ಬಾಗಲಕೋಟೆ: ಐದು ವರ್ಷವಾದ್ರೂ ಪೂರ್ಣಗೊಳ್ಳದ ಸೇತುವೆ

By Kannadaprabha NewsFirst Published Jun 8, 2023, 11:01 PM IST
Highlights

ನದಿ ತೀರದ ಕೂಗಳತೆಯಲ್ಲಿಯೇ ರಬಕವಿ-ಬನಹಟ್ಟಿ ಸರ್ಕಾರಿ ಪದವಿ ಕಾಲೇಜ್‌ಗೆ ಅಕ್ಕಪಕ್ಕದ ಹಳ್ಳಿಗಳಿಂದ, ನದಿಯಾಚೆಗಿನ ಪ್ರದೇಶಗಳಿಂದ ಶಿಕ್ಷಣ ಅರಸಿ ಬರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಈ ಸೇತುವೆ ತೀರ ಅನುಕೂಲವಾಗಿದೆ. 

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಜೂ.08): ರಬಕವಿ-ಬನಹಟ್ಟಿ ನೂತನ ತಾಲೂಕು ಕೇಂದ್ರದಿಂದ ಪಕ್ಕದ ಅಥಣಿ ತಾಲೂಕಿನ ಅನೇಕ ಹಳ್ಳಿಗಳನ್ನು ಸಂಪರ್ಕಿಸಲು ಕೃಷ್ಟಾನದಿಗೆ ಅಡ್ಡಲಾಗಿ ನಿರ್ಮಿಸಲು ರಬಕವಿ-ಮಹಿಷವಾಡಗಿ ಬೃಹತ್‌ ಸೇತುವೆ ನಿರ್ಮಾಣದ ಕಾಮಗಾರಿ ಐದು ವರ್ಷ, ಎರಡು ಗುತ್ತಿಗೆ ಕಂಪನಿ, ಕೋಟಿ ಕೋಟಿ ಅನುದಾನವಿದ್ದರೂ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಕಾಮಗಾರಿಯ ವೆಚ್ಚ ಕೂಡಾ ಹೆಚ್ಚಾಗುತ್ತಿದ್ದು, ಇದು ಸರ್ಕಾರಕ್ಕೆ ಹೊರೆಯಾಗುವುದರೊಂದಿಗೆ ಜನರ ಸಹನಿ ಸಂಪರ್ಕದ ಕನಸು ಇನ್ನು ನನಸಾಗದೇ ಹಾಗೆಯೇ ಉಳಿದಿದೆ.

ನದಿ ತೀರದ ಕೂಗಳತೆಯಲ್ಲಿಯೇ ರಬಕವಿ-ಬನಹಟ್ಟಿ ಸರ್ಕಾರಿ ಪದವಿ ಕಾಲೇಜ್‌ಗೆ ಅಕ್ಕಪಕ್ಕದ ಹಳ್ಳಿಗಳಿಂದ, ನದಿಯಾಚೆಗಿನ ಪ್ರದೇಶಗಳಿಂದ ಶಿಕ್ಷಣ ಅರಸಿ ಬರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಈ ಸೇತುವೆ ತೀರ ಅನುಕೂಲವಾಗಿದೆ. ಇವತ್ತಿನವರೆಗೂ ಅಥಣಿ ತಾಲೂಕಿನ ಅಕ್ಕಪಕ್ಕದ ಗ್ರಾಮದ ನೂರಾರು ವಿದ್ಯಾರ್ಥಿಗಳು ದೋಣಿ ಮೂಲಕ ರಬಕವಿ-ಬನಹಟ್ಟಿಗೆ ಶಿಕ್ಷಣ ಅರಸಿ ಬರುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಸರಣಿ ಅಪಘಾತ: ಕಾರು, ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿಗೆ ಸಿಕ್ಕು ಮೂವರ ಸಾವು

5 ವರ್ಷದಲ್ಲಿ ಶೇ.25ರಷ್ಟು ಕಾಮಗಾರಿ ನಡೆಸಿದ್ದ ಕಂಪನಿ:

