ಚಿಕ್ಕೋಡಿ: ಕರ್ನಾಟಕ ರಾಜ್ಯೋತ್ಸವದಂದು ಡಾ. ರಾಜ್‌ ವೇಷ ಧರಿಸುವ ಬಸ್‌ ಕಂಡಕ್ಟರ್‌..!

By Kannadaprabha News  |  First Published Nov 1, 2022, 9:28 AM IST

ಡಾ.ರಾಜಕುಮಾರ ವೇಷಧಾರಿ ಹಾಗೂ ಕುದುರೆ ಗಾಡಿಯ ಮೂಲಕ ಜನರ ಮನಸ್ಸನ್ನು ಸೆಳೆಯುವುದು ಗಣೇಶ್‌ ಕನ್ನಡಪ್ರೇಮಕ್ಕೊಂದು ಧ್ಯೋತಕ 


ಡಿ.ಅನಿಲಕುಮಾರ ಚಿಕ್ಕೋಡಿ

ಚಿಕ್ಕೋಡಿ(ನ.01):  ವೃತ್ತಿಯಲ್ಲಿ ನಿರ್ವಾಹಕನಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ವಾಯವ್ಯ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಘಟಕದಲ್ಲಿ ಇದೀಗ ಪದೋನ್ನತಿ ಹೊಂದಿರುವ ಗಣೇಶ ಮೋಪಗಾರ ಅವರಿಗೆ ಕನ್ನಡವೇ ಉಸಿರು.
ಕನ್ನಡ ರಾಜ್ಯೋತ್ಸವ ಬಂದಿತೆಂದರೆ ಗಣೇಶ್‌ ಇರುವ ಘಟಕದಿಂದ ಒಂದು ಕನ್ನಡ ರೂಪಕ ನಿಶ್ಚಿತ. ಕನ್ನಡದ ಯಾವುದೇ ಸಮಾರಂಭವಿರಲಿ, ಸಾಹಿತ್ಯ ಸಮ್ಮೇಳನಗಳಿರಲಿ ಅಲ್ಲಿ ‘ಆಕಸ್ಮಿಕ’ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿನ ರೂಪಕ ನಿರ್ಮಿಸಿ, ಡಾ.ರಾಜಕುಮಾರ ವೇಷಧಾರಿ ಹಾಗೂ ಕುದುರೆ ಗಾಡಿಯ ಮೂಲಕ ಜನರ ಮನಸ್ಸನ್ನು ಸೆಳೆಯುವುದು ಗಣೇಶ್‌ ಕನ್ನಡಪ್ರೇಮಕ್ಕೊಂದು ಧ್ಯೋತಕ.

Tap to resize

Latest Videos

ಚಿಕ್ಕೋಡಿಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಗಣೇಶ ಮೋಪಗಾರ ಪ್ರದರ್ಶಿಸಿದ ವಾಯವ್ಯ ಸಾರಿಗೆ ಸಂಸ್ಥೆಯ ಕನ್ನಡ ರೂಪಕವು ಪ್ರಶಸ್ತಿ ಪಡೆದುಕೊಂಡಿದೆ. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಮೆರವಣಿಗೆಯಲ್ಲೂ ಗಣೇಶ್‌ ರೂಪಿಸಿದ್ದ ಕುದುರೆಗಾಡಿ ರೂಪಕವೇ ಮುಂಚೂಣಿಯಲ್ಲಿದ್ದು, ಅನೇಕರ ಮೆಚ್ಚುಗೆ ಪಡೆದಿತ್ತು.

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಯಲ್ಲಿ ಕನ್ನಡ ನಿತ್ಯೋತ್ಸವ..!

ಇವರು ನಿತ್ಯ ಕರ್ತವ್ಯ ನಿರ್ವಹಿಸುವ ಬಸ್ಸಿನಲ್ಲಿ ಕನ್ನಡ ಹಾಡು, ಹಾಸ್ಯದ ತುಣುಕುಗಳನ್ನು ಹೇಳುತ್ತ ಕನ್ನಡಮಯ ವಾತಾವರಣ ನಿರ್ಮಿಸುವ ಮೂಲಕ ಎಲೆಮರೆಯ ಕಾಯಿಯಂತೆ ಕನ್ನಡಪರ ಕೆಲಸವನ್ನು ಗಡಿಭಾಗದಲ್ಲಿ ಮಾಡುತ್ತಿದ್ದಾರೆ.

50000 ಕನ್ನಡಿಗರಿಗೆ ಇಂದು ಹೋಳಿಗೆ ಊಟ!

