ಮಸ್ಕಿ: ಖನಿಜ ಸಂಪತ್ತು ಲೂಟಿಗೆ ತಾಲೂಕಾಡಳಿತದಿಂದ ಬ್ರೇಕ್‌..!

By Kannadaprabha NewsFirst Published Nov 23, 2022, 11:30 AM IST
Highlights

ಕಾರ್ಯಾಚರಣೆ ನಡೆಸಿ 10 ಪ್ರತ್ಯೇಕ ಪ್ರಕರಣ ದಾಖಲಿಸಿದ ಮಸ್ಕಿ ತಾಲೂಕು ಆಡಳಿತ, 4,24,380 ರು. ದಂಡ ವಸೂಲಿ

ಮಸ್ಕಿ(ನ.23): ಸರ್ಕಾರಕ್ಕೆ ರಾಜಧನ ಪಾವತಿಸದೆ ತಾಲೂಕಿನ ವಿವಿದೆಡೆ ಅಕ್ರಮವಾಗಿ ಮರಂ ಹಾಗೂ ಕಂಕರ್‌ನ್ನು ಸಾಗಿಸುತ್ತಿದ್ದ ದಂಧೆಕೋರರಿಗೆ ತಾಲೂಕು ಆಡಳಿತ ಬಿಸಿ ಮುಟ್ಟಿಸಿದ್ದು, ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 4,24,380 ರು. ಹರಿದುಬಂದಿದೆ.

ಮಸ್ಕಿ ತಾಲೂಕಿನಲ್ಲಿ ನೈಸರ್ಗಿಕವಾಗಿ ದೊರೆಯುವ, ಮಣ್ಣು, ಕಲ್ಲು, ಕಂಕರ್‌ ಅಕ್ರಮ ಸಾಗಣೆ ವಿರುದ್ಧ ಕೊನೆಗೂ ತಾಲೂಕು ಆಡಳಿತ ದಂಡದ ಅಸ್ತ್ರ ಪ್ರಯೋಗಿಸಿದೆ. ಮರಳು, ಮರಂ, ಜಲ್ಲಿಕ್ರಷರ್‌ ಸೇರಿ ಖನಿಜ ಸಂಪತ್ತನ್ನು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣ ಹೆಚ್ಚಿದೆ. ರಾಜಕೀಯ ಪ್ರಭಾವ ಸೇರಿ ಹಲವು ಮಾರ್ಗ ಹುಡುಕಿ ಕೆಲವು ಗುತ್ತಿಗೆದಾರರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಇಲ್ಲದೇ ಸರ್ಕಾರಕ್ಕೆ ಯಾವುದೇ ರೀತಿ ರಾಜಧನ ಪಾವತಿ ಮಾಡದೇ ನೈಸರ್ಗಿಕ ಸಂಪತ್ತನ್ನು ದೋಚಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದರ ವಿರುದ್ಧ ಕಾರ್ಯಚರಣೆ ನಡೆಸಿದ ತಾಲೂಕು ಆಡಳಿತ ಪ್ರತ್ಯೇಕ 10 ಪ್ರಕರಣಗಳಲ್ಲಿ ದಂಡ ಹಾಕಿ ಬರೋಬ್ಬರಿ 4,24,380 ರು. ವಸೂಲಿ ಮಾಡಿದೆ.

KARNATAKA ASSEMBLY ELECTION 2023: ಕಾಂಗ್ರೆಸ್‌ನ ಒಂದೇ ಟಿಕೆಟ್‌ಗಾಗಿ 16 ಜನರ ಪೈಪೋಟಿ: ಅರ್ಜಿ ಸಲ್ಲಿಕೆ

ತಾಲೂಕು ಆಡಳಿತದಿಂದ ದಂಡಾಸ್ತ್ರ:

ತಾಲೂಕಿನ ಮಸ್ಕಿ ತಾಂಡಾ, ಹಸ್ಮಕಲ್‌, ಮೆದಕಿನಾಳ, ಅಂತರಗಂಗಿ, ದಿಗ್ಗನಾಯಕನಬಾವಿ ಸೇರಿ ಹಲವು ಕಡೆ ಅಕ್ರಮವಾಗಿ ಮರಂ ಸಾಗಿಸಲಾಗುತ್ತಿತ್ತು. ಇನ್ನೂ ಹಂಪನಾಳ, ಮೆದಕಿನಾಳ, ಮಸ್ಕಿ ಸೇರಿ ಹಲವು ಕಡೆಗಳಿಂದ ಅಕ್ರಮವಾಗಿ ಮರಳು ಸಾಗಿಸುವ ದೂರು ಕೇಳಿ ಬರುತ್ತಿದ್ದವು. ಈಗ ದೂರಿನ ಜಾಡು ಹಿಡಿದ ತಾಲೂಕು ಆಡಳಿತ ಪ್ರತ್ಯೇಕ ಪ್ರಕರಣಗಳ ಮೂಲಕ ಗುಡದೂರು-26,800 ರು. ಅಂತರಗಂಗಿ-50,000 ರು, ಮಸ್ಕಿ-73,600 ರು, ಮಸ್ಕಿ-16,160 ರು, ಹಸ್ಮಕಲ್‌-35,000ರು, ದಿಗ್ಗನಾಯಕನಬಾವಿ-11,360 ರು. ಸೇರಿ ಒಟ್ಟು 2,12,920 ರು. ದಂಡ ಹಾಕಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿಸಿದೆ. ಇನ್ನು ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದವರಿಗೆ ಮಸ್ಕಿಯಲ್ಲಿ 16160 ರು ಹಾಗೂ 13080ರು. ಪ್ರತ್ಯೇಕ ಪ್ರಕರಣಗಳಲ್ಲಿ ದಂಡ ಹಾಕಲಾಗಿದೆ. ಇನ್ನು ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ ಟಿಪ್ಪರ್‌ವೊಂದನ್ನು ವಶಪಡಿಸಿಕೊಂಡು ಸಾಧಾರಣ ಜಲ್ಲಿಕಲ್ಲು ಜಪ್ತಿ ಮಾಡಿ 1,32,220 ರೂ. ದಂಡ ಹಾಕಲಾಗಿದೆ. ಹೀಗೆ ವಿವಿಧ ಪ್ರಕರಣಗಳ ಮೂಲಕ 4,24,380ರೂ. ದಂಡ ಹಾಕಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇನ್ನಷ್ಟುಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ.

ಮಸ್ಕಿ ತಾಲೂಕಿನಲ್ಲಿ ಸರ್ಕಾರದ ಅನುಮತಿ ಇಲ್ಲದೇ ಮರಂ, ಜಲ್ಲಿಕಲ್ಲು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಸುಮಾರು 4,24,380 ದಂಡ ಹಾಕಲಾಗಿದೆ ಅಂತ ಮಸ್ಕಿ ತಹಸೀಲ್ದಾರ್‌ ಕವಿತಾ.ಆರ್‌ ತಿಳಿಸಿದ್ದಾರೆ. 
 

click me!