ಸಂರಕ್ಷಿಸಬೇಕಾದ ಇಲಾಖೆಯಿಂದಲೇ ನಿಯಮ ಉಲ್ಲಂಘನೆ| ತೋಟಗಾರಿಕೆ ಉದ್ಯಾನ ಸಂರಕ್ಷಣೆಗೆ ಬೋರ್‌ವೆಲ್ ಕೊರೆತ| ಹಂಪಿಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲಿಸಿಯೇ ಬೋರ್‌ವೆಲ್ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್|
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಸೆ.19):ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳು ಈಗಾಗಲೇ ಮಳೆಗೆ ಬೀಳುತ್ತಿವೆ. ಈ ನಡುವೆ ಭಾರತೀಯ ಪುರಾತತ್ವ ಇಲಾಖೆ ಪ್ರಮುಖ ಸ್ಮಾರಕ ‘ರಾಣಿಸ್ನಾನ ಗೃಹ’ ಬಳಿಯ ಉದ್ಯಾನಕ್ಕಾಗಿ ಬೋರ್‌ವೆಲ್ ಕೊರೆಸುತ್ತಿದೆ!
ಹಂಪಿ ಚಂದ್ರಶೇಖರ ದೇಗುಲದ ಸಮೀಪದಲ್ಲೇ ಬೋರ್‌ವೆಲ್ ಕೊರೆಸಲಾಗುತ್ತಿದೆ. ರಾಣಿ ಸ್ನಾನ ಗೃಹದ ಬಳಿ ತೋಟಗಾರಿಕೆ ಇಲಾಖೆ ಉದ್ಯಾನ ನಿರ್ಮಿಸಿದ್ದು, ಅದು ನೀರಿಲ್ಲದೇ ಒಣಗಿದೆ. ಅದಕ್ಕಾಗಿ ಬೋರ್‌ವೆಲ್ ಕೊರೆಸಲಾಗುತ್ತಿದೆ. ಆದರೆ, ವಿಜಯನಗರ ಕಾಲದಲ್ಲೇ ಕಮಲಾಪುರ ಕೆರೆ ನೀರನ್ನು ಬಳಸಿ ಉದ್ಯಾನ ಹಾಗೂ ಕುಡಿವ ನೀರಿಗೆ ಬಳಸಲಾಗುತ್ತಿತ್ತು. ಆ ಪಾರಂಪರಿಕ ಮಾರ್ಗವಿದ್ದರೂ ಹಂಪಿಯಲ್ಲಿ ಸ್ಮಾರಕಗಳ ಬಳಿಯೇ ನೂರರಿಂದ ನೂರೈವತ್ತು ಅಡಿ ಬೋರ್‌ವೆಲ್ ಕೊರೆಸುತ್ತಿರುವುದು ಆಕ್ಷೇಪಕ್ಕೆ ಎಡೆಮಾಡಿದೆ.
ವಿಶ್ವ ಪರಂಪರೆ ತಾಣ:
ಹಂಪಿಯನ್ನು ಯುನೆಸ್ಕೊ 1986ರಲ್ಲೇ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸಿದೆ. ಹಂಪಿಯ ಸ್ಮಾರಕಗಳಿಗೆ ಧಕ್ಕೆಯಾಗದಂತೆ ನಿಗಾ ವಹಿಸಲು 2002ರಲ್ಲೇ ರಾಜ್ಯ ಸರ್ಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೃಜಿಸಿದೆ. ಸ್ವತಃ ಬಳ್ಳಾರಿ ಜಿಲ್ಲಾಧಿಕಾರಿಯೇ ಈ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿಗೂ ಸಮಾನ ಗೌರವ ನೀಡಲಾಗಿದೆ. ಭಾರತೀಯ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಸಮನ್ವಯತೆಯೊಂದಿಗೆ ಪ್ರಾಧಿಕಾರ ಈ ಇಲಾಖೆಗಳಿಗೆ ಮಾರ್ಗದರ್ಶನ ನೀಡಬೇಕು. ಹೀಗಿದ್ದರೂ ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ಬಳಿಯೇ ರಾಜಾರೋಷವಾಗಿ ಬೋರ್‌ವೆಲ್ ಕೊರೆಸುತ್ತಿರುವುದು ಚರ್ಚೆಗೀಡು ಮಾಡಿದೆ.
