KMC ಪ್ರಥಮ ‘ಮಹಿಳಾ ಮತ್ತು ಮಕ್ಕಳ ಕೇಂದ್ರಕ್ಕೆ ಚಾಲನೆ, ನಟಿ ಶಿಲ್ಪಾ ಶೆಟ್ಟಿ ಕೊಟ್ಟ ಸಲಹೇಗಳೇನು..?

By Kannadaprabha News  |  First Published Sep 27, 2019, 8:30 AM IST

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರು ಮಂಗಳೂರಿನಲ್ಲಿ ಕೆಎಂಸಿ ಜ್ಯೋತಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ದ.ಕ. ಜಿಲ್ಲೆಯ ಪ್ರಥಮ ಪ್ರತ್ಯೇಕ ‘ಮಹಿಳಾ ಮತ್ತು ಮಕ್ಕಳ ಕೇಂದ್ರ’ಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ತಮ್ಮ ಅನುಭವಳನ್ನು ಹಂಚಿಕೊಂಡಿದ್ದಲ್ಲದೆ, ಇತರ ಸಲಹೆಗಳನ್ನೂ ನೀಡಿದ್ದಾರೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.


ಮಂಗಳೂರು(ಸೆ.27): ಮಹಿಳೆಯರು ಗರ್ಭಿಣಿಯಾದಾಗ ಮತ್ತು ಹೆರಿಗೆಯ ಬಳಿಕ ತಮ್ಮ ಆರೋಗ್ಯದ ಕುರಿತು ಅತಿ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯವಂತ ಮಗುವಿನ ಬೆಳವಣಿಗೆಗೆ ಈ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ತುಳುನಾಡು ಮೂಲದ ಹೆಸರಾಂತ ಬಾಲಿವುಡ್‌ ತಾರೆ ಶಿಲ್ಪಾ ಶೆಟ್ಟಿಕುಂದ್ರಾ ಸಲಹೆ ನೀಡಿದ್ದಾರೆ.

ಕೆಎಂಸಿ ಜ್ಯೋತಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ದ.ಕ. ಜಿಲ್ಲೆಯ ಪ್ರಥಮ ಪ್ರತ್ಯೇಕ ‘ಮಹಿಳಾ ಮತ್ತು ಮಕ್ಕಳ ಕೇಂದ್ರ’ಕ್ಕೆ ನಗರದ ಟಿಎಂಎ ಪೈ ಕನ್ವೆನ್ಶನ್‌ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.

Tap to resize

Latest Videos

'ಸಲಾಂ ಬಾಬಣ್ಣ': ಮಂಗಳೂರಿನ ಸೌಹಾರ್ದತೆಯ ಸ್ಟೋರಿ ವೈರಲ್‌

ಗರ್ಭಾವಸ್ಥೆಯಷ್ಟೇ ಅಲ್ಲದೆ, ಹೆರಿಗೆ ಬಳಿಕವೂ ಕಾಳಜಿ ತೆಗೆದುಕೊಳ್ಳಬೇಕು. ಆದರೆ ಭಾರತದಲ್ಲಿ ಮಹಿಳೆಯರು ಕುಟುಂಬ ಸದಸ್ಯರ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಆರೋಗ್ಯ ಕಾಳಜಿ ತೆಗೆದುಕೊಳ್ಳದೆ ಇದ್ದರೆ ತಾಯಿಗೂ ಮಗುವಿಗೂ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿರುತ್ತದೆ ಎಂದು ಎಚ್ಚರಿಸಿದ್ದಾರೆ.

2ನೇ ಸಲ ಕಾಳಜಿ ವಹಿಸಿದೆ:

ತಾನು ಮೊದಲ ಬಾರಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳನ್ನೇ ಉದಾಹಣೆಯಾಗಿ ನೀಡಿದ ಶಿಲ್ಪಾ ಶೆಟ್ಟಿ, ಮೊದಲ ಬಾರಿ ಗರ್ಭಿಣಿಯಾದಾಗ ಆರೋಗ್ಯವಂತೆಯಾಗಿದ್ದರೂ ಆಲ್ಫಾ ಎಂಬ ಸಮಸ್ಯೆಯಿಂದ ಬಳಲಿದ್ದೆ. ಇದರಿಂದ ತೊಂದರೆಯಾಗಿತ್ತು. ಹಾಗಾಗಿ ಎರಡನೇ ಬಾರಿ ಗರ್ಭಿಣಿಯಾದಾಗ ಎಲ್ಲ ಬಗೆಯ ಆರೋಗ್ಯ ಕಾಳಜಿ ವಹಿಸಿದ್ದೆ ಎಂದು ಹೇಳಿದರು.

