ಮೈಸೂರು (ಆ.18): ‘ನೀವು ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಹೇಳುತ್ತಿದ್ದಾರೆ ಪೋಷಕರು. ಮುಂದೇನಾಗ್ತದೋ ಎಂಬ ಭಯವಿದೆ’
-ಇದು ತನ್ನ ದೇಶ ಮತ್ತೆ ತಾಲಿಬಾನ್ ಉಗ್ರರ ತೆಕ್ಕೆಯಲ್ಲಿ ಸಿಲುಕಿರುವ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಷ್ಘಾನಿಸ್ತಾನದ ವಿದ್ಯಾರ್ಥಿಯೊಬ್ಬನ ಆತಂಕ. ತನ್ನ ದೇಶದ ಪರಿಸ್ಥಿತಿಯ ಬಗ್ಗೆ ‘ಕನ್ನಡಪ್ರಭ’ ಬಳಗದ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಜೊತೆ ಅಳಲು ತೋಡಿಕೊಂಡ ವಿದ್ಯಾರ್ಥಿ ಭಾರತವೇ ಸುರಕ್ಷಿತ ಎಂದು ನಮ್ಮ ಪೋಷಕರು ಹೇಳುತ್ತಿದ್ದು ನಮ್ಮ ವೀಸಾವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಇದೇವೇಳೆ ತನ್ನ ದೇಶದಲ್ಲಿರುವ ಕುಟುಂಬಸ್ಥರ, ಮಹಿಳೆಯರು ಪರಿಸ್ಥಿತಿ ಮುಂದೇನೋ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನಾವು ಬದಲಾಗಿದ್ದೇವೆ, ಮಹಿಳೆಯರನ್ನು ಹಿಂಸಿಸಲ್ಲ: ವಿಶ್ವಕ್ಕೆ ತಾಲಿಬಾನ್ ಭರವಸೆ!
20 ವರ್ಷಗಳಲ್ಲಿ ನನ್ನ ದೇಶದಲ್ಲಿ ಮಹಿಳೆಯರು ಕಚೇರಿಗೆ ಹೋಗಿದ್ದಾರೆ. ಕೆಲಸ ಮಾಡಿದ್ದಾರೆ. ಆದರೆ ಇಂದು ಮನೆಯ ಮೂಲೆಯಲ್ಲಿ ಕುಳಿತು ತಾಲಿಬಾನಿಗಳು ಏನು ನಿರ್ಧಾರ ಕೈಗೊಳ್ಳುತ್ತಾರೋ ಅಂತ ಕಾಯುವ ಸ್ಥಿತಿ ಇದೆ. ಸ್ಥಳೀಯರು ಭಯದಿಂದ ಬದುಕುತ್ತಿದ್ದಾರೆ ಎಂದಿದ್ದಾರೆ.
ನಾವು ಪೋಷಕರೊಂದಿಗೆ ಮಾತನಾಡಿದ್ದು ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ. ನೀವು ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಹೇಳುತ್ತಿದ್ದಾರೆ. ತಾಲಿಬಾನಿಗಳಿಗೆ ಅಧಿಕಾರ ನಡೆಸಿ ಗೊತ್ತಿಲ್ಲ. ಹಿಂದೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ. ಜನರಿಗೆ ಜೀವ ಭಯ ಶುರುವಾಗಿದೆ. ರಾಜಧಾನಿ ವಶಕ್ಕೆ ಪಡೆದ ನಂತರ ಇದುವರೆಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಆದರೆ ಮುಂದೆ ಏನಾಗುತ್ತೋ ಅನ್ನುವ ಚಿಂತೆ ಶುರುವಾಗಿದೆ.
ಅವರು ಇಸ್ಲಾಮಿಕ್ ಆಡಳಿತ ಹೇರಿದ್ದಾರೆ. ವಿದೇಶಿಯರು ಯಾರೂ ಇರಬಾರದು ಎಂದಿದ್ದಾರೆ. ಸದ್ಯ ಭಾರತ ನಮ್ಮಗಳ ವೀಸಾ ವಿಸ್ತರಿಸಬೇಕು. ಪ್ರಪಂಚ ನಮ್ಮತ್ತ ತಿರುಗಿ ನೋಡಬೇಕು. ಅಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿ ವಿದ್ಯಾಭ್ಯಾಸ ನೀಡಬೇಕು ಎಂದು ವಿದ್ಯಾರ್ಥಿ ಮನವಿ ಮಾಡಿದ್ದಾರೆ.