ಬೆಂಗಳೂರು: ಹಳಸಿದ ಊಟ, ಕೇಕ್‌ ಸೇವಿಸಿ ಬಾಲಕ ಸಾವು

By Kannadaprabha News  |  First Published Oct 8, 2024, 6:30 AM IST

ಕೆ.ಪಿ.ಅಗ್ರಹಾರದ ಭುವನೇಶ್ವರಿನಗರ ನಿವಾಸಿ ಧೀರಜ್‌ ಮೃತ ದುರ್ದೈವಿ. ಈತನ ತಂದೆ ಬಾಲರಾಜ್‌ ಮತ್ತು ತಾಯಿ ನಾಗಲಕ್ಷ್ಮೀ ಸಹ ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಮುಂದುವರೆದಿದೆ.
 


ಬೆಂಗಳೂರು(ಅ.08): ಹಳಸಿದ ಆಹಾರ ಸೇವನೆ ಬಳಿಕ ಅದು ವಿಷಾಹಾರ (ಫುಡ್‌ ಪಾಯ್ಸನ್‌)ವಾಗಿ 5 ವರ್ಷದ ಬಾಲಕ ಮೃತಪಟ್ಟು, ದಂಪತಿ ಅಸ್ವಸ್ಥರಾಗಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಪಿ.ಅಗ್ರಹಾರದ ಭುವನೇಶ್ವರಿನಗರ ನಿವಾಸಿ ಧೀರಜ್‌(5) ಮೃತ ದುರ್ದೈವಿ. ಈತನ ತಂದೆ ಬಾಲರಾಜ್‌ ಮತ್ತು ತಾಯಿ ನಾಗಲಕ್ಷ್ಮೀ ಸಹ ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಮುಂದುವರೆದಿದೆ.

ಬಾಲರಾಜ್‌ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭುವನೇಶ್ವರಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಬಾಲರಾಜ್‌ ಫುಡ್‌ ಡೆಲಿವರಿ ಕೆಲಸ ಮಾಡಿದರೆ, ಪತ್ನಿ ನಾಗಲಕ್ಷ್ಮೀ ಗೃಹಿಣಿಯಾಗಿದ್ದಾರೆ. ಭಾನುವಾರ ರಾತ್ರಿ ಬಾಲರಾಜ್‌ ದಂಪತಿ ಹಾಗೂ ಪುತ್ರ ಧೀರಜ್‌ ಊಟ ಮುಗಿಸಿ ನಿದ್ದೆಗೆ ಜಾರಿದ್ದಾರೆ. ಸೋಮವಾರ ಮುಂಜಾನೆ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿ ಚೀರಾಡಲು ಶುರು ಮಾಡಿದ್ದಾರೆ.

Latest Videos

undefined

ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ : ಪ್ರಯಾಣಿಕನ ದೂರಿಗೆ ಸ್ಪಂದಿಸಿದ ರೈಲ್ವೆ

ಮುಂಜಾನೆ ಆಸ್ಪತ್ರೆಗೆ ದಾಖಲು:

ಚೀರಾಟ ಶಬ್ಧ ಕೇಳಿದ ನೆರಹೊರೆಯವರು ಕೂಡಲೇ ಮೂವರನ್ನು ಕಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಧೀರಜ್‌ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಇನ್ನು ಫುಡ್‌ ಪಾಯ್ಸನ್‌ನಿಂದ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲರಾಜ್‌ ಮತ್ತು ನಾಗಲಕ್ಷ್ಮೀಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೀಗಾಗಿ ಘಟನೆ ಬಗ್ಗೆ ನಿಖರ ಮಾಹಿತಿ ನೀಡುವವರು ಯಾರು ಇಲ್ಲ. ದಂಪತಿಗೆ ಪ್ರಜ್ಞೆ ಬಂದು ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರಿಜ್‌ ಆಹಾರ ಸೇವಿಸಿ ಅಸ್ವಸ್ಥ? 