ಬಿಕೋ ಎನ್ನುತ್ತಿದ್ದ ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಚ್ಚಳ
ಶೂಟಿಂಗ್‌ಗೆ ನಕಾರ:
ಹಂಪಿಯಲ್ಲಿ ಭಾರಿ ವಾಹನಕ್ಕೆ ಅನುಮತಿ ಇಲ್ಲ ಎಂದು ಈ ಹಿಂದೆ ಹಿಂದಿ ನಟ ಅಕ್ಷಯ್‌ಕುಮಾರ್ ವಿಕ್ರಂ ರಾಠೋಡ್ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಸಿನಿಮಾ ಪ್ಯಾಕಿಂಗ್‌ನಿಂದ ಇಡೀ ಯೂನಿಟ್ ಕಂಗಾಲಾಗಿತ್ತು. ಅದೇ ಮಾದರಿಯಲ್ಲಿ ಎರಡ್ಮೂರು ಸಿನಿಮಾ ತಂಡವೂ ವಾಪಸ್ ಆಗಿದೆ. ಆದರೆ, ಈಗ ಭಾರತೀಯ ಪುರಾತತ್ವ ಇಲಾಖೆಯೇ ಭಾರಿ ವಾಹನ ಬಳಸಿ ಹಂಪಿ ನೆಲದಲ್ಲಿ ನೂರೈವತ್ತು ಅಡಿ ಬೋರ್‌ವೆಲ್ ಕೊರೆಸುತ್ತಿದ್ದು ಇದು ಎಷ್ಟುಸರಿ ಎಂಬ ಪ್ರಶ್ನೆ ಎದ್ದಿದೆ.
ಹಂಪಿಯ ನೆಲದಲ್ಲಿ ಉತ್ಖನನ ಮಾಡಿದರೆ ಪಾರಂಪರಿಕ ಹಾಗೂ ಐತಿಹಾಸಿಕ ಅವಶೇಷಗಳು ದೊರೆಯುತ್ತವೆ. ಹಂಪಿಯಲ್ಲಿ ಮನೆ ಕಟ್ಟಲು ಕೂಡ ನೀಡುವುದಿಲ್ಲ. ರೈತರ ಗದ್ದೆಗಳಲ್ಲೂ ಬೋರ್‌ವೆಲ್ ಕೊರೆಸಲು ನೀಡುವುದಿಲ್ಲ. ಏತನ್ಮಧ್ಯೆ, ಸ್ವತಃ ಭಾರತೀಯ ಪುರಾತತ್ವ ಇಲಾಖೆಯೇ ಬೋರ್‌ವೆಲ್ ಕೊರೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಹಂಪಿಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲಿಸಿಯೇ ಬೋರ್‌ವೆಲ್ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ತಿಳಿಸಿದ್ದಾರೆ.
ಭಾರಿ ಮಳೆಗೆ ಇತ್ತೀಚೆಗೆ ಹಂಪಿಯಲ್ಲಿ ಸ್ಮಾರಕಗಳು ಉರುಳಿ ಬೀಳುತ್ತಿವೆ. ಈ ಮಧ್ಯೆ ಈಗ ಬೋರ್‌ವೆಲ್ ಕೊರೆಸುತ್ತಿರುವುದರಿಂದ ಸ್ಮಾರಕಗಳಿಗೆ ಧಕ್ಕೆಯಾಗಲಿದೆ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ಅವರು ತಿಳಿಸಿದ್ದಾರೆ.
ಮಹಾಮಳೆಗೆ ಕುಸಿದಿದ್ದ ಹಂಪಿಯ ಸಾಲು ಮಂಟಪ