32 ಕೆಜಿ ತೂಕ ಇಳಿಸಿದೆ:

ಸಾಮಾನ್ಯವಾಗಿ 58-60 ಕೆಜಿ ತೂಕವಿರುತ್ತಿದ್ದ ನಾನು 2ನೇ ಬಾರಿ ಗರ್ಭಿಣಿಯಾಗಿದ್ದಾಗ 82 ಕೆಜಿಗೆ ತೂಕ ಏರಿತ್ತು. ಈ ಸಮಯದಲ್ಲಿ ಎಲ್ಲ ಬಗೆಯ ಆಹಾರ ತಿನ್ನುವುದನ್ನು ಇಚ್ಛಿಸುತ್ತಿದ್ದೆ. ಹೆರಿಗೆಯ ಬಳಿಕ ದೇಹದ ಮೊದಲಿನಂತಾಗಲು ನಾಲ್ಕೈದು ತಿಂಗಳುಗಳು ಬೇಕಾದವು. ಸುಮಾರು 32 ಕೆಜಿ ತೂಕವನ್ನು ಯಾವುದೇ ಕ್ರ್ಯಾಶ್‌ ಡಯಟಿಂಗ್‌ ಇಲ್ಲದೆ ತಗ್ಗಿಸಿಕೊಂಡಿದ್ದೇನೆ. ವೈದ್ಯರ ಸಲಹೆ ಮೇರೆಗೆ ಎಲ್ಲ ಬಗೆಯ ಸಮತೂಕದ ಆಹಾರ ಪಡೆಯುವುದು ಒಳ್ಳೆಯದು ಎಂದು ಶಿಲ್ಪಾ ಶೆಟ್ಟಿಕುಂದ್ರಾ ಸಲಹೆ ನೀಡಿದರು.

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ ಉಪಕುಲಪತಿ ಡಾ.ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ತಾಯ್ತನದ ಹಲವಾರು ಅಗತ್ಯಗಳು, ಸವಾಲುಗಳು ಮತ್ತು ಅವಶ್ಯಕತೆಗಳನ್ನು ಗಮನಿಸಿ ಆರಂಭಿಸಲಾದ ಈ ಸಮಗ್ರ ಕ್ಲಿನಿಕ್‌ ಮಹಿಳೆಯರಿಗೆ ಅತ್ಯದ್ಭುತ ರೀತಿಯಲ್ಲಿ ಲಾಭದಾಯಕವಾಗಲಿದೆ. ಗರ್ಭಿಣಿಯಾಗಿದ್ದಾಗ ಪದೇಪದೇ ಚೆಕ್‌ಅಪ್‌ ಅಗತ್ಯವಿರುತ್ತದೆ. ಏನೇ ಸಮಸ್ಯೆ ಉದ್ಭವಿಸಿದರೂ ಆ ಸಮಯದಲ್ಲಿ ಪರಿಹರಿಸಬಹುದು. ನೂತನ ಕೇಂದ್ರದಲ್ಲಿ ತಾಯಿ- ಮಗುವಿನ ವಿಶೇಷ ಆರೈಕೆಯೊಂದಿಗೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದು ಹೇಳಿದರು.

ವಾಹ್‌ ಮಾಮ್‌ ಸ್ಪರ್ಧೆ:

ಈ ಸಂದರ್ಭ ‘ವಾಹ್‌ ಮಾಮ್‌’ ಸ್ಪರ್ಧೆಯಲ್ಲಿ ಭಾಗವಹಿಸಿದ 350 ಗರ್ಭಿಣಿಯರ ಪೈಕಿ ಟಾಪ್‌ 10ರಲ್ಲಿ ಇಬ್ಬರು ವಿಜೇತರನ್ನು ಶಿಲ್ಪಾ ಶೆಟ್ಟಿಆಯ್ಕೆ ಮಾಡಿದರು. ನಫೀಸಾ ಮಲಿಕ್‌ ವಿನ್ನರ್‌ ಪ್ರಶಸ್ತಿ ಪಡೆದರೆ, ಮೋನಿಶಾ ಡಿಸೋಜ ರನ್ನರ್‌ ಅಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಮಂಗಳೂರು: ಅರಳಿದ ಮಲ್ಲಿಗೆ ಕೇಳಿದ ಬಾಲಿವುಡ್ ತಾರೆ..!

