಿ ತಾನೇ ಸಿಕ್ಕಿಬಿದ್ದ!

ಮನೆಗೆ ಹೋದ ನಂತರವೂ ಈ ವ್ಯಕ್ತಿಗೆ ಎದೆನೋವು ಕಡಿಮೆ ಆಗದ ಕಾರಣ ಇಲ್ಲಿನ ಖಾಸಗಿ ವೈದ್ಯರಲ್ಲಿ ಕರೆದುಕೊಂಡು ಹೋದಾಗ ಅವರು ಇಸಿಜಿಯನ್ನು ನೋಡಿ ಇವರಿಗೆ ಹೃದಯಾಘಾತ ಆಗಿದೆ. ತಕ್ಷಣ ಇವರನ್ನು ಹೃದಯ ರೋಗ ತಜ್ಞರಲ್ಲಿಗೆ ಕರೆದುಕೊಂಡು ಹೋಗಿ ಎಂದು ಕಳುಹಿಸಿದ್ದಾರೆ. 

ಈ ವ್ಯಕ್ತಿಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ವೇಳೆಗೆ ಆ ವ್ಯಕ್ತಿ ಮೃತಪಟ್ಟಿದ್ದು ಅವರ ಕುಟುಂಬ ದಿಕ್ಕು ಕಾಣದಂತಾಗಿದೆ. ಈ ಬಗ್ಗೆ ಕರ್ತವ್ಯ ನಿರತ ವೈದ್ಯ ಡಾ.ವಿನಯ್ ಅವರ ಗಮನ ಸೆಳೆದಾಗ, ಆ ದಿನ ನಾನೇ ಕರ್ತವ್ಯದಲ್ಲಿದ್ದು ವಾರ್ಡ್‌ಗಗಳಿಗೆ ರೌಂಡ್ ಹೋಗಿದ್ದೆ. ಆ ಸಮಯದಲ್ಲಿ ಸರ್ಜನ್ ತರಬೇತಿಗೆ ಹಾಸನದ ಹಿಮ್ಸ್ ಆಸ್ಪತ್ರೆಯಿಂದ ಆಗಮಿಸಿದ್ದ ವೈದ್ಯ ವಿದ್ಯಾರ್ಥಿ ಕಿರಣ್ ನನ್ನ ಗಮನಕ್ಕೂ ತಾರದೆ ರೋಗಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಬಗ್ಗೆ ನಮ್ಮ ಆಡಳಿತ ವೈದ್ಯಾಧಿಕಾರಿ ಅವರ ಗಮನಕ್ಕೆ ಬಂದಿದ್ದು ಅವರು ಈ ಬಗ್ಗೆ ನಿಯಮದಂತೆ ಕ್ರಮಕ್ಕೆ ಆಗ್ರಹಿಸುತ್ತಾರೆ ಎಂದು ತಿಳಿಸಿದರು. 

2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸಚಿವ ಸತೀಶ್‌ ಜಾರಕಿಹೊಳಿ

ಆರೋಗ್ಯ ರಕ್ಷಾ ಸಮಿತಿಯ ಎಚ್.ವಿ.ಸುರೇಶ್  ಕುಮಾರ್‌ ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಸೂಕ್ತ ಸಲಹೆ, ಮಾರ್ಗದರ್ಶನ ದೊರೆಯುತ್ತಿಲ್ಲ. ಪ್ರಯೋಗಾಲಯದಲ್ಲಿ ಅನೇಕ ಪರೀಕ್ಷೆಗಳು ನಡೆಯುತ್ತಿಲ್ಲ. ಕೆಲವು ವೈದ್ಯರು 11 ಗಂಟೆ ಆದರೂ ಆಸ್ಪತ್ರೆಗೆ ಬರುವುದಿಲ್ಲ. ಸಂಜೆ 3 ಗಂಟೆಗೆ ಮುನ್ನ ಮನೆಗೆ ತೆರಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳು ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ವೈದ್ಯರು ಅಗತ್ಯ ಇಲ್ಲದೇ ಇದ್ದರೂ ರೋಗಿಗಳಲ್ಲಿ ಆತಂಕ ಮೂಡಿಸಿ, ವಿನಾಕಾರಣ ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷೆಗಳಿಗೆ ಸೂಚಿಸುತ್ತಾರೆ. ಪಟ್ಟಣದಲ್ಲಿ ನಾಯಿಕೊಡೆಗಳಂತೆ ಖಾಸಗಿ ಪ್ರಯೋಗಾಲಯಗಳು ತಲೆ ಎತ್ತಿರುವುದು ಸಾಕ್ಷಿಯಾಗಿದೆ. ಪರೀಕ್ಷಿಸುವ ವ್ಯಕ್ತಿಯೂ ಅಗತ್ಯ ತರಬೇತಿ ಪಡೆದ ಯಾವುದೇ ಮಾಹಿತಿ ಇರುವುದಿಲ್ಲ. ಆದರೆ ವೈದ್ಯರು ಸೂಚಿಸಿದ ಪರೀಕ್ಷೆಗಳು ಸರಾಗವಾಗಿ ನಡೆಯುತ್ತೆ, ಇದರ ಬಗ್ಗೆಯೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ನಾಗರಿಕರು ಒತ್ತಾಯಿಸಿದ್ದಾರೆ. 

ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡದ ವೈದ್ಯರ ನಿರ್ಲಕ್ಷ್ಯದಿಂದ ಸುಬ್ರಹ್ಮಣ್ಯ ಅವರು ಮೃತಪಟ್ಟಿದ್ದಾರೆ. ಇದರಿಂದಾಗಿ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ಇದಕ್ಕೆ ಕಾರಣರಾದ ವೈದ್ಯರು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕುಟುಂಬದ ಸದಸ್ಯರು ವಿನಂತಿಸಿದ್ದಾರೆ. ಜತೆಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದ ಬಗ್ಗೆ ದೂರು ದಾಖಲಿಸುತ್ತೇವೆ ಎಂದೂ ತಿಳಿಸಿದ್ದಾರೆ.

click me!