ಹುಬ್ಬಳ್ಳಿ: ಹೊಸ ಸರ್ಕಾರ ಬಂದ್ರೂ ಪ್ರಾರಂಭವಾಗದ ಕಾಮಗಾರಿ!

By Suvarna NewsFirst Published Dec 8, 2019, 7:19 AM IST
Highlights

ಬಿಆರ್‌ಟಿಎಸ್‌ ನವಲೂರು ಬಳಿ ಸೇತುವೆ ನಿರ್ಮಾಣ ಆರಂಭವೇ ಆಗಿಲ್ಲ| ಹಳೆ ಸರ್ಕಾರಕ್ಕೆ ಬೈಯುತ್ತಿದ್ದವರೇ ಈಗ ಅಧಿಕಾರದಲ್ಲಿದ್ದಾರೆ| ಬಾಕಿಯುಳಿದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು| ಬಿಆರ್‌ಟಿಎಸ್‌ನ್ನು ಉದ್ಘಾಟಿಸಬೇಕು ಎಂಬುದು ನಾಗರಿಕರ ಆಗ್ರಹ|

ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.08): ಹೊಸ ಸರ್ಕಾರ ಬಂದ್ರೂ ಹಳೆ ಕಾಮಗಾರಿಗಳು ಈವರೆಗೂ ಪ್ರಾರಂಭವಾಗಿಲ್ಲ. ಬಿಆರ್‌ಟಿಎಸ್‌ನ ಬಾಕಿ ಕಾಮಗಾರಿ ಪೂರ್ಣಗೊಳ್ಳುವುದ್ಯಾವಾಗ? ಅದರ ಅಧಿಕೃತ ಉದ್ಘಾಟನೆ ಯಾವಾಗ? ಇವು ರಾಜ್ಯದ ಎರಡನೇ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿ- ಧಾರವಾಡ ಮಧ್ಯೆ ಪ್ರಾರಂಭಿಸಿರುವ ಬಿಆರ್‌ಟಿಎಸ್‌ನಿಂದಾಗಿ ಜನರು ಕೇಳುತ್ತಿರುವ ಪ್ರಶ್ನೆಗಳು. ಹಾಗೆ ನೋಡಿದರೆ ಬಿಆರ್‌ಟಿಎಸ್‌ ಗೋಳು ಬಹಳ ದೊಡ್ಡದು. 2012ಕ್ಕೆ ಬಿಆರ್‌ಟಿಎಸ್‌ ಕಾಮಗಾರಿ ಪ್ರಾರಂಭವಾದರೂ ಈವರೆಗೂ ಪೂರ್ಣವೇ ಆಗಿಲ್ಲ. ಪ್ರಾಯೋಗಿಕ ಪರೀಕ್ಷೆಯೆಂದು ಪ್ರಾರಂಭವಾದ ಬಸ್‌ ಸಂಚಾರ ವರ್ಷಕ್ಕೂ ಅಧಿಕ ಕಾಲವಾದರೂ ಅಧಿಕೃತ ಉದ್ಘಾಟನೆಯೂ ಆಗುತ್ತಿಲ್ಲ.