2018ರಲ್ಲಿ ತೇರದಾಳ ಕ್ಷೇತ್ರದ ಅಂದಿನ ಮಾಜಿ ಶಾಸಕಿ, ಸಚಿವೆ ಉಮಾಶ್ರೀ ಅವರ ಅಧಿಕಾರವಧಿಯಲ್ಲಿ ಈ ಬೃಹತ್‌ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಮೊದಲು ಇದು ಒಟ್ಟು .40 ಕೋಟಿ ವೆಚ್ಚದ ಕಾಮಗಾರಿಯನ್ನು ನಾಗಾರ್ಜುನ ಕನಸ್ಟ್ರಕ್ಷನ್‌ ಅವರಿಗೆ ಟೆಂಡರ್‌ ನೀಡಲಾಗಿತ್ತು. ಆದರೆ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಶೇ.25 ರಷ್ಟುಕಾಮಗಾರಿ ಮಾಡಿ ನದಿಯಲ್ಲಿದ್ದ ನೀರಿನ ಕಾರಣ ಕಾಮಗಾರಿ ಮುಂದುವರೆಸಲಾಗದೇ ಅರ್ಧಕ್ಕೆ ಬಿಟ್ಟು ನಿರ್ಗಮಿಸಿದ್ದರು.

ರಾತ್ರೋರಾತ್ರಿ ಕಾಲ್ಕಿತ್ತ ಕಂಪನಿ:

ಇದಕ್ಕೆ ಪೂರಕವಾಗಿ 2021ರಲ್ಲಿ ಕಾಮಗಾರಿಗೆ ಮತ್ತಷ್ಟುಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಅವರು ಸೇತುವೆ ಅಗಲಗೊಳಿಸಿ ಈ ಟೆಂಡರ್‌ ಕಾಮಗಾರಿಯನ್ನು .50 ಕೋಟಿ ಗಳವರೆಗೆ ಹೆಚ್ಚಳಗೊಳಿಸಿವುದರ ಮೂಲಕ ಮತ್ತಷ್ಟುಉತ್ತಮ ರೀತಿಯಲ್ಲಿ ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿಸಿದ್ದರು. ಇದೀಗ ಕಳೆದ 15 ದಿನಗಳಿಂದ ಗುತ್ತಿಗೆ ಪಡೆದ ತೇಜಸ್‌ ಕನಸ್ಟ್ರಕ್ಷನ್ಸ್‌ ಕಂಪನಿಯ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಅಲ್ಲಿಂದ ಕಾಮಗಾರಿ ಸಂಬಂಧಿಸಿದ ಯಂತ್ರೋಪಕರಣಗಳನ್ನೂ ಸ್ಥಳಾಂತರಿಸಿ ರಾತ್ರೋರಾತ್ರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸೇತುವೆ ನಿರ್ಮಾಣಕ್ಕೆ ವಿರೋಧ:

ಕಾಮಗಾರಿ ವಿಳಂಬವಾಗಿ ತಾತ್ಕಾಲಿಕ ಸ್ಥಗಿತಗೊಂಡಿದ್ದರೂ ಸೇತುವೆ ನಿರ್ಮಾಣ ವೆಚ್ಚದ ಮತ್ತು ತಾಂತ್ರಿಕ ವಿಷಯಗಳ ಕುರಿತು ಮುನ್ನವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ತಾಲೂಕಿನ ಜನರಲ್ಲಿ ಬೇಸರ ಮೂಡಿಸಿದೆ. ಸೇತುವೆ ಕಾರ್ಯ ಮುಗಿಸಲು 4-5 ಎಕರೆಯಷ್ಟುಭೂಮಿಯನ್ನು ವಶಪಡಿಸಿಕೊಂಡಿರುವ ಸರ್ಕಾರದಿಂದ ಇಲ್ಲಿಯವರೆರೂ ಯಾವುದೇ ರೈತರಿಗೆ ಪರಿಹಾರ ನೀಡಿಲ್ಲವಾದ್ದರಿಂದ ಭೂ ಮಾಲೀಕರು ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ಶೀಘ್ರವೇ ಕಾಮಗಾರಿ ಪುನರ್‌ ಪ್ರಾರಂಭಿಸಬೇಕೆಂದು ನಾಗರಿಕರ ಒತ್ತಾಯವಾಗಿದೆ.

