ಜಾರಕಿಹೊಳಿನೂ ಬಂದಿಲ್ಲ, ಶ್ರೀರಾಮುಲು ಕೂಡ ಚರ್ಚಿಸಿಲ್ಲ : ನಳಿನ್ ಟಾಂಗ್

By Suvarna NewsFirst Published Dec 17, 2019, 1:07 PM IST
Highlights

ರಾಜ್ಯದಲ್ಲಿ ಈಗ ಸಂಪುಟ ವಿಸ್ತರಣೆ ವಿಚಾರ ಹೆಚ್ಚು ಚರ್ಚೆಯಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ನಿರ್ಧಾರವೇ ಅಂತಿಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಶಿವಮೊಗ್ಗ [ಡಿ.17]: ರಾಜ್ಯ ಸಚಿವ ಸಂಪುಟ ವಿಸ್ತರಣೆಯೂ ಮುಖ್ಯಮಂತ್ರಿಯ ಪರಮಾಧಿಕಾರ. ಈ ಕುರಿತು ಅವರ ನಿರ್ಧಾರವೇ ಅಂತಿಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ ಇಂದು ಭೇಟಿ ನೀಡಿದ ವೇಳೆ  ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸದ್ಯ ರಾಜ್ಯದಲ್ಲಿ ಮೂವರು ಡಿಸಿಎಂಗಳಿದ್ದು, ಸ್ಥಾನಗಳನ್ನು ಹೆಚ್ಚಿಸುವುದು, ಕಡಿಮೆ ಮಾಡುವುದರ ಬಗ್ಗೆ ಸಿಎಂ ಮತ್ತು ರಾಷ್ಟ್ರೀಯ ಅಧ್ಯಕ್ಷರು ಸೇರಿ ನಿರ್ಧರಿಸುತ್ತಾರೆ. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. 

ಬಿಜೆಪಿಯಲ್ಲಿ ಮೂಲ ಮತ್ತು ಹೊಸ ಬಿಜೆಪಿಗರು ಎಂದು ಯಾವುದೇ ಭೇದವಿಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದ್ದಕ್ಕೆ ಅಭೂತಪೂರ್ವ ಗೆಲುವು ಬಿಜೆಪಿಗೆ ಒಲಿದಿದೆ. ಚುನಾವಣೆ ವೇಳೆ ಬಿಜೆಪಿಗೆ ಬಂದವರು ಬಿಜೆಪಿಯನ್ನು ತಾಯಿ ಪಕ್ಷ ಎಂದುಕೊಂಡು ಸ್ವೀಕಾರ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದರು. 

ಸಿಎಂ ನಿರ್ಧಾರವೇ ಅಂತಿಮ : ನನ್ನ ಹಸ್ತಕ್ಷೇಪ ಇಲ್ಲ ಎಂದ್ರು ಕಟೀಲ್..

ಇನ್ನು ರಾಜ್ಯದಲ್ಲಿ ಮಂತ್ರಿ ಸ್ಥಾನ ಹಂಚಿಕೆ ಕುರಿತು ಯಾವುದೇ ಕಗ್ಗಂಟಿಲ್ಲ. ಇದರಲ್ಲಿ ಗೊಂದಲವೂ ಇಲ್ಲ. ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ಶೀಘ್ರ ಕೈಗೊಳ್ಳಲಾಗುತ್ತದೆ ಎಂದರು. 

ಇನ್ನು ಡಿಸಿಎಂ  ಹುದ್ದೆಯ ಪೈಪೋಟಿ ಬಗ್ಗೆಯೂ ಪ್ರತಿಕ್ರಿಯಿಸಿದ್ದು,  ರಮೇಶ್  ಜಾರಕಿಹೊಳಿ ಮತ್ತು ಶ್ರೀರಾಮುಲು ಇಬ್ಬರು ನನ್ನ ಮತ್ತು ಸಿಎಂ ಬಳಿ ಚರ್ಚೆ ಮಾಡಿಲ್ಲ.  ಪೈಪೋಟಿ, ವೈಮನಸ್ಸು ಎಲ್ಲವೂ ಕೂಡ ಅಂತೆ-ಕಂತೆ.  ಡಿಸಿಎಂ ಸ್ಥಾನದ ಕುರಿತು ಸಿಎಂ ಯಡಿಯೂರಪ್ಪ ಮತ್ತು   ರಾಷ್ಟ್ರೀಯ ಅಧ್ಯಕ್ಷರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. 

ಇನ್ನು ಶ್ರೀರಾಮುಲು ಅವರು ಡಿಸಿಎಂ ಸ್ಥಾನ ಕೊಟ್ಟಲ್ಲಿ ನಿರ್ವಹಿಸುವ ಎನ್ನುವ ಹೇಳಿಕೆಗೆ ಟಾಂಗ್ ಕೊಟ್ಟಿದ್ದು, ಕೊಟ್ಟರೆ ಆಗುವೆ ಎನ್ನುವುದಕ್ಕೂ, ನನಗೆ ಬೇಕು ಎನ್ನುವುದಕ್ಕೂ ವ್ಯತ್ಯಾಸವಿದೆ. ಕೊಟ್ಟರೆ ಎಲ್ಲರೂ ಬೇಕು ಅಂತಾರೆ ಎಂದರು. 

ಪೌರತ್ವ ಕಾಯ್ದೆ ಪ್ರತಿಭಟನೆ ಬಗ್ಗೆ ಪ್ರಸ್ತಾಪ

ಇನ್ನು ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಕಾಂಗ್ರೆಸ್ ಪ್ರೇರಿತ ಹೋರಾಟ ನಡೆಯುತ್ತಿದೆ. ಅಧಿಕಾರ ಇಲ್ಲವಾದಾಗ ಕಾಂಗ್ರೆಸ್ ಗಲಭೆ ಸೃಷ್ಟಿಸುತ್ತದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತದೆ ಎಂದರು. 

click me!