ಜನರ ಹಾರೈಕೆ ಸ್ವರ್ಗ ಸೇರಿದ ತಮ್ಮ ಮಗನ ಮೇಲಿರಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯತ್‌ನಿಂದ ಭೂಮಿಯನ್ನು ಪಡೆದು ಈ ತಂಗುದಾಣ ನಿರ್ಮಾಣ ಮಾಡಲಾಗಿದೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಆ.23): ಅವರು ತಮ್ಮ ಮಗನನ್ನೇ ದೇಶಕ್ಕಾಗಿ ತ್ಯಾಗ ಮಾಡಿದ ಪೋಷಕರು. ಉಗ್ರರ ಜತೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಭಾರತೆ ಮಾತೆಯ ಆ ವೀರ ಪುತ್ರನ ನೆನಪಿಗಾಗಿ ಮನೆಯಂಗಳದಲ್ಲಿ ಮೂರ್ತಿ ಕೂಡಾ ಪ್ರತಿಷ್ಠಾಪನೆ ಮಾಡಿದ್ರು. ಇದೀಗ ಈ ಯೋಧನ ನೆನಪು ಚಿರಸ್ಮರಣೆಯಾಗಿರಬೇಕೆಂಬ ಉದ್ದೇಶದಿಂದ ಆ ಪೋಷಕರು ಸಮಾಜಕ್ಕಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದಾರೆ.
undefined
ಹೌದು, ಮಾದೇವ ನಾಯ್ಕ್ ಹಾಗೂ ಗೀತಾ ನಾಯ್ಕ್ ದಂಪತಿಯ ಒಬ್ಬನೇ ಪುತ್ರ ವಿನೋದ್ ಎಂ. ನಾಯ್ಕ್ 2001ರ ಜುಲೈ 2ರಂದು ಭಾರತೀಯ ಸೇನೆಗೆ ಸೇರಿದ್ದರು. 4 ವರ್ಷ 48 ದಿನಗಳ ಕಾಲ ದೇಶ ಸೇವೆ ಮಾಡಿದ ಅವರು 2005 ಆಗಸ್ಟ್ 18ರಂದು ಜಮ್ಮು ಕಾಶ್ಮೀರದಲ್ಲಿ ಉಗ್ರರ ಜತೆ ಸೆಣೆಸಾಡಿ ಭಾರತದ ಮಾತೆಯ ಮಡಿಲಿನಲ್ಲಿ ಪ್ರಾಣ ತ್ಯಾಗ ಮಾಡಿದ್ರು. ಈ ವೀರಯೋಧನ ತಂದೆ ಮಾದೇವ ನಾಯ್ಕ್ 28ವರ್ಷಗಳ ಕಾಲ ಬಿಣಗಾದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು. ಇನ್ನೇನು ಕೆಲವೇ ವರ್ಷದಲ್ಲಿ ತಾನು ನಿವೃತ್ತಿ ಪಡೆಯುತ್ತೇನೆ ಅನ್ನೋವಾಗಲೇ ತನ್ನ ಯೋಧ ಪುತ್ರ ಉಗ್ರರ ಜತೆಗಿನ ಸೆಣೆಸಾಟದಲ್ಲಿ ಇಹಲೋಕ ತ್ಯಜಿಸಿದ್ದ. ತನ್ನ ಕೆಲಸ ಬಿಟ್ಟು ಪುತ್ರ ಶೋಕದಲ್ಲೇ ಮುಳುಗಿದ್ದ ಈ ಪೋಷಕರು, ಪುತ್ರನನ್ನು ಅಜರಾಮರಗೊಳಿಸಲು ಅವರ ನೆನಪಿನ ಸಲುವಾಗಿ ಮನೆಯ ಅಂಗಳದಲ್ಲಿ ಪ್ರತಿಮೆ ಮಾಡಿ ಗುಡಿ ನಿರ್ಮಾಣ ಮಾಡಿದ್ದಾರೆ. ಈ ಯೋಧ ಹುತಾತ್ಮನಾಗಿ 18 ವರ್ಷ ಕಳೆದಿದ್ದರೂ, ಪೋಷಕರು ಇಂದಿಗೂ ಕಣ್ಣೀರು ಹರಿಸುತ್ತಿದ್ದಾರೆ. ಈ ನಡುವೆ ಮನಸ್ಸಿನ ಸಂತೋಷಕ್ಕಾಗಿ ಹಾಗೂ ಸಮಾಜಕ್ಕೆ ಉಪಯೋಗವಾಗಲೆಂದು ಇದೀಗ ಕಡವಾಡದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿದ್ದಾರೆ.
ಕಾಂಗ್ರೆಸ್‌ಗೆ ಬರುತ್ತೇನೆ ಎಂದು ಶಿವರಾಮ ಹೆಬ್ಬಾರ ಹೇಳಿಲ್ಲ: ಶಾಸಕ ಸತೀಶ್ ಸೈಲ್
ಕಡವಾಡದಲ್ಲಿ ಜನರು ಬಸ್‌ಗಾಗಿ ರಸ್ತೆ ಬದಿಯೇ ನಿಂತುಕೊಂಡು ಕಾಯಬೇಕಾದ ಪರಿಸ್ಥಿತಿಯಿತ್ತು. ಮಳೆ ಬಂದರೆ ಅಥವಾ ಸಿಕ್ಕಾಪಟ್ಟೆ ಬಿಸಿಲಿದ್ದರೆ ಜನರಿಗೆ ಪಕ್ಕದ ಅಂಗಡಿ ಆಶ್ರಯವಾಗಿತ್ತು. ಈ ಕಾರಣದಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯರಿಗೆ ಸಹಾಯವಾಗಬೇಕೆಂಬ ಉದ್ದೇಶದಿಂದ ಸರಕಾರದಿಂದ ಬಂದ ಹಣ ಹಾಗೂ ಪುತ್ರನ ಪೆನ್ಶನ್ ಒಟ್ಟುಗೂಡಿಸಿ ವೀರ ಯೋಧನ ಸ್ಮರಣಾರ್ಥ ಈ ಬಸ್ ತಂಗುದಾಣ ನಿರ್ಮಾಣ ಮಾಡಿದ್ದಾರೆ. ಮಗನ ನೆನಪು ಸದಾ ಶಾಶ್ವತವಾಗಿರಬೇಕು, ಜನರ ಹಾರೈಕೆ ಸ್ವರ್ಗ ಸೇರಿದ ತಮ್ಮ ಮಗನ ಮೇಲಿರಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯತ್‌ನಿಂದ ಭೂಮಿಯನ್ನು ಪಡೆದು ಈ ತಂಗುದಾಣ ನಿರ್ಮಾಣ ಮಾಡಲಾಗಿದೆ.
ಅಲ್ಲದೇ, ಮಗನ ಹೆಸರಿನಲ್ಲಿ ಡೆಪಾಸಿಟ್ ಹಣವಿಟ್ಟು ಆ ಹಣದಿಂದ ಬರುವ ಬಡ್ಡಿಯನ್ನು ಸ್ಥಳೀಯ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬಹುಮಾನದ ರೂಪದಲ್ಲಿ ನೀಡುವ ಮೂಲಕ ಇತರ ಮಕ್ಕಳಲ್ಲಿ ತಮ್ಮ ಮಗನನ್ನು ಕಾಣುತ್ತಿದ್ದಾರೆ ಈ ವೀರಯೋಧನ ಪೋಷಕರು.