ಕಂಪನಿ ಹಿಂದೆ ಸರಿದಿದ್ದು ಯಾಕೆ?:

ಟೆಂಡರ್‌ ಸಮಯದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕೃಷ್ಣಾ ನದಿಯಲ್ಲಿನ ನೀರು ಇಲ್ಲದಂತೆ ತಾಂತ್ರಿಕ ಕ್ರಮಗಳನ್ನು ಕೈಗೊಂಡು ಸೇತುವೆಗಳ ಪಿಲ್ಲರ್‌ಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಹಿಪ್ಪರಗಿ ಜಲಾಶಯ ಸನಿಹದಲ್ಲಿರುವ ಕಾರಣ ವರ್ಷಪೂರ್ತಿ ನೀರು ನದಿಯಲ್ಲಿರುತ್ತದೆ. ತುಂಬಿದ ನದಿಯಲ್ಲಿ ಸೇತುವೆ ನಿರ್ಮಾಣದ ವೆಚ್ಚದಲ್ಲಿ ಹೆಚ್ಚಳಗೊಳಿಸಿ ವ್ಯವಸ್ಥೆ ಬದಲಿಸಬೇಕೆಂಬುದು ಈ ಹಿಂದಿನ ಗುತ್ತಿಗೆದಾರರ ಅಭಿಪ್ರಾಯವಾಗಿತ್ತು. ಈ ಬೃಹತ್‌ ಸೇತುವೆ ಕಾಮಗಾರಿಯನ್ನು ನಾಗಾರ್ಜುನ ಕನಸ್ಟ್ರಕ್ಷನ್‌ನವರು ಟೆಂಡರ್‌ ಪಡೆದುಕೊಂಡಿದ್ದ ಕಳೆದ ಬೇಸಿಗೆ ಸಂದರ್ಭದಲ್ಲಿ ಸೇತುವೆ ಪಿಲ್ಲರ್‌ಗಳನ್ನು ಅಳವಡಿಸಿಬೇಕೆಂದರೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ. ಪಿಲ್ಲರ್‌ ಅಳವಡಿಸಲು ನದಿ ಪಾತ್ರದ ನೀರು ತೊಂದರೆಯಾಗಿತ್ತು. ಆದರೆ, ಈ ಬಾರಿಯೂ ನದಿಯಲ್ಲಿ ನೀರು ಖಾಲಿಯಾಗದ ಕಾರಣ ನÜೂತನ ತಂತ್ರಜ್ಞಾನದಿಂದ ನೀರೊಳಗೆ ಪಿಲ್ಲರ್‌ ಹಾಕುವ ಯೋಜನೆ ಕೂಡಾ ರೂಪಿಸಬಹುದಿತ್ತು. ಆದರೆ, ಕಾಮಗಾರಿ ನಡೆಸದೇ ಎರಡನೇ ಗುತ್ತಿಗೆದಾರ ಕಂಪನಿಯೂ ಏಕೆ ಹಿಂದೆ ಸರಿದ್ದಾರೆಂದು ನಿಖರವಾದ ಮಾಹಿತಿ ಲಭ್ಯವಾಗುತ್ತಿಲ್ಲ.

ರಬಕವಿ-ಬನಹಟ್ಟಿಮಹಿಷವಾಡಗಿ ಸೇತುವೆ ಕಾಮಗಾರಿ ಚುರುಕಿನಿಂದ ಕೂಡಿತ್ತು. ಆದರೆ, ಕೆಲವೇ ಕೆಲವು ತಾಂತ್ರಿಕ ತೊಂದರೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇದು ನೀರು ಸಹಿತ ಪಿಲ್ಲರ್‌ ನಿರ್ಮಾಣ ಟೆಂಡರ್‌ ಆಗಿರಲಿಲ್ಲ. ಈ ಹಿಂದೆ ಬೇಸಿಗೆ ಸಂದರ್ಭದಲ್ಲಿ ಎರಡು ತಿಂಗಳು ನದಿ ಖಾಲಿಯಾಗಿರುತ್ತಿತ್ತು. ಅದಕ್ಕಾಗಿ ನೀರು ರಹಿತ ಪಿಲ್ಲರ್‌ ನಿರ್ಮಾಣ ಎಂದು ಟೆಂಡರ್‌ ಆಗಿತ್ತು. ಆದರೆ ನಿರ್ಮಾಣದಲ್ಲಿ ಅಳವಡಿಕೆಯಾಗಬೇಕಾದ ತಾಂತ್ರಿಕ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದ್ದು, ಆದಷ್ಟುಬೇಗ ಸರ್ಕಾರದೊಂದಿಗೆ ಸಕಾರಣಗಳನ್ನು ಚರ್ಚಿಸಿ ಕಾಮಗಾರಿ ಪೂರ್ತಿ ಮಾಡಲು ಯತ್ನಿಸುತ್ತೇನೆ ಅಂತ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.  