ಹೌದು ಹುಬ್ಬಳ್ಳಿ- ಧಾರವಾಡ ಮಧ್ಯೆ ತ್ವರಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬಿಆರ್‌ಟಿಎಸ್‌ ಬಸ್‌ ಸಂಚಾರ ಪ್ರಾರಂಭಿಸಲು ನಿರ್ಧರಿಸಿತು. ಅದರಂತೆ 2012ರಲ್ಲೇ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. 1000 ಕೋಟಿ ವೆಚ್ಚದ ಈ ಯೋಜನೆಯೂ ಅಲ್ಲಿಂದ ಕುಂಟುತ್ತಾ, ತೆವಳುತ್ತಾ ಕಾಮಗಾರಿ ಸಾಗಿತ್ತು. ಇದರ ಕಾಮಗಾರಿಯಿಂದಾಗಿ ಇಡೀ ನಗರದ ಸಾರಿಗೆ ವ್ಯವಸ್ಥೆ, ವ್ಯಾಪಾರ ವಹಿವಾಟು, ಜನ ಜೀವನ ಎಲ್ಲವೂ ಹದಗೆಟ್ಟಿತ್ತು. ಜನರು ರೊಚ್ಚಿಗೆದ್ದು ಆದಷ್ಟುಬೇಗನೆ ಕಾಮಗಾರಿ ಮುಗಿಸಿ ಬಸ್‌ ಸಂಚಾರ ಪ್ರಾರಂಭಿಸಿ ಬಿಆರ್‌ಟಿಎಸ್‌ ಕಾಮಗಾರಿಗಳಿಂದ ನಮ್ಮ ಬದುಕು ದುಸ್ತರ ಎಂಬಂತಾಗಿದೆ ಎಂದು ಪ್ರತಿಭಟನೆಗಿಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಎಲ್ಲದರ ನಡುವೆಯೇ ರಾಜೇಂದ್ರ ಚೋಳನ್‌ ಬಿಆರ್‌ಟಿಎಸ್‌ ಎಂಡಿಯಾಗಿ ವರ್ಗವಾಗಿ ಬಂದರು. ಜನರ ಒತ್ತಡ, ಕಾಮಗಾರಿಯ ನಿಧಾನಗತಿಗೆ ಸಾಕಾಗಿ ಹೋಗಿ ಆಗಿದ್ದಾಗಲಿ ಬಸ್‌ ಸಂಚಾರ ಪ್ರಾರಂಭಿಸಿಯೇ ಬಿಡೋಣ ಎಂದು 2018ರ ಅಕ್ಟೋಬರ್‌ 2 ರಂದು ಅರ್ಧಂಬರ್ಧ ಕಾಮಗಾರಿಯಾಗಿದ್ದ ಕಾರಿಡಾರ್‌ನಲ್ಲೇ ಪ್ರಾಯೋಗಿಕ ಸಂಚಾರ ಎಂದು ನಾಮಾಂಕಿತ ಮಾಡಿ ಬಸ್‌ ಸಂಚಾರವನ್ನು ಆರಂಭಿಸಿಯೇ ಬಿಟ್ಟರು. 5 ಬಸ್‌ಗಳಿಂದ ಪ್ರಾರಂಭವಾದ ಈ ಪ್ರಾಯೋಗಿಕ ಸಂಚಾರ ಇದೀಗ 100 ಬಸ್‌ಗಳ ಸಂಚಾರದ ವರೆಗೆ ಬಂದು ಮುಟ್ಟಿದೆ. ಈಗಲೂ ಪ್ರಾಯೋಗಿಕ ಪರೀಕ್ಷೆಯಲ್ಲೇ ಈ ಬಸ್‌ಗಳ ಸಂಚಾರ ನಡೆಯುತ್ತಿದೆ.

ಕಾಮಗಾರಿ ಪೂರ್ಣವಾಗಿಲ್ಲ:

ಈ ನಡುವೆ ಬಿಆರ್‌ಟಿಎಸ್‌ ಕಾಮಗಾರಿ ಆಗಿನಿಂದಲೂ ಈವರೆಗೂ ಪೂರ್ಣವಾಗುತ್ತಲೇ ಇಲ್ಲ. ಇತ್ತ ಬಿಆರ್‌ಟಿಎಸ್‌ ಉದ್ಘಾಟನೆಗೆ ಮುಹೂರ್ತವೂ ಕೂಡಿ ಬರುತ್ತಿಲ್ಲ. ಈಗಲೂ ಬಾಕಿಯುಳಿದಿರುವ ಕೆಲಸಗಳು ಹಾಗೆ ಇವೆ. ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂದರೂ ಕಾಮಗಾರಿಗಳು ಮಾತ್ರ ಈವರೆಗೂ ಪೂರ್ಣಗೊಳ್ಳುತ್ತಲೇ ಇಲ್ಲ. ಕೆಲವೊಂದು ಕಡೆಯಂತೂ ಕಾಮಗಾರಿಯೇ ಆರಂಭವಾಗಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ನವಲೂರು ಬಳಿಯಲ್ಲಿ ಮೇಲ್ಸೇತುವೆ ಕಾಮಗಾರಿ. ನವಲೂರಿನಲ್ಲಿ ಒಂದು ಮೇಲ್ಸೇತುವೆ ನಿರ್ಮಿಸಲಾಗಿದೆ. ಇನ್ನೊಂದು ಸೇತುವೆ ನಿರ್ಮಿಸಬೇಕಿದೆ. ಆದರೆ, ಈ ಕಾಮಗಾರಿ ಈವರೆಗೂ ಆರಂಭವಾಗಿಲ್ಲ.

