ಚಿಕ್ಕಬಳ್ಳಾಪುರ (ಆ.18): ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿ ಬರೋಬ್ಬರಿ 20 ದಿನ ಕಳೆದ ಹೋಗಿದೆ. ಆದರೆ ಜಿಲ್ಲೆಯ ಪ್ರಚಾರ ಫಲಕಗಳಲ್ಲಿ ಮಾತ್ರ ಇನ್ನೂ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ರಾರಾಜಿಸುತ್ತಿದ್ದಾರೆ.
ಬೊಮ್ಮಾಯಿ ಹೊಸ ಮುಖ್ಯಮಂತ್ರಿಯಾದರೂ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ನಿಕಟಪೂರ್ವ ಸಿಎಂ ಯಡಿಯೂರಪ್ಪ ಇರುವ ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳ ಅರಿವು ಮೂಡಿಸುವ ಫಲಕಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮರೆತಂತಿದೆ.
ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋಣ್ ಸರ್ವೆ : ಎಚ್ಚೆತ್ತುಗೊಂಡ ಇಲಾಖೆ
ಜಿಲ್ಲಾಡಳಿತ ಭವನದ ಕಾಂಪೌಂಡ್ ಗೋಡೆಗೆ ಅಳವಡಿಸಿರುವ ಸರ್ಕಾರದ ಪ್ರಚಾರ ಫಲಕಗಳಲ್ಲಿ ಇನ್ನೂ ಸಿಎಂ ಆಗಿ ಯಡಿಯೂರಪ್ಪ ಇರುವ ಪ್ರಚಾರ ಫಲಕಗಳೇ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಬದಲಾವಣೆ ಬಳಿಕ ಫಲಕಗಳನ್ನು ತೆರವುಗೊಳಿಸುವುದು ಶಿಷ್ಟಚಾರ ಕೂಡ. ಆದರೆ ರಾಜ್ಯಕ್ಕೆ ಹೊಸ ಸಿಎಂ ಬಂದು 20 ದಿನ ಕಳೆದರೂ ಪ್ರಚಾರ ಫಲಕಗಳನ್ನು ತೆರವುಗೊಳಿಸುವ ಪುರುಸೋತ್ತು ಯಾರಿಗೂ ಇಲ್ಲವಾಗಿದೆ.
ನಗರಸಭೆ ಆವಣದಲ್ಲೂ ಇದೇ ಕಥೆ
ಅದೇ ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಕೂಡ ಮಾಜಿ ಸಿಎಂ ಯಡಿಯೂರಪ್ಪ ಭಾವಚಿತ್ರ ಇರುವ ಬ್ಯಾನರ್‌ಗಳು ಹಾಗೆ ಉಳಿದುಕೊಂಡಿದ್ದು ಕನಿಷ್ಠ ತೆರವುಗೊಳಿಸಬೇಕೆಂಬ ಪ್ರಜ್ಞೆ ನಗರಸಭೆ ಅಧಿಕಾರಿಗಳಿಗೆ ಇಲ್ಲವಾಗಿದೆ. ಹೀಗೆ ಬಹುತೇಕ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಹಿಂದಿನ ಸರ್ಕಾರದಲ್ಲಿ ಅಳವಡಿಸಿರುವ ಪ್ರಚಾರ ಫಲಕಗಳೇ ಇನ್ನೂ ಮುಂದುವರೆದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನಾ ಅಥವ ಬಸವರಾಜ ಬೊಮ್ಮಾಯಿನಾ ಎನ್ನುವಷ್ಟರ ಮಟ್ಟಿಗೆ ಗೊಂದಲಕ್ಕೆ ಬ್ಯಾನರ್‌ಗಳು ಕಾರಣವಾಗಿವೆ.