Bus Catches Fire in Yallapur : ಹೊತ್ತಿ ಉರಿದ ಖಾಸಗಿ ಬಸ್‌, 25 ಮಂದಿ ಪಾರು

By Kannadaprabha News  |  First Published Dec 17, 2021, 7:48 AM IST
  • ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಟೈರ್‌ ಸ್ಫೋಟ
  • ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ, ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ
  • ಬಸ್‌ನಲ್ಲಿ 22 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿ ಇದ್ದರು

ಯಲ್ಲಾಪುರ (ಡಿ.17) : ಮುಂಬೈನಿಂದ ಮಂಗಳೂರಿಗೆ (Mangaluru) ತೆರಳುತ್ತಿದ್ದ ಖಾಸಗಿ ಬಸ್ಸಿನ (Bus) ಟೈರ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ, ಬಸ್‌ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಲ್ಲಿ ಜರುಗಿದೆ. ಆದರೆ ಅದೃಷ್ಟವಶಾತ್‌ ಬಸ್ಸಿನ ಸಿಬ್ಬಂದಿ ಹಾಗೂ ಕೆಲ ಪ್ರಯಾಣಿಕರ (Passengers)  ಸಮಯಪ್ರಜ್ಞೆಯಿಂದ ಬಸ್ಸಲ್ಲಿದ್ದ 22 ಪ್ರಯಾಣಿಕರು, ಮೂವರು ಸಿಬ್ಬಂದಿ ಪಾರಾಗಿದ್ದಾರೆ. ಟೈರ್‌ ಸ್ಫೋಟಿಸಿ ಬೆಂಕಿಹೊತ್ತಿದ್ದನ್ನು ಗಮನಿಸಿದ ಚಾಲಕ ತಕ್ಷಣ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಎಬ್ಬಿಸಿ ಕೆಳಗಿಳಿಸಿದ್ದರಿಂದ ಪ್ರಾಣಹಾನಿ ತಪ್ಪಿತು.

ಮೆರ್ಸಿ ಟ್ರಾವಲ್ಸ್‌ಗೆ ಸೇರಿದ ಈ ಸ್ಲೀಪರ್‌ ಕೋಚ್‌ ಬಸ್‌ ಮುಂಬೈನಿಂದ (Mumbai) ಮಂಗಳೂರಿನ ಕಡೆ ತೆರಳುತ್ತಿತ್ತು. ಬಸ್‌ನಲ್ಲಿ 22 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿ ಇದ್ದರು. ಬಹುತೇಕ ಎಲ್ಲಾ ಪ್ರಯಾಣಿಕರು ಸುಖ ನಿದ್ದೆಯಲ್ಲಿದ್ದಾಗ ಬೆಳಗಿನ ಜಾವ 5ರ ಹೊತ್ತಿಗೆ ಜೋಡುಕೆರೆ ಮಾರುತಿ ದೇವಸ್ಥಾನದ(Temple) ಎದುರು ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬಸ್ಸಿನ ಹಿಂಬದಿಯ ಟೈರೊಂದು ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ. 

Tap to resize

Latest Videos

ಆಗ ಬಸ್ಸನ್ನು ನಿಯಂತ್ರಿಸಲು ಚಾಲಕ ಹರಸಾಹಸ ಪಡಬೇಕಾಯಿತು. ಟೈರ್‌ ಸ್ಫೋಟಗೊಂಡ ಬೆನ್ನಲ್ಲೇ ಬೆಂಕಿ (Fire) ಹೊತ್ತಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಅದು ಸಂಪೂರ್ಣವಾಗಿ ಬಸ್ಸಿಗೆ ಆವರಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ, ಕೆಲ ಪ್ರಯಾಣಿಕರು ತಕ್ಷಣ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರನ್ನು ಎಬ್ಬಿಸಿದ್ದಾರೆ. ಎಲ್ಲರೂ ಕೈಗೆ ಸಿಕ್ಕಷ್ಟುಸಾಮಾನುಗಳೊಂದಿಗೆ ಬಸ್ಸಿಂದ ಕೆಳಕ್ಕಿಳಿದಿದ್ದಾರೆ. ಪಯಾಣಿಕರನ್ನು ನಂತರ ಬೇರೊಂದು ಬಸ್ಸಿನಲ್ಲಿ ಅವರವರ ಊರಿಗೆ ಕಳುಹಿಸಲಾಯಿತು.