ಮಾಹೆ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ.ಆನಂದ್‌ ವೇಣುಗೋಪಾಲ್‌, ಮಂಗಳೂರು ಕೆಎಂಪಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್‌ ಸಿದ್ದಿಕಿ, ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಕಾರ್ಕಿಕ್‌ ವೇಣುಗೋಪಾಲ್‌, ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ನ ವೈದ್ಯಕೀಯ ಸೇವೆಗಳ ಮುಖ್ಯಸ್ಥೆ ಡಾ.ವಸುಧಾ ಶೆಟ್ಟಿ ಮತ್ತಿತರರಿದ್ದರು.

ಅರಳಿದ ಮಲ್ಲಿಗೆ ಕೇಳಿದ ಶಿಲ್ಪಾ ಶೆಟ್ಟಿ

ಬೆಳಗ್ಗೆ 11.30ರ ವೇಳೆಗೆ ಮಂಗಳೂರಿಗೆ ವಿಮಾನದ ಮೂಲಕ ಬಂದಿಳಿದ ಶಿಲ್ಪಾ ಶೆಟ್ಟಿಹೊಟೇಲ್‌ ತಾಜ್‌ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಅರಳಿದ ಮಲ್ಲಿಗೆ ಇದ್ದರೆ ತಂದುಕೊಡುವಂತೆ ಅಲ್ಲಿ ವಿನಂತಿಸಿದರು ಎಂದು ತಿಳಿದುಬಂದಿದೆ. ಮಧ್ಯಾಹ್ನ 3 ಗಂಟೆಗೆ ಹೊಟೇಲ್‌ನಿಂದ ಎಂಜಿ ರಸ್ತೆಯ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆದ ಕೆಎಂಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಗೋಲ್ಡನ್‌ ಕಲರ್‌ ಸೀರೆ ಅದರ ಮೇಲೆ ಅದೇ ಬಣ್ಣದ ನೀಳ ಅಂಗಿ ಧರಿಸಿ ಶಿಲ್ಪಾ ಶೆಟ್ಟಿಗಮನ ಸೆಳೆದರು. ಬಳಿಕ ಕಟೀಲು ದೇವಾಲಯಕ್ಕೆ ಅಲ್ಲಿಂದ ಕಿನ್ನಿಗೋಳಿಯಲ್ಲಿರುವ ತಮ್ಮ ಕುಟುಂಬಸ್ಥರ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಪೆಲಕಾಯಿ ಗಟ್ಟಿ, ಕೋರಿ ರೊಟ್ಟಿ...

ಕಾರ್ಯಕ್ರಮದುದ್ದಕ್ಕೂ ತುಳುವಿನಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ, ತುಳುನಾಡಿನ ಸಾಂಪ್ರದಾಯಿಕ ಆಹಾರ ‘ಪೆಲಕಾಯಿ ಗಟ್ಟಿ’ ಮತ್ತು ‘ಕೋರಿ ರೊಟ್ಟಿ’ಯನ್ನು ನೆನಪಿಸಿಕೊಂಡರು. ನನಗೆ ಪೆಲಕಾಯಿ ಗಟ್ಟಿಇಲ್ಲದಿದ್ದರೆ ಕೋರಿ ರೊಟ್ಟಿಯೂ ಆದೀತು ಎಂದು ಚಟಾಕಿ ಹಾರಿಸಿದರು. ನಾನು ತುಳುನಾಡಿಗೆ ಸೇರಿದವಳಾಗಿದ್ದೇನೆ ಎನ್ನುವುದು ಸಂತಸದ ವಿಚಾರ ಎಂದೂ ಹೆಮ್ಮೆ ವ್ಯಕ್ತಪಡಿಸಿದರು.

'ಇಂಡಿಯಾ ಹಿಂದೂ ರಾಷ್ಟ್ರ' ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ

click me!