ಸೂರ್ಯಕಾಂತಿ, ಕಬ್ಬು, ದಾಳಿಂಬೆ ಬೆಳೆದ ರೈತರು ಬೀದಿಗೆ | ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ| ಜನರ ಬದುಕನ್ನು ನುಂಗಿ ಹಾಕಿದ ಪ್ರವಾಹ| ಈ ಭಾಗದ ರೈತರು ತಲೆ ಮೇಲೆ ಕೈಹೊತ್ತುಕೊಂಡು ಕುಳಿತು ಸರ್ಕಾರದ ಪರಿಹಾರಕ್ಕಾಗಿ ಕಾಯ್ದು ಕುಳಿತಿದ್ದಾರೆ| ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋದ ದಾಳಿಂಬೆ, ಲಿಂಬೆ, ತೆಂಗು ಸೇರಿದಂತೆ ಕಬ್ಬು, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ನಾನಾ ಬೆಳೆಗಳು| ಎಲ್ಲಿ ನೋಡಿದರಲ್ಲಿ ಕಮರಿ ನಿಂತ ಬೆಳೆಗಳೇ ಕಾಣಸಿಗುತ್ತವೆ|
ಶ್ರೀನಿವಾಸ ಬಬಲಾದಿ
ಲೋಕಾಪುರ(ಸೆ.27) ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಅಲ್ಲಿನ ಜನರ ಬದುಕನ್ನು ನುಂಗಿ ಹಾಕಿದೆ. ಈ ವೇಳೆ ಪ್ರವಾಹ ನೀರು ಜಮೀನುಗಳಿಗೆ ನುಗ್ಗಿ ರೈತರ ಬೆಳೆದ ಬೆಳೆಯ ಜತೆಗೆ ಅವರ ಅನ್ನವನ್ನೂ ಕಸಿದುಕೊಂಡಿದೆ. ಹೀಗಾಗಿ ಈ ಭಾಗದ ರೈತರು ತಲೆ ಮೇಲೆ ಕೈಹೊತ್ತುಕೊಂಡು ಕುಳಿತು ಸರ್ಕಾರದ ಪರಿಹಾರಕ್ಕಾಗಿ ಕಾಯ್ದು ಕುಳಿತಿದ್ದಾರೆ.
ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಲಿಂಬೆ, ತೆಂಗು ಸೇರಿದಂತೆ ಕಬ್ಬು, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ನಾನಾ ಬೆಳೆಗಳು ಹೊಲದಲ್ಲಿ ಪ್ರವಾಹದ ಹೊಡೆತಕ್ಕೆ ಬರಿದಾಗಿವೆ. ಎಲ್ಲಿ ನೋಡಿದರಲ್ಲಿ ಕಮರಿ ನಿಂತ ಬೆಳೆಗಳೇ ಕಾಣಸಿಗುತ್ತವೆ. ಇದರಿಂದಾಗಿ ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ಮುಧೋಳ ತಾಲೂಕಿನ ಲೋಕಾಪುರ ಹೋಬಳಿಯ ಭಂಟನೂರ, ಬದ್ನೂರ, ಜಿನ್ನೂರ, ಚಿಕ್ಕೂರ, ಹೆಬ್ಬಾಳ ಗ್ರಾಮಗಳ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ರೈತರ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದಾಳಿಂಬೆ, ಬಾಳೆ ಬೆಳೆ ಪ್ರವಾಹದ ನೀರಿನ ರಭಸಕ್ಕೆ ಸಂಪೂರ್ಣವಾಗಿ ನಾಶವಾಗಿದೆ.
ಪ್ರವಾಹಕ್ಕೆ ಹಾಳಾದ ಬೆಳೆ
ಕಳೆದ ತಿಂಗಳು ಘಟಪ್ರಭಾ ನದಿಯ ಪ್ರವಾಹದ ನೀರು ದಾಳಿಂಬೆ ತೋಟದಲ್ಲಿ ನುಗ್ಗಿ ಸಂಪೂರ್ಣ ಮುಳುಗಡೆಯಾಗಿತ್ತು. ಅದರಂತೆಯೇ ಕಬ್ಬು, ಸೂರ್ಯಕಾಂತಿ, ಈರುಳ್ಳಿ ಕೂಡ ಕೊಚ್ಚಿಕೊಂಡು ಹೋಗಿವೆ. ಇದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದ್ದು, ಮುಂದಿನ ಜೀವನ ಹೇಗೆ ಎಂಬ ಭಯ ಈಗಲೂ ಕಾಡುತ್ತಿದೆ. ಗ್ರಾಮದ ಈರಪ್ಪ ಹರಿಜನ ಬೆಳೆದಿದ್ದ ದಾಳಿಂಬೆ ಬೆಳೆಯನ್ನು ನೋಡಿದರೆ ಸಾಕು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನುವುದು ಅರ್ಥವಾಗುತ್ತದೆ. ಮಾತ್ರವಲ್ಲ, ಪ್ರವಾಹದ ಭೀಕರತೆ ಎಷ್ಟು ಪ್ರಮಾಣದಲ್ಲಿತ್ತು ಎನ್ನುವುದು ಕೂಡ ಇದರಿಂದ ವೇದ್ಯವಾಗುತ್ತದೆ.
ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ದಾಳಿಂಬೆ ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ಆದರೆ ಇಲ್ಲಿಯವರೆಗೆ ನಮ್ಮ ಕಡೆಗೆ ಯಾರೂ ಬಂದಿಲ್ಲ ಎನ್ನುವುದು ದಾಳಿಂಬೆ ಬೆಳೆಗಾರರ ಆರೋಪ. ಸರ್ಕಾರ ಈಗಾಗಲೇ ಬೆಳೆ ಹಾನಿಯಾದ ಬಗ್ಗೆ ಆಯಾ ಗ್ರಾಮಗಳ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸರ್ವೆ ಮಾಡುವ ಕಾರ್ಯ ನಡೆಸಲು ಮುಂದಾಗಿದೆ.
ಪರಿಹಾರ ನೀಡಲು ಸರಕಾರಕ್ಕೆ ಆಗ್ರಹ
ಘಟಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿದೆ. ಸರ್ವೆ ನಡೆಸಿ ಸಂಪೂರ್ಣವಾಗಿ ಹಾಳಾದ ಕಬ್ಬು, ದಾಳಿಂಬೆ ಬೆಳೆಗಳಿಗೆ ಒಂದು ಎಕರೆಗೆ ಕನಿಷ್ಠ 50 ಸಾವಿರಗಳನ್ನು ಪರಿಹಾರವಾಗಿ ನೀಡಬೇಕು ಎಂದು ಸರ್ಕಾರವನ್ನು ರೈತರು ಆಗ್ರಹಿಸುತ್ತಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ದಾಳಿಂಬೆ ಕೃಷಿ ಮಾಡಲು 1.50 ಲಕ್ಷ ಖರ್ಚು ಬರುತ್ತದೆ. ಇನ್ನಿತರ ಖರ್ಚು ಮಾಡಬೇಕಾಗುತ್ತದೆ. ಆದರೆ, ಪ್ರವಾಹ ಬಂದು ನಮ್ಮ ಬೆಳೆ ಪೂರ್ಣ ಹಾಳಾಗಿ ಹೋಗಿದೆ. ಇನ್ನು ಈ ವರ್ಷ ದಾಳಿಂಬೆ ಕೈಯ್ಯಾಗ ಬರುವುದಿಲ್ಲ. ಹೀಗಾದರೆ, ಜೀವನ ಹೇಗೆ ನಡೆಸುವುದು? ಇನ್ನು ಮಕ್ಕಳನ್ನು ಹೇಗೆ ಸಾಕುವುದು? ಅವರ ಮುಂದಿನ ಜೀವನಕ್ಕೆ ಏನು ಮಾಡಬೇಕು ಎಂಬುವುದು ರೈತರು ಅಳಲು ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಜಿನ್ನೂರ ಗ್ರಾಮದ ರೈತ ಸುರೇಶಗೌಡ ಪಾಟೀಲ ಅವರು, ದಾಳಿಂಬೆ ಘಟಪ್ರಭಾ ನದಿಯ ರಭಸಕ್ಕೆ ಕೊಚ್ಚಿ ಹೋಗೈತ್ರಿ. ಸರ್ಕಾರ ಈ ಕೂಡಲೇ ದಾಳಿಂಬೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ರೈತರ ಹೊಲಗಳನ್ನು ಸಮತಟ್ಟು ಮಾಡಿ ಪುನಃ ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಅಪಾರ ಹಾನಿ ಶತಮಾನದ ಪ್ರವಾಹಕ್ಕೆ ನದಿ ಪ್ರದೇಶದ ಗ್ರಾಮಗಳ ಜನತೆ ಅಕ್ಷರಶಃ ಬೀದಿಗೆ ಬಂದಿದ್ದಾರೆ. ತಾವು ಬೆಳೆದ ಬೆಳೆಯಲ್ಲ ನೀರು ಪಾಲಾಗಿದ್ದರಿಂದ ಅಲ್ಲಿಯ ರೈತರಿಗೆ ದಿಕ್ಕು ತೋಚದಂತಾಗಿದೆ. ಪ್ರವಾಹದ ವೇಳೆ ಕಬ್ಬು ಅಂದಾಜು 300 ಎಕರೆ, ಬಾಳೆ 25 ಕ್ಕೂ ಅಧಿಕ ಎಕರೆ, ಲಿಂಬೆ, ಉಳ್ಳಾಗಡ್ಡಿ, ತೆಂಗು, ಸೂರ್ಯಕಾಂತಿ ಹೀಗೆ ಅನೇಕ ಬೆಳೆಗಳು ನೀರಲ್ಲಿ ಮಣ್ಣು ಪಾಲಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.