ಐತಿಹಾಸಿಕ ಡಣಾಯಕನ ಕೆರೆಯಲ್ಲಿ ಬೊಂಗಾ: ಆತಂಕದಲ್ಲಿ ರೈತರು

By Kannadaprabha NewsFirst Published Oct 2, 2022, 3:35 PM IST
Highlights

ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯ ಅತಿದೊಡ್ಡ ಕೆರೆ ಹಾಗೂ ಈ ಭಾಗದ ರೈತರ ಜೀವನಾಡಿಯಾಗಿರುವ ಡಣಾಯಕನ ಕೆರೆ ಮಗದ ಬಳಿ ಇರುವ ಕನ್ನೀರಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿ ಮಣ್ಣು ಕುಸಿದು ಬಿದ್ದಿರುವ ಹಿನ್ನೆಲೆರೈತರು ಆತಂಕಗೊಂಡಿದ್ದಾರೆ.

ಮರಿಯಮ್ಮನಹಳ್ಳಿ (ಅ.2) : ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯ ಅತಿದೊಡ್ಡ ಕೆರೆ ಹಾಗೂ ಈ ಭಾಗದ ರೈತರ ಜೀವನಾಡಿಯಾಗಿರುವ ಡಣಾಯಕನ ಕೆರೆ ಮಗದ ಬಳಿ ಇರುವ ಕನ್ನೀರಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿ ಮಣ್ಣು ಕುಸಿದು ಕೆರೆ ಬೊಂಗಾ ಬಿದ್ದ ಹಿನ್ನೆಲೆಯಲ್ಲಿ ರೈತರು ಆತಂಕಗೊಳ್ಳುವಂತಾಗಿದೆ. ರೈತರು ತಕ್ಷಣೆ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ರಾಹುಲ್‌ಗಾಗಿ ಬಳ್ಳಾರಿಯಲ್ಲಿ ವಿಶೇಷ ಸುದರ್ಶನ ಹೋಮ: ಗಣಿನಾಡಲ್ಲಿ ಭಾರತ್ ಜೋಡೋ ಬೃಹತ್ ಸಮಾವೇಶ

ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೆರೆಯ ಮಣ್ಣು ಸಡಿಲಗೊಂಡು ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿರುವುದರಿಂದ ಏಕಾಏಕಿಯಾಗಿ ದೊಡ್ಡದೊಂದು ಬೊಂಗಾ ಬಿದ್ದಿದ್ದು, ಕಳೆದ ತಿಂಗಳು ಕೆರೆ ತುಂಬಿ ಕೋಡಿ ಬಿದ್ದು ಹರಿದಿದ್ದು, ಇದು ವಿಜಯನಗರ ಕಾಲದಲ್ಲಿ ನಿರ್ಮಿಸಿದ ಕೆರೆಯಾಗಿದ್ದು, ಸುಮಾರು 2500ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಹೊಂದಿದೆ, ಕೆರೆಯನ್ನು ನಂಬಿಕೊಂಡು ನೂರಾರು ರೈತರು ಜೀವನ ಸಾಗಿಸುತ್ತಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಕೆರೆ ತುಂಬಿ ಕೋಡಿ ಹರಿದು ಸಾಕಷ್ಟುಪ್ರಮಾಣದಲ್ಲಿ ನೀರು ಹರಿದು ಹೋಗಿರುವುದರಿಂದ ಕೆರೆಯ ಅಕ್ಕಪಕ್ಕದಲ್ಲಿರುವ ಹೊಲ-ಗದ್ದೆಗಳಲ್ಲಿ ಬೆಳೆದು ನಿಂತಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ರೈತರು ನಷ್ಟಅನುಭವಿಸಿದ್ದರು. ಈಗ ಮತ್ತೆ ಕೆರೆ ಬೊಂಗಾ ಬಿದ್ದಿದ್ದನ್ನು ಕಂಡು ರೈತರು ಆಂತಕಕ್ಕೆ ಒಳಗಾಗಿ ತಕ್ಷಣವೇ ರೈತರು ಬೆಳಗ್ಗೆಯೇ ಕೆರೆಗೆ ಬಂದು ಬೊಂಗಾ ಮುಚ್ಚುವ ಕಾರ್ಯ ಕೈಗೊಂಡರು. ಸುದ್ದಿ ತಿಳಿದ ತಕ್ಷಣವೇ ಸಹಾಯಕ ಆಯುಕ್ತ ಸಿದ್ದರಾಮೇಶ್ವರ್‌. ತಹಸೀಲ್ದಾರ್‌ ವಿಶ್ವಜೀತ್‌ ಮೆಹತಾ, ಸಣ್ಣ ನೀರಾವರಿ ಇಲಾಖೆಯ ಎಡ್ಲ್ಯೂ ಟಿ. ಶ್ರೀನಿವಾಸ ಮತ್ತು ಜೆಇ ಎಸ್‌.ಪಿ.ನಾಗೇಂದ್ರಪ್ಪ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳ ಮಾರ್ಗದರ್ಶನದಂತೆ ಜೆಸಿಬಿಯಿಂದ ಮತ್ತು ಟ್ರ್ಯಾಕ್ಟರ್‌ ಮತ್ತು ಕೆಲ ಕೂಲಿ ಕಾರ್ಮಿಕರೊಂದಿಗೆ ಸ್ಥಳೀಯ ರೈತರು ಸೇರಿಕೊಂಡು ಕೆರೆಯ ಬೊಂಗಾವನ್ನು ಮುಚ್ಚಿಸಿದರು.

Ballari: ಮಳೆ ನಷ್ಟದ ಸರ್ವೇಗೆ ಬಾರದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಸಹಾಯಕ ಆಯುಕ್ತ ಸಿದ್ದರಾಮೇಶ್ವರ್‌ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆಯ ಏರಿಯ ಮಣ್ಣು ಕುಸಿತ ಉಂಟಾಗಿ ಕೆರೆ ಬೊಂಗಾ ಬಿದ್ದಿದ್ದೆ.ಇದೊಂದು ಐತಿಹಾಸಿಕ ಕೆರೆಯಾಗಿದ್ದು, ತಕ್ಷಣವೇ ರೈತರು ನೋಡಿರುವುದರಿಂದ ಅಧಿಕಾರಿಗಳು ಸ್ಪಂದಿಸಿದ್ದಾರೆ. ದೊಡ್ಡ ಮಟ್ಟದ ಹಾನಿ ಆಗಿಲ್ಲ, ಕೆರೆಯ ಎರಡು ಕಡೆ ಈ ರೀತಿಯಲ್ಲಿ ಆಗಿದೆ, ಆದರೆ ಯಾವುದೇ ರೀತಿಯ ಅನಾಹುತಗಳು ನಡೆದಿಲ್ಲ. ತಕ್ಷಣವೇ ರೈತರು ಹಾಗೂ ಸಂಬಂಧಿಸಿದ ಇಲಾಖೆ ಬೊಂಗಾ ಮುಚ್ಚುವಂತಹ ಕೆಲಸ ನಿರ್ವಹಿಸಿದ್ದಾರೆ. ಈ ರೀತಿಯಲ್ಲಿ ಮಳೆಯಾದಾಗ ನಾವು ಮುಂಜಾಗ್ರತಾ ಕ್ರಮ ವಹಿಸಬೇಕು ಮತ್ತು ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

click me!