ರೈತಸಂಘ ಹೋರಾಟದ ಫಲ; 2 ದಶಕದಿಂದ ಕರೆಂಟ್​ ಬಿಲ್​ ಕಟ್ಟದ ಗ್ರಾಮ!

ಈ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸೇತುವೆ ನಿರ್ಮಾಣ ಕೆಲಸ ಲೋಕೋಪಯೋಗಿ ಇಲಾಖೆಯ ಹುಬ್ಬಳ್ಳಿಯ ವಿಭಾಗದವರಿಂದ ಕಾಮಗಾರಿ ನಿರ್ವಹಣೆಯಾಗುತ್ತಿದೆ. ಕಾಮಗಾರಿ ನಿಂತಿರುವುದಕ್ಕೆ ಯಾವ ಕಾರಣ ಎಂಬ ಬಗ್ಗೆ ನಮಗೂ ನಿಖರವಾದ ಮಾಹಿತಿ ಇಲ್ಲ ಅಂತ ರಬಕವಿ ಜಿಎಲ್‌ಬಿಸಿ ಅಧಿಕಾರಿ ಶ್ರೀಧರ ನಂದಿಹಾಳ ಹೇಳಿದ್ದಾರೆ.  

ರಬಕವಿ-ಮಹಿಷವಾಡಗಿ ಸೇತುವೆ ನಿರ್ಮಾಣ ಈ ಭಾಗದ ಜನತೆಯ ಹಲವು ದಶಕಗಳ ಬೇಡಿಕೆಯಾಗಿದ್ದು, ಇದು ಸಾಕಾರಗೊಂಡಲ್ಲಿ ಮಹಾರಾಷ್ಟ್ರ ಮತ್ತು ಅಥಣಿ ತಾಲೂಕಿನ ಹಳ್ಳಿಗಳಿಗೆ ಹತ್ತಿರದ ಮಾರ್ಗವಾಗುತ್ತದೆ. ತಾಂತ್ರಿಕ ಕಾರಣಗಳನ್ನು ಮತ್ತು ಅದಕ್ಕೆ ಆಗುವ ವೆಚ್ಚವನ್ನು ಅಧಿಕಾರಿಗಳು ಸಮರ್ಪಕವಾಗಿ ಅಂದಾಜಿಸಿದ್ದರೆ ಕಾಮಗಾರಿ ಈಗಾಗಲೇ ಪೂರ್ಣಗೊಂಡು ಲೋಕಾರ್ಪಣೆಯಾಗುತ್ತಿತ್ತು. ಜವಾಬ್ದಾರಿತನದಿಂದ ವಾಸ್ತವಿಕ ವೆಚ್ಚದ ಮತ್ತು ಸೇತುವೆ ಕಾಮಗಾರಿ ಪೂರ್ಣಗೊಳಿಸುವತ್ತ ಸರ್ಕಾರ, ಅಧಿಕಾರಿಗಳು ಕಾರಣ ನೀಡದೇ ಕಾರ್ಯೋನ್ಮುಖರಾಗಬೇಕು ಅಂತ ರಬಕವಿ-ಮಹಿಷವಾಡಗಿ ಸೇತುವೆ ಹೋರಾಟ ಸಮಿತಿ ಮುಖಂಡರು ಡಾ.ರವಿ ಜಮಖಂಡಿ ತಿಳಿಸಿದ್ದಾರೆ. 

click me!