ಚಿರತೆ ದಾಳಿ ಮಾಡಿದ ವೇಳೆ ಮಾಲೀಕನ ರಕ್ಷಣೆಗೆ ಹಸು ಬಂದು ಮಾಲೀಕನ ಜೀವ ಉಳಿಸಿದ್ದು, ಮಾತ್ರವಲ್ಲ ಮನೆ ನಾಯಿಯ ಜೀವ ಕೂಡ ಉಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ: (ಜೂ. 8): ಚಿರತೆ ದಾಳಿ ಮಾಡಿದ ವೇಳೆ ಮಾಲೀಕನ ರಕ್ಷಣೆಗೆ ಹಸು ಬಂದು ಮಾಲೀಕನ ಜೀವ ಉಳಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಗೀಕೆರೆ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಕರಿಹಾಲಪ್ಪ ಚಿತರೆ ದಾಳಿಗೆ ಒಳಗಾದ ರೈತ ನಾಗಿದ್ದು ಘಟನೆ ವಿವರವನ್ನು ಹೀಗೆ ಬಿಚ್ಚಿಟ್ಟಿದ್ದಾರೆ.
ಕೊಡಗೀಕೆರೆ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶ ಉಬ್ರಾಣಿ ಹೋಬಳಿಯಲ್ಲಿ ಅಲ್ಲೇಲ್ಲಿ ಫಾರೆಸ್ಟ್ ದಟ್ಟವಾಗಿದೆ. ಎಂದಿನಂತೆ ಕರಿಹಾಲಪ್ಪ ಹಸು ಮೇಯಿಸಲು ಜಮೀನಿಗೆ ಹೋಗಿದ್ದಾರೆ. ಹಸು ಜೊತೆ ಕರಿಹಾಲಪ್ಪನ ಜೊತೆ ಒಂದು ನಾಯಿಯು ಹೋಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಕಾಡಿನ ಮೂಲೆಯಿಂದ ಬಂದ ಚಿರತೆ ಕರಿಹಾಲಪ್ಪ ಹಾಗೂ ಆತನ ನಾಯಿಯ ಮೇಲೆ ದಾಳಿ ನಡೆಸಿದೆ. ಧೃತಿಗೆಡದ ಕರಿಹಾಲಪ್ಪ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆತನ ಬೆನ್ನಿನ ಮೇಲೆ ಚಿರತೆ ಉಗರಿನಿಂದ ಪರಚಿದೆ. ಬೊಗಳಿ ಪ್ರತಿರೋಧ ಒಡ್ಡುತ್ತಿದ್ದ ನಾಯಿಯ ಮೇಲೂ ಚಿರತೆ ದಾಳಿ ಆದಾಗ ಆತನ ಹಸು ಗೌರಿ ತನ್ನ ಕೊಂಬಿನಿಂದ ಚಿರತೆಗೆ ಗುದ್ದಿದೆ.
Wildlife: ಉಳೆಪಾಡಿ ಮಿತ್ತಬೆಟ್ಟು ಬಳಿ ಉರುಳಿಗೆ ಸಿಲುಕಿ ಚಿರತೆ ಸಾವು!
ಇದರ ಫಲವಾಗಿ ಚಿರತೆ ಅಲ್ಲಿಂದ ಪರಾರಿಯಾಗಿದೆ. ಚಿರತೆ ದಾಳಿಯಿಂದ ಸಂರಕ್ಷಿಸಿಕೊಳ್ಳಲು ತನ್ನ ಮಾಲೀಕನ ನೆರವಿಗೆ ಹಸು ಬಂದಿದ್ದು ಮೂವರ ಸಾಂಘಿಕ ಹೋರಾಟದಿಂದ ಯಾರ ಜೀವಕ್ಕೂ ಹಾನಿಯಾಗಿಲ್ಲ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗದೆ ರೈತ ಕರಿಹಾಲಪ್ಪ ಬದುಕುಳಿದಿದ್ದಾನೆ. ಹಸುವಿನ ಸಹಾಯದಿಂದ ಕರಿಹಾಲಪ್ಪ ನಿಟ್ಟಿಸಿರು ಬಿಟ್ಟಿದ್ದು ತನ್ನ ಪ್ರಾಣ ಉಳಿಸಿದ ಹಸುವಿಗೆ ಎಷ್ಟೇ ಕೃತಜ್ಞತೆ ಹೇಳಿದ್ರು ಸಾಲದು ಎನ್ನುತ್ತಾನೆ.
Shivamogga: ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಚಿರತೆ ಸಾವು!
ಚಿರತೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದ ಗ್ರಾಮಸ್ಥರು
ಈ ವಿಷ್ಯ ಸುತ್ತಮುತ್ತಲ ಗ್ರಾಮಗಳಿಗೂ ಹಬ್ಬಿ ಹಸುವಿನ ಹೋರಾಟವನ್ನು ಕೊಂಡಾಡಿದ್ದಾರೆ. ಕೆಲವೊಮ್ಮ ಹುಲಿ ಚಿರತೆ ಕಾಣಿಸಿಕೊಂಡಾಗ ಹಸುವಿನಂತಹ ಪ್ರಾಣಿ ಓಡುವುದೇ ಹೆಚ್ಚು ಅಂತಹದ್ದರಲ್ಲಿ ಹಸು ಚಿರತೆ ಹಿಮ್ಮಟ್ಟಿಸಿದ್ದು ನಿಜಕ್ಕೂ ಸಾಹಸವೇ ಸರಿ. ಪದೇ ಪದೇ ಗ್ರಾಮದ ಪಕ್ಕದಲ್ಲೇ ಕಾಣಿಸಿಕೊಳ್ಳುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡುತ್ತಲೇ ಇದ್ದಾರೆ. ಕೊನೆಗೆ ಘಟನೆ ನಡೆದ ನಂತರ ಮೂರು ದಿನಗಳಿಂದ ಕೊಡಿಗಿಕೇರಿ ಅರಣ್ಯ ವಲಯದಲ್ಲಿ ಚಿರತೆ ಹಿಡಿಯಲು ಬೋನ್ ಇರಿಸಿದ್ದಾರೆ. ಆದ್ರೆ ಹಸುವಿಂದ ಗುದ್ದಿಸಿಕೊಂಡಿರುವ ಚಿರತೆ ಮತ್ತೆ ಬೋನಿಗೆ ಸಿಗುತ್ತಾ ಕಾದು ನೋಡಬೇಕಿದೆ.