ಬೆಳಗಾವಿ: ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗಿದ್ದು, ಈಗಾಗಲೇ ಕನ್ನಡಪರ ಸಂಘಟನೆಗಳಿಂದ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವವರಿಗೆ 1 ಲಕ್ಷ ಹೋಳಿಗೆ ಹಾಗೂ ದಾಸೋಹದ ವ್ಯವಸ್ಥೆ ಮಾಡಿರುವುದು ಈ ಬಾರಿಯ ಕನ್ನಡ ಹಬ್ಬದ ವಿಶೇಷವಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವಕ್ಕೆ ಹೆಚ್ಚಿನ ಮೆರಗು ನೀಡುವ ನಿಟ್ಟಿನಲ್ಲಿ ಇಲ್ಲಿನ ಹುಕ್ಕೇರಿ ಹಿರೇಮಠದಿಂದ ಕನ್ನಡಾಭಿಮಾನಿಗಳಿಗೆ ಹೋಳಿಗೆ ಊಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ 50 ಸಾವಿರ ಕನ್ನಡಿಗರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಒಬ್ಬರಿಗೆ ತಲಾ ಎರಡು ಹೋಳಿಗೆಯಂತೆ ಒಂದು ಲಕ್ಷ ಹೋಳಿಗೆ ಸಿದ್ಧಪಡಿಸಲಾಗುತ್ತಿದೆ. ಹೋಳಿಗೆ ಜತೆಗೆ ಊಟದಲ್ಲಿ ಬದನೆಕಾಯಿ ಪಲ್ಯ, ಅನ್ನ ಸಾಂಬಾರ್‌ ಬಡಿಸಲಾಗುವುದು. ಅಡುಗೆ ಮಾಡಲು ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. 150 ಮಂದಿ ಮಹಿಳೆಯರಿಂದ ಹೋಳಿಗೆ ಹಾಗೂ 50 ಜನ ಪುರುಷರಿಂದ ಅನ್ನ, ಸಾಂಬಾರ್‌ ಹಾಗೂ ಕಾಯಿಪಲ್ಯ ತಯಾರಿ ಕಾರ್ಯ ನಡೆಯಲಿದೆ ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಹಿರಿಯ ನಟ ಸಾಯಿಕುಮಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಇನ್ನಿತರ ಗಣ್ಯರು ಹೋಳಿಗೆ ದಾಸೋಹಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದಲೇ ಹೋಳಿಗೆ ದಾಸೋಹ ಪ್ರಾರಂಭ ಆಗಲಿದೆ. ಹೋಳಿಗೆ ತಯಾರಿಕೆಗೆ ತಲಾ 10 ಕ್ವಿಂಟಲ್‌ಗೂ ಹೆಚ್ಚು ಕಡಲೆ, ಬೆಲ್ಲ, 500 ಕೆ.ಜಿ.ಗೂ ಹೆಚ್ಚು ಎಣ್ಣೆ, 4 ಸಾವಿರ ಕೆ.ಜಿ. ಅಕ್ಕಿ ತರಿಸಿಕೊಳ್ಳಲಾಗಿದೆ. ಅಲ್ಲದೆ, ಶಿವಮೊಗ್ಗದಿಂದ 50 ಸಾವಿರಕ್ಕೂ ಅಧಿಕ ಅಡಿಕೆ ತಟ್ಟೆಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದರು.

ಕರಾಳ ದಿನಾಚರಣೆ ಸಾಧ್ಯತೆ: ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್‌

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರಾರ‍ಯಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಪ್ರತಿವರ್ಷ ಕರಾಳ ದಿನ ಆಚರಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದು, ಈ ಬಾರಿಯೂ ಅಂಥ ದುಸ್ಸಾಹ ಮಾಡುವುದಾಗಿ ಈಗಾಗಲೇ ಮರಾಠಿ ಪುಂಡರು ಘೋಷಿಸಿದ್ದಾರೆ. ಗಡಿಯಲ್ಲಿ ಭಾಷಾ ಸಾಮರಸ್ಯ ಕದಡುವ ಈ ಕೆಲಸಕ್ಕೆ ಮಹಾರಾಷ್ಟ್ರದಿಂದ ಶಿವಸೇನೆ ನಾಯಕರಿಂದಲೂ ಬೆಂಬಲ ಸಿಕ್ಕಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ ನಗರ ಮತ್ತು ಜಿಲ್ಲೆಯ ಗಡಿಭಾಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

Belagavi: 49 ವರ್ಷಗಳಿಂದ ದಿನಪತ್ರಿಕೆ ವಿತರಣೆ ಮಾಡುವಾತನಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ!

ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಹೆದ್ದಾರಿ ನ.4ರ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ ಮೂಲಕ ಕರ್ನಾಟಕದ ಗಡಿ ಪ್ರವೇಶಕ್ಕೆ ಯತ್ನಿಸಿದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ತಡೆಹಿಡಿದು ವಾಪಸ್‌ ಕಳುಹಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಮುಖಂಡ ವಿಜಯ ದೇವಣೆ ನೇತೃತ್ವದಲ್ಲಿ ವಿಜಯ ಜ್ಯೋತಿ ಯಾತ್ರೆ ಮೂಲಕ ಶಿವಸೇನೆ ಕಾರ್ಯಕರ್ತರು ರಾಜ್ಯದ ಗಡಿದಾಟಲು ಮುಂದಾದಾಗ ಚೆಕ್‌ಪೋಸ್ಟ್‌ನಲ್ಲೇ ಪೊಲೀಸರು ತಡೆ ಹಿಡಿದರು. ಪೊಲೀಸರ ಕ್ರಮ ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಸ್ಥಳದಲ್ಲೇ ಕೆಲಕಾಲ ಧರಣಿ ನಡೆಸಿದರು.

2500ಕ್ಕೂ ಹೆಚ್ಚು ಪೊಲೀಸರ ಭದ್ರತೆ: ಕರ್ನಾಟಕ ರಾಜ್ಯೋತ್ಸವ ಹಾಗೂ ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಭದ್ರತೆಗೆ 2500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 3 ಜನ ಡಿಸಿಪಿ, 12 ಎಸಿಪಿ, 52 ಇನ್‌ಸ್ಪೆಕ್ಟರ್‌, 10 ಕೆಎಸ್‌ಆರ್‌ಪಿ, 500 ಹೋಮ್‌ಗಾರ್ಡ್‌ಗಳನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು,, 8 ಡ್ರೋನ್‌ ಕ್ಯಾಮೆರಾ, 300 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
 

click me!