ಬಾಲರಾಜ್‌ ದಂಪತಿ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ನೆಲೆಸಿದ್ದರು. ಮಗಳನ್ನು ಕೆಲ ದಿನಗಳ ಹಿಂದೆ ಅಜ್ಜಿ ಮನೆಗೆ ಕಳುಹಿಸಿದ್ದರು. ಪಿತೃಪಕ್ಷಕ್ಕೆ ಮಾಡಿದ್ದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದು, ಭಾನುವಾರ ರಾತ್ರಿ ಮೂವರೂ ಈ ಆಹಾರ ಸೇವಿಸಿದ್ದರು. ಬಳಿಕ ಮೂವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಕೇಕ್‌ ಸೇವನೆ ಬಳಿಕ ಅಸ್ವಸ್ಥ?

ಮತ್ತೊಂದೆಡೆ ಫುಡ್‌ ಡೆಲವರಿ ಕೆಲಸ ಮಾಡುವ ಬಾಲರಾಜ್‌, ಗ್ರಾಹರೊಬ್ಬರಿಂದ ಆನ್‌ಲೈನ್‌ನಲ್ಲಿ ಕೇಕ್‌ ಆರ್ಡರ್‌ ಪಡೆದಿದ್ದರು. ಬಳಿಕ ಆ ಗ್ರಾಹಕ ಆರ್ಡರ್‌ ರದ್ದುಗೊಳಿಸಿದ ಹಿನ್ನೆಲೆ ಕೇಕ್‌ ಅನ್ನು ಮನೆಗೆ ತಂದು ಫ್ರಿಜ್‌ನಲ್ಲಿ ಇರಿಸಿದ್ದರು. ಭಾನುವಾರ ರಾತ್ರಿ ಊಟ ಮಾಡುವಾಗ ಪತ್ನಿ, ಪುತ್ರನ ಜತೆಗೆ ಈ ಕೇಕ್‌ ಸಹ ಸೇವಿಸಿದ್ದರು. ಬಳಿಕ ಮೂವರೂ ಅಸ್ವಸ್ಥರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

Health Tips : ಸದ್ಯ ಈ ಆಹಾರದಿಂದ ದೂರವಿರಿ ಎಂದ ಆರೋಗ್ಯ ಸಚಿವಾಲಯ

ಬಾಲಕನ ಸಾವಿಗೆ ಫುಡ್‌ ಪಾಯ್ಸನ್‌ ಕಾರಣ:

ಆಸ್ಪತ್ರೆ ವೈದ್ಯಕೀಯ ವರದಿ(ಎಂಎಲ್‌ಸಿ) ಪ್ರಕಾರ ಫುಡ್ ಪಾಯ್ಸನ್‌ನಿಂದ ಮೂವರೂ ಆಸ್ವಸ್ಥರಾಗಿದ್ದು, ಈ ಪೈಕಿ ಧೀರಜ್‌ ಮೃತಪಟ್ಟಿರುವುದು ಖಚಿತಪಟ್ಟಿದೆ. ಮೂವರು ಸೇವಿಸಿದ್ದ ಆಹಾರಗಳ ಮಾದರಿಯನ್ನು ಸಂಗ್ರಹಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫುಡ್‌ ಪಾಯ್ಸನ್‌ನಿಂದ ಐದು ವರ್ಷದ ಬಾಲಕ ಧೀರಜ್‌ ಮೃತಪಟ್ಟಿರುವುದು ಆಸ್ಪತ್ರೆ ನೀಡಿರುವ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಹಳಸಿದ ಆಹಾರ ಸೇವನೆ ಬಳಿಕ ಅದು ವಿಷಾಹಾರವಾಗಿ ದಂಪತಿ ಅಸ್ವಸ್ಥತೆಗೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಲಭ್ಯ ಆಹಾರ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ತಿಳಿಸಿದ್ದಾರೆ. 

click me!