ಸರಳ ಮದುವೆಯಾಗಲು ವಧು-ವರರೇ ಇಲ್ಲ| ಮದುವೆ ಮಾಡ್ತೀವಿ ಬನ್ರೀ ಅಂದ್ರೆ ಆಗ್ಲೇ ಮಾಡ್ಕೊಂಡ್ವಿ ಅಂತಾರೆ| ದತ್ತಿ ಇಲಾಖೆ ಸರಳ ವಿವಾಹಕ್ಕೆ ಜೋಡಿಗಳು ಸಿಗುತ್ತಿಲ್ಲ| ಮದುವೆಗೆ ನೋಂದಣಿ ಮಾಡಿಸಿದವರು ಈಗ ವೈವಾಹಿಕ ಜೀವನದಲ್ಲಿ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಅ.24): ಧಾರ್ಮಿಕ ದತ್ತಿ ಇಲಾಖೆ ಸರಳ-ಸಾಮೂಹಿಕ ವಿವಾಹ ಮಾಡಲು ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಿತು. ಕೊರೋನಾ ತಗ್ಗಿದ ಮೇಲೆ ಇದೀಗ ಮದುವೆ ಮಾಡಲು ಇಲಾಖೆ ಮತ್ತೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಮದುವೆಯಾಗಲು ಜೋಡಿಗಳೇ ಇಲ್ಲ!
undefined
ಒಂದಷ್ಟು ಆರ್ಥಿಕ ಹೊರೆ ಕಡಿಮೆಯಾದೀತು ಎಂದು ಧಾರ್ಮಿಕ ದತ್ತಿ ಇಲಾಖೆ ಆಶ್ರಯದಲ್ಲಿ ಸರಳ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದವರು ಕೊರೋನಾ ಸಂದರ್ಭದಲ್ಲಿಯೇ ಹೊಸ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಇದು ದತ್ತಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ. ಕೊರೋನಾ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಸರಳ ಸಾಮೂಹಿಕ ವಿವಾಹಕ್ಕೆ ದತ್ತಿ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮದುವೆಗೆ ನೋಂದಣಿ ಮಾಡಿಸಿದ ಬಹುತೇಕರು ಹಸೆಮಣೆ ತುಳಿದು ತಿಂಗಳುಗಳೇ ಕಳೆದಿವೆ ಎಂದು ಗೊತ್ತಾಗಿದೆ. ಈ ಕುರಿತು ನಡೆದ ಸಭೆಯಲ್ಲಿ ಈ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಯಡಿಯೂರಪ್ಪ, ಸಿದ್ದರಾಮಯ್ಯ ಪಕ್ಷಕ್ಕೆ ಕರೆದಿದ್ದರು: ಜೆಡಿಎಸ್ ನಾಯಕ
ಉದ್ದೇಶ ಹೀಗಿತ್ತು:
ಬಡಜನರು ಮಕ್ಕಳ ಮದುವೆಗೆ ಸಾಲ ಮಾಡಿಕೊಂಡು ಪರದಾಡುವಂತಾಗಬಾರದು ಎಂಬ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಸರಳ-ಸಾಮೂಹಿಕ ವಿವಾಹ ಮಾಡಲು ತೀರ್ಮಾನಿಸಿದ್ದರು. ಮದುವೆಯ ಖರ್ಚು ವೆಚ್ಚಗಳನ್ನು ದತ್ತಿ ಇಲಾಖೆಯಿಂದ ನಿಭಾಯಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಈ ಪ್ರಕಾರ ಮದುವೆಯಾಗುವ ವಧುವಿಗೆ . 10 ಸಾವಿರ (ತಾಳಿ, ಕಾಲುಂಗರ, ಸೀರೆ, ಕುಪ್ಪಸಕ್ಕೆ) ಹಾಗೂ ವರನಿಗೆ 5 ಸಾವಿರ (ಪಂಚೆ, ಅಂಗಿ ಖರೀದಿಗೆ) ನೀಡುವುದು ಸೇರಿದಂತೆ ಒಂದು ಜೋಡಿಗೆ . 55 ಸಾವಿರ ಖರ್ಚು ಮಾಡಲು ನಿರ್ಧರಿಸಿತು. ಸರಳ ಮದುವೆಯಾಗಲು ಬಯಸಿ ಬಳ್ಳಾರಿ ಜಿಲ್ಲೆಯಲ್ಲಿ 313 ಜೋಡಿಗಳು ನೋಂದಾಯಿಸಿದ್ದವು. ರಾಜ್ಯದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಸರಳ ಮದುವೆಯಾಗಲು ಇಚ್ಛಿಸಿದ್ದರು. ಏತನ್ಮಧ್ಯೆ ಕೊರೋನಾ ಬಂದಿದ್ದರಿಂದ ತಾತ್ಕಾಲಿಕವಾಗಿ ವಿವಾಹ ಕಾರ್ಯಕ್ಕೆ ತಡೆ ಆಯಿತು. ಇದು ಮದುವೆಯಾಗಲು ಉತ್ಸುಕವಾಗಿದ್ದವರಿಗೆ ನುಂಗದ ತುತ್ತಾಯಿತು. ಕೊರೋನಾ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಹೀಗಾದರೆ ನಾವು ಮದುವೆಯಾಗುವುದು ಸಹ ಸಾಧ್ಯವಿಲ್ಲ ಎಂದರಿತ ಜೋಡಿಗಳು ಕೊರೋನಾ ಸಂದರ್ಭದಲ್ಲಿಯೇ ಮದುವೆಯಾಗಿ ವೈವಾಹಿಕ ಜೀವನ ಆರಂಭಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 313 ಜೋಡಿಗಳ ಪೈಕಿ 310 ಜೋಡಿಗಳು ಆಗಲೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಮಾಡ್ತೀವಿ ಬನ್ರಿ ಅಂದ್ರೆ, ಆಗ್ಲೇ ಆಗೈತೆ ಅಂತಾರೆ. ಕೊರೋನಾ ನಿಯಂತ್ರಣಕ್ಕೆ ಬಂದಿದ್ದರಿಂದ ಮದುವೆ ಮಾಡಿಸಲು ನೋಂದಾಯಿಸಿದ್ದ ಜೋಡಿಗಳಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದೆವು. ಆದರೆ, ಬಹುತೇಕರು ಮದುವೆಯಾಗಿದ್ದಾರೆ ಎಂದು ಗೊತ್ತಾಯಿತು ಎಂದು ಬಳ್ಳಾರಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್. ಪ್ರಕಾಶ್‌ರಾವ್ ತಿಳಿಸಿದ್ದಾರೆ.