ಇದಲ್ಲದೇ ಬೇರೆಡೆಗಳಲ್ಲೂ ಫೆವ​ರ್ಸ್ ಅಳವಡಿಕೆ, ಯುಟಿಲಿಟಿ ಕಾರಿಡಾರ್‌ ಸೇರಿದಂತೆ ಹಲವು ಕೆಲಸಗಳು ಬಾಕಿಯುಳಿದಿವೆ. ಅವುಗಳ ಕೆಲಸಗಳು ನಡೆಯುತ್ತಲೇ ಇಲ್ಲ. ಇನ್ನು ಮಳೆಯಾದರೆ ಸಾಕು ಇಡೀ ಬಿಆರ್‌ಟಿಎಸ್‌ ಮಾರ್ಗವೇ ಕೆರೆಯಂತಾಗುತ್ತದೆ. ಇದಕ್ಕೆಲ್ಲ ಕೆಲವೆಡೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದೇ ಕಾರಣ ಎಂಬುದು ಸಂಘ- ಸಂಸ್ಥೆಗಳ ಆರೋಪ.

ಇನ್ನಾದರೂ ಮಾಡಿ:

ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಬಿಆರ್‌ಟಿಎಸ್‌ ಯೋಜನೆಗೆ ಚಾಲನೆ ನೀಡಲಾಗಿತ್ತು. ಬಳಿಕ ಕಾಂಗ್ರೆಸ್‌, ಸಮ್ಮಿಶ್ರ ಸರ್ಕಾರಗಳು ಬಂದರೂ ಯೋಜನೆ ಬಗ್ಗೆ ಅಷ್ಟೊಂದು ಗಮನ ಹರಿಸಲಿಲ್ಲ. ಇದಕ್ಕೆ ಬಿಜೆಪಿ ಸರ್ಕಾರದ ಯೋಜನೆಯಿದು ಎಂದು ನಿರ್ಲಕ್ಷ್ಯ ಮಾಡಿದವು ಎಂಬ ಆರೋಪ ಕೇಳಿ ಬರುತ್ತಿತ್ತು. ಇದೀಗ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ. ಈ ಕಾರಣದಿಂದಾಗಿ ಇನ್ನು ಮೇಲಾದರೂ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸಬೇಕು. ಬಾಕಿಯುಳಿದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು. ಬಿಆರ್‌ಟಿಎಸ್‌ನ್ನು ಉದ್ಘಾಟಿಸಬೇಕು ಎಂಬುದು ನಾಗರಿಕರ ಆಗ್ರಹ. ಒಟ್ಟಿನಲ್ಲಿ ಬಿಆರ್‌ಟಿಎಸ್‌ ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಾದರೂ ಪೂರ್ಣಗೊಳ್ಳುವುದೇ ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ.

ಬಿಆರ್‌ಟಿಎಸ್‌ ಸರ್ಕಾರದಿಂದ ಅತ್ಯಂತ ನಿರ್ಲಕ್ಷಿತ ಯೋಜನೆ. ಕಾಮಗಾರಿ ಈವರೆಗೂ ಪೂರ್ಣಗೊಳ್ಳುತ್ತಲೇ ಇಲ್ಲ. ಇನ್ನು ಕೆಲವೆಡೆ ಕಾಮಗಾರಿಯನ್ನೂ ಪ್ರಾರಂಭಿಸಿಲ್ಲ. ಈಗಲಾದರೂ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ರಮೇಶ ಪಾಟೀಲ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ಫೋರಂನ ಕಾರ್ಯದರ್ಶಿ ಜಗದೀಶ ಹಿರೇಮಠ ಅವರು,  ಬಿಆರ್‌ಟಿಎಸ್‌ ಪ್ರಾಯೋಗಿಕ ಸಂಚಾರದಲ್ಲಿದ್ದರೂ ಉತ್ತಮ ಸಾರಿಗೆ ವ್ಯವಸ್ಥೆಯೆಂದು ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಅದನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಉದ್ಘಾಟಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 
 

click me!