ಚುನಾ​ವಣೆಯಿಂದ ಜೆಡಿಎಸ್‌ ಅಭ್ಯರ್ಥಿ ನಿವೃ​ತ್ತಿ: ಕಾರಣ..?

By Kannadaprabha News  |  First Published Oct 24, 2020, 12:55 PM IST

ಪಕ್ಷೇ​ತರ ಅಭ್ಯ​ರ್ಥಿಗೆ ಪಕ್ಷ ಬೆಂಬಲ ಹಿನ್ನೆಲೆ: ಪಶ್ಚಿಮ ಪದವೀಧರರ ಕ್ಷೇತ್ರದಿಂದ ಶಿವಶಂಕರ ಕಲ್ಲೂರು ನಿವೃತ್ತಿ| ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಕಲ್ಲೂರು ಚುನಾವಣಾ ಕಣದಿಂದ ಹಿಂದೆ ಸರಿದ ಶಿವಶಂಕರ ಕಲ್ಲೂರು| 4 ಜಿಲ್ಲೆಗಳ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿಯೇ ಈ ನಿರ್ಧಾರ| 


ಹುಬ್ಬಳ್ಳಿ(ಅ.24): ಒಂದು ವರ್ಷದಿಂದ ಪ್ರಚಾರದಲ್ಲಿ ತೊಡಗಿದ್ದ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಶಿವಶಂಕರ ಕಲ್ಲೂರು ಶುಕ್ರವಾರ ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ನಿವೃತ್ತಿ ಘೋಷಿಸಿದ್ದು, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೇಷರತ್ತು ಬೆಂಬಲ ನೀಡಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ವರಿಷ್ಠರ ಸೂಚನೆ ಮೇರೆಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದರೆ, ಅತ್ತ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ, ಜೆಡಿಎಸ್‌ ಬೆಂಬಲ ಸಿಕ್ಕಿರುವುದು ಆನೆ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ. 

ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ವಿಧಾನ ಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅವರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಮಾಲಾರ್ಪಣೆ ಮಾಡಿ ಶಿವಶಂಕರ ಕಲ್ಲೂರು ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 

Latest Videos

undefined

ಈ ವೇಳೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಕಲ್ಲೂರು ಅವರನ್ನು ವರ್ಷದ ಹಿಂದೆಯೇ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಆದರೆ ಇತ್ತೀಚಿಗೆ ಅವರ ಮಾವ ತೀರಿಕೊಂಡರು. ಹೀಗಾಗಿ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ನಾಲ್ಕು ಜಿಲ್ಲೆಗಳ ಎಲ್ಲ ಮತದಾರರನ್ನು ತಲುಪಲು ಕಷ್ಟವಾಗುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ, ಪ್ರತ್ಯೇಕ ರಾಜ್ಯದ ಕೂಗು ಸರಿಯಾಗಿಯೇ ಇದೆ: ಹೊರಟ್ಟಿ

ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಕಲ್ಲೂರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 4 ಜಿಲ್ಲೆಗಳ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುವುದೂ ನಿವೃತ್ತಿ ಘೋಷಣೆಗೆ ಕಾರಣ ಎಂದು ತಿಳಿಸಿದ ಹೊರಟ್ಟಿ, ಇದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್‌ ಆಗುವುದಿಲ್ಲ. ಪಕ್ಷದಲ್ಲೂ ಕೆಲ ಲೋಪಗಳಿರುವುದರಿಂದ ಇಂಥ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಗಮನಕ್ಕೆ ಬಂದಿರಲಿಲ್ಲ: 

ಕಲ್ಲೂರ ಅವರನ್ನು ಕಣದಿಂದ ಹಿಂದೆ ಸರಿಸಿ, ಪಕ್ಷೇತರ ಅಭ್ಯರ್ಥಿ ಬೆಂಬಲಿಸುವ ನಿರ್ಧಾರ ಗುರುವಾರವೇ ನಿರ್ಧರಿಸಿದ್ದರೂ ಈ ವಿಚಾರ ಕಲ್ಲೂರ ಗಮನಕ್ಕೇ ಬಂದಿರಲಿಲ್ಲ. ಶುಕ್ರವಾರ ಮಾಧ್ಯಮದಲ್ಲಿ ಬಂದ ಬಳಿಕವೇ ವಿಚಾರ ಗೊತ್ತಾಗಿದೆ. ಕಮ್ಯುನಿಕೇಷನ್‌ ಗ್ಯಾಪ್‌ನಿಂದ ನನ್ನ ಗಮನಕ್ಕೆ ಬಂದಿರಲಿಕ್ಕಿಲ್ಲ ಎಂದು ಸ್ವತಃ ಕಲ್ಲೂರ ಅವರೇ ಹೇಳಿದರು. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಕೊಂಚ ಭಾವುಕರಾಗಿದ್ದರು. ಒಲ್ಲದ ಮನಸ್ಸಿನಿಂದಲೇ ನಿವೃತ್ತಿ ಘೋಷಿಸಿದರು.

ಜೆಡಿಎಸ್‌ ಬೆಂಬಲ ನನಗೆ ಆನೆ ಬಲ: ಗುರಿಕಾರ

ತಮಗೆ ಜೆಡಿಎಸ್‌ ಬೆಂಬಲ ನೀಡಿರುವುದು ಆನೆ ಬಲ ಬಂದಂತಾಗಿದೆ. ಇದೀಗ ನನ್ನ ಶಕ್ತಿ ದುಪ್ಪಟ್ಟಾಗಿದೆ. ಗೆಲ್ಲುತ್ತೇನೆ ಎಂಬ ವಿಶ್ವಾಸ ಮೂಡಿದೆ ಎಂದು ನುಡಿದರು. ಜೆಡಿಎಸ್‌ ಸೇರಬೇಕೋ ಬೇಡವೋ ಎಂಬುದನ್ನು ಚುನಾವಣೆ ನಂತರ ನಿರ್ಧರಿಸಲಾಗುವುದು. ಈಗ ಸದ್ಯ ಗೆಲ್ಲುವುದೊಂದೆ ನನ್ನ ಮುಂದಿರುವ ಗುರಿ ಎಂದು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ತಿಳಿಸಿದ್ದಾರೆ.

ಪಕ್ಷದ ನಿರ್ಧಾರಕ್ಕೆ ಬದ್ಧ: ಕಲ್ಲೂರು

ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ತಮಗೆ ಪ್ರಚಾರ ನಡೆಸಲು ಅವಕಾಶ ಸಿಗಲಿಲ್ಲ. ಪಕ್ಷದ ವರಿಷ್ಠರು ಈ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಪಕ್ಷಕ್ಕೆಂದು ದ್ರೋಹ ಬಗೆಯಲ್ಲ. ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಜೆಡಿಎಸ್‌ ಅಭ್ಯರ್ಥಿ ಶಿವಶಂಕರ ಕಲ್ಲೂರು ಹೇಳಿದ್ದಾರೆ. 
 

click me!