ಸಂಪೂರ್ಣ ಅಪಾರ್ಟ್‌ಮೆಂಟ್ ಧಗ ಧಗ :  ನಗರದ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ(Apartment) ಅಗ್ನಿ(Fire) ಅವಘಡ ಸಂಭವಿಸಿದ್ದು, ಫ್ಲ್ಯಾಟ್‌ವೊಂದು ಧಗ ಧಗ ಹೊತ್ತಿ ಉರಿದ ಘಟನೆ ಎಲೆಕ್ಟ್ರಾನಿಕ್‌ ಸಿಟಿಯ(Electronic City) ಸಂಪಿಗೆ ನಗರದಲ್ಲಿ ನಡೆದಿತ್ತು.  ಇತ್ತೀಚೆಗೆ ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ತಾಯಿ-ಮಗಳಿಬ್ಬರು ಬಲಿಯಾಗಿದ್ದರು.

ಬುಧವಾರ ಮಧ್ಯಾಹ್ನ ಸಂಪಿಗೆ ನಗರದ ವಿ ಮ್ಯಾಕ್ಸ್‌ ಚಾನೆಟ್‌ ಅಪಾರ್ಟ್‌ಮೆಂಟ್‌ನಲ್ಲಿ(V Max Chanet Apartment) (ಫ್ಲ್ಯಾಟ್‌ ನಂ.119) ಡಾ.ಜಯ ಪಿಳೈ ಎಂಬ ವೈದ್ಯ ದಂಪತಿಗೆ ಸೇರಿದ ಫ್ಲ್ಯಾಟ್‌ನಲ್ಲಿ(Flat) ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡ ಸಂಭವಿಸಿದಾಗ ಡಾ.ಜಯ ಅವರ ತಾಯಿ ಕಾತ್ಯಾಯಿನಿ ಫ್ಲ್ಯಾಟ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ಬೆಂಕಿಯನ್ನು ಕಂಡು ಕಾತ್ಯಾಯಿನಿ ಆಚೆ ಬಂದಿದ್ದು, ಜೋರಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಜನರ ಕೂಗಾಟ, ದಟ್ಟಹೊಗೆ ಕಂಡು ಅಪಾರ್ಟ್‌ಮೆಂಟ್‌ನ ನಿವಾಸಿಗಳ ಆಚೆ ಓಡಿ ಬಂದಿದ್ದರು.

ನೋಡ ನೋಡುತ್ತಿದ್ದಂತೆ ಮನೆಯಲ್ಲಿದ್ದ ಬಟ್ಟೆ, ಪೀಠೋಪಕರಣಗಳಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ(Fire Biragade) ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ಬೆಂಕಿ ನಂದಿಸಿದ್ದಾರೆ. ಈ ಮೂಲಕ ಪಕ್ಕದ ಫ್ಲ್ಯಾಟ್‌ಗೂ ಬೆಂಕಿ ಹಬ್ಬುವುದನ್ನು ತಪ್ಪಿಸಿದ್ದಾರೆ. ಅದೃಷ್ಟವಶಾತ್‌ ದುರಂತದ ವೇಳೆ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಶಾರ್ಟ್‌ ಸರ್ಕಿಟ್‌ ಅಗ್ನಿ(Short circuit) ಅವಘಡಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ದೂರು(Complaint) ದಾಖಲಾಗಿದೆ. ಪೊಲೀಸರು(Police) ತನಿಖೆ(Investigation) ಚುರುಕುಗೊಳಿಸಿದ್ದರು..

ಜನರ ಜೀವ ಉಳಿಸಿದ ‘ಅಪ್ಪು’

