* ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೂಲಿ ಕಾರ್ಮಿಕರು, ಗಿರಿಜನರೇ ಹೆಚ್ಚಿರುವ ಗ್ರಾಮಗಳು
* 30 ಲಕ್ಷ ಹಣ ಒಂದೇ ವಾರಕ್ಕೆ ಮಣ್ಣುಪಾಲು
* ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರ ಆಕ್ರೋಶ
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜೂ.21): ಕಳೆದ ಎರಡು ವರ್ಷಗಳ ಹಿಂದೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ನೆರೆ ಹಾವಳಿ ಪ್ರದೇಶಕ್ಕೆ ಸರ್ಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿ ನಡೆದ ಕಾಮಗಾರಿ ಕಳಪೆ ಎನ್ನುವ ಆರೋಪ ಕೇಳಿ ಬಂದಿತ್ತು, ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ವಾರ ಓಪನ್ ಆಗಿದ್ದ ಕಿರುಸೇತುವೆ ಕಳಚಿ ಬಿದ್ದಿರುವುದು.
undefined
30 ಲಕ್ಷ ಹಣ ಒಂದೇ ವಾರಕ್ಕೆ ಮಣ್ಣು ಪಾಲು
ಕಳೆದ ಒಂದು ವಾರದ ಹಿಂದಷ್ಟೇ ಓಪನ್ ಆಗಿದ್ದ ಕಿರುಸೇತುವೆ ಒಂದೇ ಒಂದು ಸಣ್ಣ ಮಳೆಗೆ ಕುಸಿದು ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿಸನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದ ಸುತ್ತಮುತ್ತಲಿನ ಚೌಡಿಬಿಳಲ್, ಕಟ್ಟೆಮನೆ, ಕೋಣೆಮನೆ, ಈಚಲಹೊಳೆ ಸೇರಿದಂತೆ ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಕಳೆದ ವರ್ಷದ ಮಳೆಗಾಲದಲ್ಲಿ ಕೊಚ್ಚಿ ಹೋಗಿತ್ತು. ಈ ಭಾಗದ ಜನಸಾಮಾನ್ಯರಿಗೆ ಬೇರೆ ದಾರಿ ಇಲ್ಲದ ಕಾರಣ 30 ಲಕ್ಷ ವೆಚ್ಚದಲ್ಲಿ ಈ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಸೇತುವೆಯ ಕಾಮಗಾರಿ ಮುಗಿದು ಕೇವಲ ಒಂದೇ ಒಂದು ವಾರ ಕಳೆದಿತ್ತು.
CHIKKAMAGALURU: 20 ವರ್ಷಗಳಲ್ಲಿ 2500ಕ್ಕೂ ಹೆಚ್ಚು ಜನರಿಗೆ ಯೋಗ ತರಬೇತಿ ನೀಡಿದ ಕಡೂರಿನ ದಂಪತಿ
ಮಳೆ ಮಧ್ಯೆ ಪಿಕಪ್ ವಾಹನವೊಂದು ಸೇತುವೆ ಮೇಲೆ ಸಂಚರಿಸುತ್ತಿದ್ದಂತೆ ಸೇತುವೆಯ ಒಂದು ಭಾಗದ ತಡೆಗೋಡೆ ಸಂಪೂರ್ಣ ಕಳಚಿ ಬಿದ್ದಿದೆ. ಪಿಕಪ್ ವಾಹನದಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಇಬ್ಬರು ದೊಡ್ಡಮಟ್ಟದ ಅನಾಹುತಕ್ಕೆ ಸಿಗುತ್ತಿದ್ದರು. ಸೇತುವೆ ಪಕ್ಕದಲ್ಲಿ ಸುಮಾರು 50 ಅಡಿ ಆಳದ ಕಂದಕವಿದ್ದು ಗಾಡಿ ಬಿದ್ದಿದ್ದಾರೆ ಪಿಕಪ್ ವಾಹನ ಕೂಡ ಸಂಪೂರ್ಣ ನಜ್ಜುಗೊಜ್ಜಾಗುತ್ತಿತ್ತು. ಸೇತುವೆ ಮೇಲೆ ಸಿಕ್ಕಿಹಾಕಿಕೊಂಡ ವಾಹನವನ್ನು ಎಳೆಯಲು ಸ್ಥಳಿಯರು ಹರಸಾಹಸ ಮಾಡಿದ್ದಾರೆ. 30 ಲಕ್ಷ ಹಣದ ಸೇತುವೆ ಒಂದೇ ವಾರಕ್ಕೆ ಕುಸಿದು ಬಿದ್ದ ಪರಿಣಾಮ ಸ್ಥಳೀಯರು ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಮಗ್ರ ತನಿಖೆಗೆ ಒತ್ತಾಯ
ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿತ್ತು. ಅನುದಾನದಲ್ಲಿ ನಡೆದಿರುವ ಸೇತುವೆ ,ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಆರೋಪಿಸಿತ್ತು.
ಚಿಕ್ಕಮಗಳೂರು: ಕೆರೆ ಉಸುಕಿನಲ್ಲಿ ಸಿಲುಕಿ ಮೂವರು ವಿದ್ಯಾರ್ಥಿಗಳು ಸಾವು
ಅತಿವೃಷ್ಟಿ ಪರಿಹಾರದ ಹಣದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಮೂಡಿಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಜೆಡಿಎಸ್ ನಾಯಕರು ಭ್ರಷ್ಟಾಚಾರದ ಆರೋಪವನ್ನು ವರಿಸಿದರು. ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕಿ ಮೋಟಮ್ಮ ಅತಿವೃಷ್ಟಿ ಹಣದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗಿರುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದರು.
ಒಟ್ಟಾರೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿ ಅನುದಾನದಲ್ಲಿ ನಡೆದಿರುವ ಕಾಮಗಾರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ, ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎನ್ನುವುದಕ್ಕೆ ನೆಲ್ಲಿಬೀಡು ಪ್ರಕರಣ ಸಾಕ್ಷಿ ಎನ್ನುವಂತಿದೆ.