ಟೀಕಿಸುವ ಕೆಲಸ ಮಾಡಿದರೆ ಅವರು ಹೋಗುವ ಸ್ಥಳಗಳಲ್ಲಿ ಘೇರಾವ್ ಮಾಡಬೇಕಾಗುತ್ತದೆ ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ ಮುಕಂಡರು.
ರಾಮನಗರ (ಜ.28): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ)ಯನ್ನು ಟೀಕಿಸುವ ಕೆಲಸ ಮಾಡಿದರೆ ಅವರು ಹೋಗುವ ಸ್ಥಳಗಳಲ್ಲಿ ಘೇರಾವ್ ಮಾಡಬೇಕಾಗುತ್ತದೆ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ತಪ್ಪಾಯಿತು ಎಂದು ಕುಮಾರಸ್ವಾಮಿ ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಹತ್ತಿದ ಏಣಿಯನ್ನು ಒದೆಯುವುದು ದೇವೇಗೌಡ ಕುಟುಂಬದವರ ರಾಜಕೀಯ ಚರಿತ್ರೆಯಲ್ಲಿದೆ. ಅದನ್ನೇ ಕುಮಾರಸ್ವಾಮಿ ಪಾಲಿಸುತ್ತಿದ್ದಾರೆ ಎಂದು ಟೀಕಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಿಸಿದ ಕುಮಾರಸ್ವಾಮಿ .
ಚುನಾವಣೆಯಲ್ಲಿನ ಮೈತ್ರಿಯಿಂದ ಜೆಡಿಎಸ್ನಿಂದ ಬಿಎಸ್ಪಿಗೆ ಹಾನಿಯಾಗಿದೆಯೇ ಹೊರತು ಬಿಎಸ್ಪಿಯಿಂದ ಜೆಡಿಎಸ್‌ಗೆ ಯಾವುದೇ ಹಾನಿಯಾಗಿಲ್ಲ. ರಾಜ್ಯದಲ್ಲಿರುವ 224 ಕ್ಷೇತ್ರಗಳ ಪೈಕಿ ಬಿಎಸ್ಪಿ ಕೇವಲ 19 ಸೀಟುಗಳನ್ನು ಬಿಟ್ಟುಕೊಟ್ಟಿದ್ದು, ಈ ಜಾಗಗಳಲ್ಲಿ ಜೆಡಿಎಸ್ 5-6ನೇ ಸ್ಥಾನದಲ್ಲಿರುವ ಕ್ಷೇತ್ರಗಳಾಗಿವೆ. ಆದರೆ, ಬಿಎಸ್ಪಿಯು 2-3ನೇ ಸ್ಥಾನದಲ್ಲಿರುವ ಸುಮಾರು ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.
ಚುನಾವಣೆಯಲ್ಲಿ 18-20 ಜಿಲ್ಲೆಗಳಲ್ಲಿ ಬಿಎಸ್ಪಿಯಿಂದ ಜೆಡಿಎಸ್‌ಗೆ ಅನುಕೂಲವಾಗಿದೆ. ಜೆಡಿಎಸ್ ಜೊತೆ ಬಿಎಸ್ಪಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕನಿಷ್ಠ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಸುಮಾರು 10-12 ಲಕ್ಷ ವೋಟು ಬರುತ್ತಿತ್ತು. ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್.ಮಹೇಶ್ ಅವರು ಗೆಲುವು ಸಾಧಿಸಿರುವುದು ಪಕ್ಷ ಹಾಗೂ ಸ್ವಂತ ಛಲದಿಂದ ಹೊರೆತು ಜೆಡಿಎಸ್ ನಿಂದಲ್ಲ. ಕುಮಾರಸ್ವಾಮಿ ಅವರು ಮಾತನಾಡುವಾಗ ಎಚ್ಚರವಹಿಸಬೇಕು ಎಂದು ಮುನಿಯಪ್ಪ ಸಲಹೆ ನೀಡಿದರು.
ಫೆ. 1ರಂದು ಡೀಸಿ ಕಚೇರಿ ಎದುರು ಪ್ರತಿಭಟನೆ:
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮುಂದುವರೆಸುವುದು, ಜನಸಂಖ್ಯೆಗೆ ಅನುಗುಣವಾಗಿ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ. 1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮುನಿಯಪ್ಪ ಹೇಳಿದರು.
ಕೇಂದ್ರ ಸರ್ಕಾರ ರೈತ ವಿರೋಧಿಯಾದ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ರೈತರನ್ನು ಭಯೋತ್ಪಾದಕರೆಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮುಂತಾದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದು, ಇದರಿಂದ ಕೋಟ್ಯಂತರ ಜನರಿಗೆ ತೊಂದರೆ ಆಗುತ್ತಿದೆ. ಎಲ್ಲಾ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಮುನಿಯಪ್ಪ ಒತ್ತಾಯ ಮಾಡಿದರು.