ಅಗ್ನಿ ಅವಘಡದ ವೇಳೆ ಜನರ ಜೀವ ಉಳಿಯಲು ‘ಅಪ್ಪು’ ಎಂಬ ಶ್ವಾನ(Dog) ಕಾರಣ ಎಂದು ಹೇಳಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ, ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಶ್ವಾನ ಜೋರಾಗಿ ಬೊಗಳುತ್ತಾ ಇಡೀ ಅಪಾರ್ಟ್‌ಮೆಂಟ್‌ ತುಂಬಾ ಓಡಾಡಿದೆ. ನಾಯಿ ಬೊಗಳುವುದನ್ನು ಕಂಡು ನಿವಾಸಿಗಳು ಫ್ಲ್ಯಾಟ್‌ನಿಂದ ಆಚೆ ಬಂದಿದ್ದಾರೆ. ಹೊಗೆ ಆವರಿಸಿರುವುದನ್ನು ಕಂಡು ಅಪಾಯದ ಸುಳಿವನ್ನು ಅರಿತು ನಿವಾಸಿಗಳೆಲ್ಲಾ ಅಪಾರ್ಟ್‌ಮೆಂಟ್‌ನಿಂದ ಆಚೆ ಓಡಿ ಬಂದಿದ್ದಾರೆ. ಇದರಿಂದ ಸಂಭವಿಸಬಹುದಿದ್ದ ಭಾರೀ ಅನಾಹುತ ತಪ್ಪಿದೆ. ಹೀಗೆ ಜನರ ಜೀವ ಉಳಿಯಲು ನಾಯಿಯ ಸಮಯ ಪ್ರಜ್ಞೆಯೇ ಕಾರಣ ಎಂದು ಸ್ಥಳೀಯರು, ಅಪಾರ್ಟ್‌ಮೆಂಟ್‌ ನಿವಾಸಿಗಳು ಹೇಳಿದ್ದರು.

ಬೆಂಗಳೂರು : ಫ್ಲ್ಯಾಟ್‌ನಲ್ಲಿ ಬೆಂಕಿ ಅವಘಢ, ತಾಯಿ- ಮಗಳು ಸಜೀವ ದಹನ

ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ತಾಯಿ-ಮಗಳು ಸಜೀವ ದಹನಗೊಂಡ(Death) ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ದೇವರ ಚಿಕ್ಕನಹಳ್ಳಿಯಲ್ಲಿ ಸೆ. 22 ರಂದು ನಡೆದಿತ್ತು. ಎರಡು ಜೀವಗಳು ಸಜೀವವಾಗಿ ದಹನಗೊಂಡಿದೆ.  ದೇವರ ಚಿಕ್ಕನಹಳ್ಳಿ ನಿವಾಸಿ ಲಕ್ಷ್ಮೇದೇವಿ (82) ಹಾಗೂ ಇವರ ಪುತ್ರಿ ಭಾಗ್ಯರೇಖಾ (59) ಸಜೀವ ದಹನಗೊಂಡಿದ್ದರು. 

ಭೀಮಸೇನ್‌ ಅವರು ಪತ್ನಿ ಭಾಗ್ಯರೇಖಾ ಹಾಗೂ ಅತ್ತೆ ಲಕ್ಷ್ಮೇದೇವಿ ಅವರೊಂದಿಗೆ ಮೂರನೇ ಅಂತಸ್ತಿನ 210 ಸಂಖ್ಯೆಯ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಪುತ್ರಿ ಪ್ರೀತಿ ಮತ್ತು ಅಳಿಯ ಸಂದೀಪ್‌ ಅಮೆರಿಕದಲ್ಲಿ ನೆಲೆಸಿದ್ದರಿಂದ ಅಳಿಯನ ಫ್ಲ್ಯಾಟನ್ನು ಕೂಡ ಭೀಮಸೇನ್‌ ಅವರೇ ಉಪಯೋಗಿಸುತ್ತಿದ್ದರು. ಆರು ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಭೀಮಸೇನ್‌ ದಂಪತಿ ಸೋಮವಾರ ತಡರಾತ್ರಿಯಷ್ಟೇ ಬೆಂಗಳೂರಿಗೆ ವಾಪಸ್‌ ಆಗಿದ್ದರು. 

ಬೆಂಗಳೂರಿನ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಸೆ.14 ರಂದು ನಡೆದಿತ್ತು. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸಿದ್ದರು. 

ಹೋಟೆಲ್‌ನಲ್ಲಿ ಸಂಪೂರ್ಣವಾಗಿ ದಟ್ಟವಾಗಿ ಹೊಗಡೆ ಆವರಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕೆಯಿಂದ  ಅನಾಹುತ ತಪ್ಪಿದೆ. ಐವರನ್ನು ರಕ್ಷಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ. ಲಕ್ಷಾಂತರ ರು ಮೌಲ್ಯದ ಪೀಠೋಪಕರಣ ಭಸ್ಮವಾಗಿತ್ತು

click me!