ಶೀಘ್ರ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಿ 5 ರು. ದರದಲ್ಲಿ ನಿಗದಿತ ಸ್ಥಳಕ್ಕೆ ತಲುಪಲು ಅನುಕೂಲ ಒದಗಿಸುವ ಯೋಜನೆಗೆ ಚಾಲನೆ ನೀಡುವ ಬಗ್ಗೆ ಶಾಸಕರು ತಿಳಿಸಿದ್ದಾರೆ.
ಸಾಗರ [ಜ.09]: ಮಾರಿಜಾತ್ರೆ ಹಿನ್ನೆಲೆಯಲ್ಲಿ ನಗರ ಸಾರಿಗೆ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಜಾತ್ರೆಗೆ ಬರುವ ಭಕ್ತರನ್ನು, ಸಾರ್ವಜನಿಕರನ್ನು ಕನಿಷ್ಠ 5 ರು. ಶುಲ್ಕದಲ್ಲಿ ನಿಗದಿತ ಸ್ಥಳಕ್ಕೆ ಸಂಚರಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಎಚ್.ಹಾಲಪ್ಪ ತಿಳಿದರು.
ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಆರಂಭಿಸಿರುವ ಸಾಗರ-ಕೊಲ್ಲಾಪುರ 2 ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಜೊತೆಗೆ ಹತ್ತಿರದ ಗ್ರಾಮೀಣ ಭಾಗಕ್ಕೂ ನಗರಸಾರಿಗೆ ವ್ಯವಸ್ಥೆಯನ್ನು ಜಾತ್ರಾ ಸಂದರ್ಭದಲ್ಲಿ ವಿಸ್ತರಿಸಲಾಗುತ್ತದೆ ಎಂದರು.
ಈ ಮಾರ್ಗದಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮತ್ತೆ ಆರಂಭ...
ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಸಾರಿಗೆ ಅಭಿವೃದ್ಧಿಪಡಿಸಲು ಸಾರಿಗೆ ಸಚಿವರ ಜೊತೆಗೆ ಚರ್ಚೆ ನಡೆಸಿದ್ದು, ಮೊದಲ ಹಂತದಲ್ಲಿ 10 ಬಸ್‌ಗಳನ್ನು ಕೇಳಲಾಗಿತ್ತು. ಈಗ 2 ಬಸ್‌ಗಳನ್ನು ಒದಗಿಸಿದ್ದು, ಅದನ್ನು ಪ್ರಯಾಣಿಕರ ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಕೊಲ್ಲಾಪುರಕ್ಕೆ ಬಿಡಲಾಗಿದೆ. ಇನ್ನೂ 8 ಬಸ್‌ಗಳು ಶೀಘ್ರವಾಗಿ ಬರಲಿದ್ದು, ಅದನ್ನು ಅಗತ್ಯ ಕಡೆಗಳಿಗೆ ಪ್ರಯಾಣಿಕರು ಬೇಡಿಕೆಯನುಸಾರ ಬಿಡಲಾಗುತ್ತದೆ ಎಂದು ತಿಳಿಸಿದರು.
ಕೆಎಸ್ಸಾರ್ಟಿಸಿ ಬಸ್ ಬಾಡಿಗೆಗೆ ಲಭ್ಯ...
ಪ್ರಮುಖವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಸಾರಿಗೆ ನಿಗಮ ಬಸ್ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಬಸ್ ಶುಲ್ಕ ಕಡಿಮೆ ಇರುತ್ತದೆ. ಅಂದ ಮಾತ್ರಕ್ಕೆ ನಷ್ಟವಾಗುತ್ತದೆ ಎನ್ನುವುದು ಸರಿಯಲ್ಲ. ಬದಲಾಗಿ ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ಸಂಪರ್ಕ ಸಾರಿಗೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ರಾಜಪ್ಪ, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ವಿ.ಮಹೇಶ್, ಗಣೇಶ್ ಪ್ರಸಾದ್, ಪ್ರಮುಖರಾದ ಸತೀಶ್ ಮೊಗವೀರ, ರವೀಂದ್ರ ಬಿ.ಟಿ., ದೇವೇಂದ್ರಪ್ಪ, ವಿನಾಯಕ ರಾವ್ ಇನ್ನಿತರರು ಹಾಜರಿದ್ದರು.