* ಸಮರ್ಪಕವಾಗಿ ಕಾರ್ಯ ನಿರ್ವಹಿಸದ ದೂರವಾಣಿ ವಿನಿಮಯ ಕೇಂದ್ರ
* ಮಕ್ಕಳ ಶಿಕ್ಷಣ, ಕಚೇರಿ ಕೆಲಸ ಸೇರಿದಂತೆ ಎಲ್ಲ ವ್ಯವಹಾರಗಳಿಗೆ ದೂರವಾಣಿ ಅವಲಂಬಿಸಿದ ಜನತೆ
* ಮಳೆಗಾಲ ಬಂತೆಂದರೆ ಜೋಯಿಡಾ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ
ಜೋಯಿಡಾ(ಜೂ.28): ತಾಲೂಕಿನ ದೂರವಾಣಿ ವಿನಿಮಯ ಕೇಂದ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ವ್ಯಾಪ್ತಿಯ ಜನಸಾಮಾನ್ಯರು ಬಿಎಸ್‌ಎನ್‌ಎಲ್‌ಗೆ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಪೋಟೋಲಿ ವಿನಿಮಯ ಕೇಂದ್ರ ವ್ಯಾಪ್ತಿಯಲ್ಲಿ ಹತ್ತಾರು ಗ್ರಾಮಗಳ ಜನಸಾಮಾನ್ಯರು ತಮ್ಮ ದೈನಂದಿನ ವ್ಯವಹಾರಕ್ಕೆ ಮಕ್ಕಳ ಶಿಕ್ಷಣ, ಕಚೇರಿ ಕೆಲಸ ಸೇರಿದಂತೆ ಎಲ್ಲ ವ್ಯವಹಾರಗಳಿಗೆ ದೂರವಾಣಿ ಅವಲಂಬಿಸಿದ್ದಾರೆ. ಜತೆಗೆ ಪರ ಊರಿನವರು ಇಲ್ಲಿಯ ಜನರನ್ನು ಸಂಪರ್ಕಿಸಲು ದೂರವಾಣಿ ತೀರಾ ಅಗತ್ಯ. ಸದ್ಯ ದೂರವಾಣಿ ವಿದ್ಯುತ್ ಇದ್ದರೆ ಮಾತ್ರ ಸಂಪರ್ಕ ಸೇವೆ ನಡೆಯುತ್ತಿದೆ. ವಿದ್ಯುತ್ ನಿಲುಗಡೆ ಯಾದರೆ ದೂರವಾಣಿಯೂ ಸ್ಥಗಿತವಾಗುತ್ತದೆ.
ಹಿಂದೆ ವಿದ್ಯುತ್ ನಿಲುಗಡೆಯಾದಾಗ ಜನರೇಟರ್ ಮೂಲಕ ದೂರವಾಣಿ ವಿನಿಮಯ ಕೇಂದ್ರ ನಡೆಸಲಾಗುತ್ತಿತ್ತು. ಆದರೆ ಈಗ ವಿನಿಮಯ ಕೇಂದ್ರಗಳಿಗೆ ಡೀಸೆಲ್ ಪೂರೈಕೆ ಇಲ್ಲದ ಕಾರಣ, ವಿದ್ಯುತ್ ಇದ್ದರಷ್ಟೇ ಕೇಂದ್ರ ನಡೆಯುವ ದುಸ್ಥಿತಿಗೆ ತಲುಪಿದೆ. ತಾಲೂಕಿನ ಸ್ಥಿತಿಯೂ ಇದೇ ಆಗಿದೆ.
ಪೋಟೋಲಿ ವಿನಿಮಯ ಕೇಂದ್ರ ವ್ಯಾಪ್ತಿಯಲ್ಲಿ ಹಲವಾರು ಹೋಂ ಸ್ಟೇಗಳು, ರೆಸಾರ್ಚ್‌ಗಳು ಕಾರ್ಯ ನಿರ್ವಹಿಸುತ್ತಿವೆ. ದೂರವಾಣಿ ಸಮಸ್ಯೆಯಿಂದ ಇವೆಲ್ಲ ಬಾಗಿಲು ಹಾಕುವ ದಿನಗಳು ದೂರವಿಲ್ಲ.
ದಲಿತ ಸಿಎಂ ಚರ್ಚೆ ಇರುವುದು ಬಿಜೆಪಿಯಲ್ಲಲ್ಲ: ಸಚಿವ ಕೋಟ
ವಿದ್ಯುತ್ ಸಮಸ್ಯೆ:
ಮಳೆಗಾಲ ಬಂತೆಂದರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತದೆ. ಕಾಡಿನಿಂದ ತುಂಬಿದ ಈ ಸ್ಥಳಗಳಲ್ಲಿ ಹತ್ತಾರು ಬಾರಿ ವಿದ್ಯುತ್ ಹೋಗುವುದು ಬರುವುದು ಮಾಡುತ್ತದೆ. ಇದರಿಂದಾಗಿ ತುಂಬ ಸಮಸ್ಯೆ ಕಾಡುತ್ತಿದೆ. ಸಂಬಂಧಪಟ್ಟವರು ಕೂಡಲೇ ಪೋಟೋಲಿಯ ಜೊತೆಗೆ ತಾಲೂಕಿನ ಬಿಎಸ್‌ಎನ್‌ಎಲ್ ಸೇವೆ ಸುಸ್ಥಿತಿಗೆ ಬರುವಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೋಟೋಲಿ ದೂರವಾಣಿ ಕೇಂದ್ರ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ತುಂಬ ತೊಂದರೆಯಾಗಿದೆ. ವಿದ್ಯುತ್ ಇದ್ದರೆ ಮಾತ್ರ ನಮಗೆ ಫೋನ್ ಇರುತ್ತದೆ. ಇಲ್ಲದಿದ್ದರೆ ಮೊಬೈಲ್ ಕೂಡ ಬಂದಾಗುತ್ತದೆ. ಸಂಬಂಧಿಸಿದವರು ಸ್ಪಂದಿಸಬೇಕು ಅಂತ ಪೋಟೋಲಿ ಗ್ರಾಮದ ಭಾಸ್ಕರ ಬಟ್ಟಸಾಂಗವೆ ತಿಳಿಸಿದ್ದಾರೆ.