'ಈ ಬಾರಿ ಸಂಸತ್‌ ಕಲಾಪ ನಡೆಯಲು ಬಿಡೋದಿಲ್ಲ'

By Kannadaprabha News  |  First Published Jan 28, 2021, 12:59 PM IST

ಕೇಂದ್ರ ಸರ್ಕಾರದ ಅನ್ನದಾತ ವಿರೋಧಿ ನೀತಿ ಜಾರಿಗೊಳಿಸುವ ಉದ್ದೇಶಕ್ಕಾಗಿ ಮೊಂಡುತನ ಪ್ರದರ್ಶನ| ಪ್ರಧಾನಿ ಒಂದೇ ಒಂದು ಬಾರಿ ರೈತ ಸಾವಿನ ಬಗ್ಗೆ ಮಾತನಾಡಲಿಲ್ಲ. ಟ್ವಿಟರ್‌ನಲ್ಲಿ ನಮೂ​ದಿ​ಸ​ಲಿ​ಲ್ಲ. ಆದರೆ, ಕ್ರಿಕೆಟ್‌ ಆಟಗಾರ ಆಸ್ಪತ್ರೆಯಿಂದ ಬಿಡುಗಡೆಯಾದರೆ ಟ್ವಿಟರ್‌ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ: ಸೈಯದ್‌ ನಾಸಿರ್‌ ಹುಸೇನ್‌| 


ಬಳ್ಳಾರಿ(ಜ.28):  ಕೃಷಿ ಕಾಯ್ದೆ ತಿದ್ದುಪಡಿ ಮೂಲಕ ರೈತ ವಿರೋಧಿಯಾಗಿ ವರ್ತಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹೋರಾಟ ಮುಂದುವರಿಸಲಿದ್ದು, ಜ. 29ರಿಂದ ಶುರುವಾಗುವ ಬಜೆಟ್‌ ಅಧಿವೇಶನಕ್ಕೆ ಮಾತ್ರ ಅವಕಾಶ ನೀಡಿ ಉಳಿದಂತೆ ಸಂಸತ್‌ ಕಲಾಪ ನಡೆಯದಂತೆ ಚಳುವಳಿ ನಡೆಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ಡಾ. ಸೈಯದ್‌ ನಾಸಿರ್‌ ಹುಸೇನ್‌ ಹೇಳಿದರು.

ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಪ್ರಗತಿಪರ ಹೋರಾಟಗಾರರಾದ ಸಿರಿಗೇರಿ ಪನ್ನರಾಜ್‌, ಟಿ.ಜಿ. ವಿಠಲ್‌, ರೈತ ಸಂಘದ ಮಾಧವರೆಡ್ಡಿ ಅವರ ಜತೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನ್ನದಾತ ವಿರೋಧಿ ನೀತಿ ಜಾರಿಗೊಳಿಸುವ ಉದ್ದೇಶಕ್ಕಾಗಿ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.

Tap to resize

Latest Videos

ಕೃಷಿ ಕಾಯ್ದೆ ತಿದ್ದುಪಡಿ ಸೇರಿದಂತೆ ಮೂರು ತಿದ್ದುಪಡಿಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಇದನ್ನು ನಾವು ಸಂಸತ್‌ನಲ್ಲಿ ವಿರೋಧಿಸಿದ್ದೆವು. ಕಾಯ್ದೆ ತಿದ್ದುಪಡಿಯಿಂದಾಗುವ ಅಪಾಯಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಎರಡು ತಿಂಗಳಿನಿಂದ ರೈತರು ಅನಿರ್ದಿಷ್ಟಧರಣಿ ಕೈಗೊಂಡಿದ್ದರೂ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಬದಲು, ಬರೀ ಮಾತುಕತೆ ಹೆಸರಿನಲ್ಲಿ ವಿಳಂಬ ಮಾಡುತ್ತಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರಕ್ಕೆ ಸಣ್ಣ ಹಾಗೂ ಅತಿ ಸಣ್ಣ ರೈತರ ಹಿತ ಕಾಯುವ ಯಾವುದೇ ಕಾಳಜಿ ಇಲ್ಲ. ಹೀಗಾಗಿಯೇ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳುವ ಭಂಡತನ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.

