ಮಂಡ್ಯ: ಕೆರೆಗೆ ಹೆಚ್ಚಿನ ನೀರು, ಕೊಚ್ಚಿ ಹೋಯ್ತು ಸೇತುವೆ..!

By Kannadaprabha NewsFirst Published Sep 27, 2019, 10:57 AM IST
Highlights

ಮಂಡ್ಯದ ಮಳವಳ್ಳಿ ಕೆರೆಗೆ ನಾಲೆಯ ಮೂಲಕ ಹರಿಸಲಾಗುವ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಕೊಚ್ಚಿ ಹೋಗಿದೆ. ಸಾರ್ವಜನಿಕರು ರಸ್ತೆ ದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ರಸ್ತೆ ಮಟ್ಟಕ್ಕಿಂತ ಸೇತುವೆ ಕೆಳಗಿದ್ದ ಕಾರಣ ಎತ್ತರಕ್ಕೆ ನಿರ್ಮಿಸಲು ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿತ್ತು. ಜನರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಮಣ್ಣಿನ ಸೇತುವೆ ನಿರ್ಮಿಸಲಾಗಿತ್ತು.

ಮಂಡ್ಯ(ಸೆ.27): ಮಳವಳ್ಳಿ ಕೆರೆಗೆ ನಾಲೆಯ ಮೂಲಕ ಅತಿಯಾದ ನೀರು ಬಿಟ್ಟಪರಿಣಾಮ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮಣ್ಣಿನ ಅಡ್ಡ ಸೇತುವೆ ಕೊಚ್ಚಿ ಹೋಗಿ ಸಾರ್ವಜನಿಕರು ರಸ್ತೆ ದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ಸುಲ್ತಾನ್‌ ರಸ್ತೆ ಮೂಲಕ ಕೋರೆಗಾಲ - ಮಾದಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ನಡೆದಿದೆ.

ಈ ಹಿಂದೆ ರಸ್ತೆ ಮಟ್ಟಕ್ಕಿಂತ ಸೇತುವೆ ಕೆಳಗಿದ್ದ ಕಾರಣ ಎತ್ತರಕ್ಕೆ ನಿರ್ಮಿಸಲು ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿತ್ತು. ಜನರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಮಣ್ಣಿನ ಸೇತುವೆ ನಿರ್ಮಿಸಲಾಗಿತ್ತು.

ಕೇಡು ಮಾಡಿದವ್ರಿಗೂ ಒಳ್ಳೇದಾಗ್ಲಿ, ಸರ್ಕಾರ ಕೆವಿದರವ ಬಗ್ಗೆ ಎಚ್‌ಡಿಕೆ ಮಾತು

ಕಳೆದ ಕೆಲ ದಿನಗಳಿಂದ ಹೆಚ್ಚು ಮಳೆ ಬಿದ್ದು ನೀರು ಹೆಚ್ಚಾಗಿ ಹರಿದು ಬಂದಿದ್ದರಿಂದ ಮಣ್ಣಿನ ಸೇತುವೆ ಕೊಚ್ಚಿ ಹೋಗಿ ನಾಲ್ಕೈದು ದಿನ ಕಳೆದರೂ ಯಾರು ಕೂಡ ಭೇಟಿ ನೀಡಿ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಕೋರೇಗಾಲ - ಮಾದಹಳ್ಳಿ ಜನರು ಮಳವಳ್ಳಿ ಪಟ್ಟಣಕ್ಕೆ ಬರಲು ಐದಾರು ಕಿಮೀ ಬಳಸಿ ಬರುವಂತಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಈ ಮಾರ್ಗವಾಗಿಯೇ ಬರುತ್ತಿದ್ದರು. ಜೊತೆಗೆ ರೈತರು ತಮ್ಮ ಸಾಕುಪ್ರಾಣಿಗಳಿಗೆ ಜಮೀನಿನಿಂದ ಎತ್ತಿನ ಗಾಡಿ ಹಾಗೂ ದ್ವಿಚಕ್ರ ವಾಹನದಲ್ಲಿ ಮೇವು ಸಾಗಾಣೆ ಮಾಡುತ್ತಿದೆ. ಈಗ ಸೇತುವೆ ಕೊಚ್ಚಿ ಹೋಗಿರುವುದರಿಂದ ತೀವ್ರ ಸಮಸ್ಯೆಯಾಗಿದೆ.

ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

ಬುಧವಾರ ಗ್ರಾಮದ ಯುವಕರು, ರೈತರು ಸೇರಿ ಕಾಲುವೆಗೆ ಅಡ್ಡಲಾಗಿ ರಸ್ತೆ ಬದಿ ಇದ್ದ ವಿದ್ಯುತ್‌ ಕಂಬಗಳನ್ನು ಇಟ್ಟು ನಡೆದು ದಾಟುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಅದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೂಡಲೇ ಗುತ್ತಿಗೆದಾರರಾಗಲಿ ಅಥವಾ ಸಂಬಂಧಿಸಿದ ಇಂಜಿನೀಯರ್‌ ಆಗಲಿ ಭೇಟಿ ನೀಡಿ ತಾತ್ಕಾಲಿಕ ಸೇತುವೆಯನ್ನಾದರೂ ಸಮರ್ಪಕವಾಗಿ ಸರಿಪಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

click me!