* ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಪತ್ತೆಯಾಗಿದ್ದ ಬಾಂಬ್ ಮಾದರಿಯ ವಸ್ತು
* ಕಿಡಿಗೇಡಿಗಳ ಕೃತ್ಯಕ್ಕೆ ಪರೆಶಾನ್ ಆಗಿದ್ದ ಜನತೆ
* ಇದು ಕಿಡಿಗೇಡಿಗಳ ಕೃತ್ಯ ಎಂದು ಸಾಬೀತು
ಕಾರವಾರ(ಅ.29): ಕುಮಟಾ(Kumta) ಪಾಲಿಟೆಕ್ನಿಕ್ ಬಳಿ ಬುಧವಾರ ರಾತ್ರಿ ಪೊಲೀಸರು ಹಾಗೂ ಜನತೆಯ ನಿದ್ದೆಗೆಡಿಸಿದ್ದು ಅಸಲಿ ಬಾಂಬ್ ಅಲ್ಲ. ಅದೊಂದು ಡಮ್ಮಿ (ನಕಲಿ) ಬಾಂಬ್ ಆಗಿದ್ದು, ಇದು ಯಾವುದೋ ಕಿಡಿಗೇಡಿಗಳ ಕೃತ್ಯವಾಗಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಬಾಂಬ್ ನಿಷ್ಕ್ರೀಯ ದಳ ಆಗಮಿಸಿದ ಮೇಲೆ ಬಾಂಬ್‌ನ ಹಿಂದಿನ ರಹಸ್ಯ ಬಯಲಾಗಿದೆ.
ತಡರಾತ್ರಿ ಮಂಗಳೂರಿನ(Mangaluru) ಬಾಂಬ್ ನಿಷ್ಕ್ರೀಯ ದಳದವರು(Bomb Inactive Force) ಆಗಮಿಸಿ ಈ ಬಾಂಬ್ ಮಾದರಿಯನ್ನು ನಿಷ್ಕ್ರೀಯಗೊಳಿಸಿದರು. ನಂತರ ಪರಿಶೀಲಿಸಿದಾಗ ಇದು ಅಸಲಿ ಬಾಂಬ್(Bomb) ಆಗಿರದೆ, ವೈರ್, ಪೇಪರ್ ತುಣುಕು, ಪಿವಿಸಿ ಪೈಪ್ ಹಾಗೂ ಬ್ಯಾಟರಿ ಸೆಲ್ ಅಳವಡಿಸಿ ಬಾಂಬ್‌ನಂತೆ ಕಾಣಲಿ ಎಂದು ಸರ್ಕ್ಯೂಟ್ ಸಹ ಅಳವಡಿಸಿದ್ದು ಕಂಡುಬಂತು. ಆದರೆ ಯಾವುದೇ ಸ್ಫೋಟಕವೂ ಇರಲಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂದು ಸಾಬೀತಾಯಿತು.
undefined
ಕುಮಟಾದಲ್ಲಿ ಬಾಂಬ್ ರೀತಿ ವಸ್ತು ಪತ್ತೆ: ಜನರಲ್ಲಿ ಆತಂಕ
ಇದು ಅಸಲಿ ಬಾಂಬ್ ಅಲ್ಲ ಎಂದು ತಿಳಿಯುತ್ತಿದ್ದಂತೆ ರಾತ್ರಿಯಿಡಿ ನಿದ್ದೆಗೆಟ್ಟು ಕಾಯುತ್ತಿದ್ದ ಪೊಲೀಸರು(Police) ಹಾಗೂ ಸ್ಥಳೀಯ ಜನತೆ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಈ ನಡುವೆ ಪೊಲೀಸರು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅನುಮಾನಾಸ್ಪದ ವಸ್ತುಗಳ ಬಗ್ಗೆ ಜಾಲಾಡಿದ್ದರು. ಆದರೆ ಬೇರೆ ಎಲ್ಲಿಯೂ ಅಂತಹ ವಸ್ತುಗಳು ಕಾಣಿಸಿರಲಿಲ್ಲ.
ಬುಧವಾರ ಸಂಜೆ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಬಳಿಯ ಗುಡ್ಡದಲ್ಲಿ ವಾಯುವಿಹಾರಕ್ಕೆ ಹೋದ ಕೆಲವರಿಗೆ ಬಾಂಬ್ ಮಾದರಿಯ ವಸ್ತು ಕಂಡುಬಂದಿದೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಅಲರ್ಟ್(Alert) ಆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಸಾರ್ವಜನಿಕರು ಆ ವಸ್ತುವಿನ ಸುತ್ತಮುತ್ತ ಸುಳಿಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಡಾ. ಶಿವಪ್ರಕಾಶ್ ದೇವರಾಜು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈ ನಡುವೆ ಮಂಗಳೂರಿನ ಬಾಂಬ್ ನಿಷ್ಕ್ರೀಯ ದಳಕ್ಕೂ ಮಾಹಿತಿ ನೀಡಲಾಗಿತ್ತು. ಬಾಂಬ್ ಮಾದರಿಯ ವಸ್ತು ಕಂಡುಬಂದ ಪ್ರದೇಶದಿಂದ ಸಮೀಪದಲ್ಲಿ ರೇಲ್ವೆ ನಿಲ್ದಾಣ, ರೈಲು ಮಾರ್ಗ ಹಾದು ಹೋಗಿರುವುದು ವಿವಿಧ ಊಹಾಪೋಹಕ್ಕೆ ಕಾರಣವಾಗಿತ್ತು.
ಕುಮಟಾದ ನಿರ್ಜನ ಪ್ರದೇಶದಲ್ಲಿ ದೊರೆತ ಈ ವಸ್ತು ಬಾಂಬ್ ಆಗಿರದೆ ಡಮ್ಮಿ ಎಂದು ಖಚಿತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿತರ ಪತ್ತೆಗೆ ತಂಡ ರಚಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.