'ಬಿಎಸ್‌ವೈ ಸರ್ಕಾರ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಿದೆ'

ಜ. 26ರ ಗಣರಾಜ್ಯೋತ್ಸವ ದಿನ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 12 ಲಕ್ಷ ರೈತರು ಜಮಾವಣೆಗೊಂಡಿದ್ದರು. 1 ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಸೇರಿದ್ದವು. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ಆದರೆ, ಕೆಲವು ಕಿಡಿಗೇಡಿಗಳು ಹೋರಾಟದ ದಿಕ್ಕು ತಪ್ಪಿಸಿವೆ. ಗಣರಾಜ್ಯೋತ್ಸವ ದಿನ ನಡೆದಿರುವ ಅಹಿತಕರ ಘಟನೆ ತೀವ್ರ ಖಂಡನೀಯ. ಅದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಆದರೆ, ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿ ಕೈಗೊಂಡಿರುವ ನಿಲುವು ಅನ್ನದಾತರ ಹಾಗೂ ಬಡಜನರ ವಿರೋಧಿಯಾಗಿದೆ. ಕಾಯ್ದೆ ತಿದ್ದುಪಡಿ ನೀತಿಯಿಂದ ಹಿಂದಕ್ಕೆ ಸರಿಯಬೇಕು ಎಂದು ರಾಷ್ಟ್ರದ ಎರಡು ಕೋಟಿ ರೈತರು ಸಹಿ ಸಂಗ್ರಹಿಸಿ ಪ್ರಧಾನಿಮಂತ್ರಿಗೆ ಕಳುಹಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ ರೈತರ ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಶಾಸಕ ಸ್ಥಾನಕ್ಕೆ ರಾಜಿನಾಮೆಗೆ ಸಿದ್ಧ:

ಗ್ರಾಮೀಣ ಶಾಸಕ ಬಿ. ನಾಗೇಂದ್ರ ಮಾತನಾಡಿ, ಬಳ್ಳಾರಿ ಜಿಲ್ಲೆ ವಿಭಜನೆಗೆ ನಾನು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದೇನೆ. ವಿಭಜನೆಯಾದರೆ ಆಂಧ್ರದ ಪ್ರಭಾವ ಹೆಚ್ಚಾಗಲಿದೆ. ನನ್ನ ರಾಜೀನಾಮೆಯಿಂದ ಬಳ್ಳಾರಿ ಜಿಲ್ಲೆ ವಿಭಜನೆಯಾಗುವುದು ನಿಲ್ಲುತ್ತದೆ ಎಂದಾದರೆ, ಈಗಲೇ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ. ಸದನದಲ್ಲಿ ಜಿಲ್ಲೆ ವಿಭಜನೆ ವಿರೋಧಿ ಧ್ವನಿಯಾಗುವೆ ಎಂದು ತಿಳಿಸಿದರು. ಪ್ರಗತಿಪರ ಹೋರಾಟಗಾರ ಸಿರಿಗೇರಿ ಪನ್ನರಾಜ್‌ ಮಾತನಾಡಿ, ನಮ್ಮ ಹೋರಾಟದಿಂದ ಜಿಲ್ಲಾ ವಿಭಜನೆಗೆ ತಾತ್ಕಾಲಿಕ ತಡೆಯಾಗಿದೆ. ಪಕ್ಷಾತೀತವಾಗಿ ಮುಖ್ಯಮಂತ್ರಿ ಭೇಟಿ ಮಾಡಿ ವಾಸ್ತವ ವಿಚಾರ ತಿಳಿಸುತ್ತೇವೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಮಾಧವರೆಡ್ಡಿ, ದೆಹಲಿಯಲ್ಲಿ ಚಳುವಳಿ ನಡೆಸುತ್ತಿರುವ ಸುಮಾರು 120 ರೈತರು ಕೊರೆವ ಚಳಿಗೆ ಸತ್ತುಹೋದರು. ಆದರೆ, ಈ ದೇಶದ ಪ್ರಧಾನಿ ಒಂದೇ ಒಂದು ಬಾರಿ ರೈತ ಸಾವಿನ ಬಗ್ಗೆ ಮಾತನಾಡಲಿಲ್ಲ. ಟ್ವಿಟರ್‌ನಲ್ಲಿ ನಮೂ​ದಿ​ಸ​ಲಿ​ಲ್ಲ. ಆದರೆ, ಕ್ರಿಕೆಟ್‌ ಆಟಗಾರ ಆಸ್ಪತ್ರೆಯಿಂದ ಬಿಡುಗಡೆಯಾದರೆ ಟ್ವಿಟರ್‌ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ ಎಂದು ಟೀಕಿಸಿದರು. ಕಾರ್ಮಿಕ ಮುಖಂಡ ಟಿ.ಜಿ. ವಿಠಲ್‌ ಅವರು ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳ ಕುರಿತು ತಿಳಿಸಿದರು. ದಲಿತ ಮುಖಂಡರಾದ ಮುಂಡ್ರಗಿ ನಾಗರಾಜ್‌, ಎ. ಮಾನಯ್ಯ, ವೆಂಕಟೇಶ್‌ ಹೆಗಡೆ, ಎಲ್‌. ಮಾರೆಣ್ಣ, ಕರ್ನಾಟಕ ಜನಸೈನ್ಯ ಸಂಘಟನೆಯ ಕೆ. ಎರಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.
 

click me!