ಘನತ್ಯಾಜ್ಯ ಟೆಂಡರ್ ಅವ್ಯವಹಾರ: ರದ್ದುಪಡಿಸಲು ಛಲವಾದಿ ನಾರಾಯಣಸ್ವಾಮಿ ಒತ್ತಾಯ

Published : May 03, 2026, 07:32 PM IST
chalavadi narayanaswamy

ಸಾರಾಂಶ

ಅವ್ಯವಹಾರ ಪ್ರಕರಣದ ಲೋಕಾಯುಕ್ತ ತನಿಖೆ ಪೂರ್ಣಗೊಳ್ಳುವವರೆಗೆ ಅನುಮೋದನೆ ನಿರೀಕ್ಷಿಸಿರುವ ಟೆಂಡರ್‌ನ್ನು ರದ್ದುಪಡಿಸಬೇಕು ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು (ಮೇ.03): ನಗರದ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಟೆಂಡ‌ರ್‌ನಲ್ಲಿ ಅವ್ಯವಹಾರ ಪ್ರಕರಣದ ಲೋಕಾಯುಕ್ತ ತನಿಖೆ ಪೂರ್ಣಗೊಳ್ಳುವವರೆಗೆ ಅನುಮೋದನೆ ನಿರೀಕ್ಷಿಸಿರುವ ಟೆಂಡರ್‌ನ್ನು ರದ್ದುಪಡಿಸಬೇಕು ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಟೆಂಡ‌ರ್‌ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಈಗಾಗಲೇ ಲೋಕಾಯುಕ್ತ ಮತ್ತು ಉಚ್ಚ ನ್ಯಾಯಾಲಯದಲ್ಲಿ ದೂರು, ಮೊಕದ್ದಮೆ ದಾಖಲಾಗಿದೆ. ಟೆಂಡರ್ ದಾಖಲೆಗಳ ಪ್ರಕಾರ ಕನಿಷ್ಠ ಅರ್ಹತೆ ಇರದಿದ್ದರೂ ತಾಂತ್ರಿಕ ಸಮಿತಿಯು ಕಾನೂನು ಬಾಹಿರವಾಗಿ ಅನರ್ಹ ಗುತ್ತಿಗೆದಾರರನ್ನು ಅರ್ಹಗೊಳಿಸಿದೆ.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಗುತ್ತಿಗೆದಾರರು ಸಲ್ಲಿಸಿದ್ದ ಮೇಲ್ಮನವಿಗಳಲ್ಲಿ ಕೆಲವನ್ನು ಮಾತ್ರ ಪುರಸ್ಕರಿಸಿ ಅಪೂರ್ಣ ವಿಚಾರಣೆ ನಡೆಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರ್ಥಿಕ ಇಲಾಖೆ ಆದೇಶ ಮತ್ತು ಲೋಕೋಪಯೋಗಿ ಇಲಾಖೆಯ ದರ ಸಂಧಾನ ನಿಯಮಾವಳಿ ಆದೇಶಗಳನ್ನು ಉಲ್ಲಂಘಿಸಿ ಅಂದಾಜು ವೆಚ್ಚಕ್ಕಿಂತ ಶೇ.14ರಷ್ಟು ಹೆಚ್ಚುವರಿ ದರಕ್ಕೆ ಟೆಂಡರ್ ನೀಡಲು ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯು ಸರ್ಕಾರಕ್ಕೆ ಕಾನೂನು ಬಾಹಿರವಾಗಿ ಶಿಫಾರಸು ಮಾಡಿದೆ. ಇದಕ್ಕೆ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ, ವಾಹನ ಬಿಡಿಭಾಗಗಳ ಬೆಲೆ ಏರಿಕೆಯ ಕಾರಣ ನೀಡಲಾಗಿದೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ

ಆದರೆ ಟೆಂಡರ್ ಕರೆದ ದಿನದಿಂದ ಈವರೆಗೆ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಹೆಚ್ಚುವರಿ ದರದ ಶಿಫಾರಸು ಮಾಡಿರುವುದು ಜನರ ತೆರಿಗೆ ಹಣ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಅವ್ಯವಹಾರದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ನಗರಾಭಿವೃದ್ಧಿ ಇಲಾಖೆಯಲ್ಲಿ ಸರ್ಕಾರದ ಅನುಮೋದನೆ ನಿರೀಕ್ಷಿಸಿರುವ ಟೆಂಡರ್‌ನ್ನು ಲೋಕಾಯುಕ್ತ ತನಿಖೆ ಮುಗಿಯುವವರೆಗೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

1900 ಕಿಮೀ ಪ್ರಯಾಣ, ಜಸ್ಟ್ 6 ನಿಲುಗಡೆ; ಬೆಂಗಳೂರಿನಿಂದ ಎಲ್ಲಿಗೆ ಹೋಗುತ್ತೆ ಈ ಸೂಪರ್‌ಫಾಸ್ಟ್ ರೈಲು!
ಮಂತ್ರಿ ಇದ್ದಾಗ 2 ಬಾರಿ ಅಧ್ಯಕ್ಷಗಿರಿ ಆಫರ್‌ ಬಂದಿತ್ತು: ಸಚಿವ ಎಂ.ಬಿ.ಪಾಟೀಲ ಹೇಳಿದ್ದೇನು?