ಡೀಸೆಲ್‌ ಹೊರೆ: ಎಲೆಕ್ಟ್ರಿಕ್‌ ಬಸ್‌ಗಳತ್ತ ಬಿಎಂಟಿಸಿ ಚಿತ್ತ

By Girish GoudarFirst Published May 14, 2022, 7:17 AM IST
Highlights

*    ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಿಂತನೆ
*   1 ಎಲೆಕ್ಟ್ರಿಕ್‌ ಬಸ್‌ಗೆ 1.80 ಕೋಟಿ
*  600 ಕೋಟಿ ಸಾಲ; 600 ಕೋಟಿ ಬಾಕಿ
 

ಬೆಂಗಳೂರು(ಮೇ.14):  ಡೀಸೆಲ್‌ ಬೆಲೆ ಏರಿಕೆ ಮತ್ತು ಕೊರೋನಾ ಕಾರಣದಿಂದ ನೌಕರರ ವೇತನ ಪಾವತಿಗೂ ಪರದಾಡಿದ ಬಿಎಂಟಿಸಿ(BMTC) ಇದೀಗ ಹಂತ ಹಂತವಾಗಿ 500 ಎಲೆಕ್ಟ್ರಿಕ್‌ ಬಸ್‌ಗಳ(Electric Bus) ಖರೀದಿಗೆ ಚಿಂತನೆ ನಡೆಸಿದೆ.

ಈಗಾಗಲೇ ಸ್ಮಾರ್ಟ್‌ಸಿಟಿ(SmartCity) ಯೋಜನೆ ಅಡಿ 90 ಇ-ಬಸ್‌ಗಳು(E-Bus) ಗುತ್ತಿಗೆ ಆಧಾರದಲ್ಲಿ ರಸ್ತೆಗಿಳಿಯುತ್ತಿವೆ. ಬೆನ್ನಲ್ಲೇ ಕೇಂದ್ರದ ಫೇಮ್‌-2 ಯೋಜನೆ ಅಡಿಯೂ 300 ಇ-ಬಸ್‌ಗಳು ಮುಂಬರುವ ದಿನಗಳಲ್ಲಿ ಬರಲಿವೆ. ಇದಲ್ಲದೆ, ಡೀಸೆಲ್‌(Diesel) ಬಸ್‌ಗಳ ಬದಲಿಗೆ ಇನ್ನೂ 500 ಇ-ಬಸ್‌ಗಳನ್ನು ಖರೀದಿಸಿ, ರಸ್ತೆಗಿಳಿಸುವ ಚಿಂತನೆ ಬಿಎಂಟಿಸಿಯ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5000 ಕೋಟಿ ರೂ. ಮೌಲ್ಯದ ಇವಿ ಬಸ್ ಟೆಂಡರ್ ಪಡೆದುಕೊಂಡ ಟಾಟಾ ಮೋಟಾರ್ಸ್

ಫೇಮ್‌-2 ಯೋಜನೆಯಡಿ ಬಿಎಂಟಿಸಿಗೆ ಲಭ್ಯವಾಗಿರುವ ಬಸ್‌ಗಳಲ್ಲಿ ಕೇವಲ 15 ರಷ್ಟುಬಸ್‌ಗಳನ್ನು ಮಾತ್ರ ರಸ್ತೆಗಿಳಿಸಲಾಗಿದೆ. ಇನ್ನುಳಿದ ಬಸ್‌ಗಳಿಗೆ ಅಗತ್ಯವಾದ ರೀತಿಯಲ್ಲಿ ಚಾರ್ಜಿಂಗ್‌ ಘಟಕಗಳು ಸ್ಥಾಪಿಸದ ಪರಿಣಾಮ ರಸ್ತೆಗಿಳಿಸಿಲ್ಲ. ಇದೀಗ ಮತ್ತೆ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಬಿಎಂಟಿಸಿ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

600 ಕೋಟಿ ಸಾಲ; 600 ಕೋಟಿ ಬಾಕಿ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬಿಎಂಟಿಸಿ, ತನ್ನ ನೌಕರರಿಗೆ ವೇತನ ನೀಡಲು ಇಂದಿಗೂ ಸರ್ಕಾರದ ಮೊರೆ ಹೋಗುತ್ತಿದೆ. ಅಲ್ಲದೆ, ಗ್ರ್ಯಾಚುಟಿ, ಭವಿಷ್ಯನಿಧಿ ಸೇರಿದಂತೆ ಸುಮಾರು 600 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ. ಮತ್ತೊಂದೆಡೆ 600 ಕೋಟಿ ರು.ಗಳಿಗೂ ಹೆಚ್ಚು ಸಾಲ ಮಾಡಿಕೊಂಡಿದೆ.

ಈ ನಡುವೆ ಪ್ರಯೋಗ ಹಂತದಲ್ಲಿರುವ ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಶೇ. 60ರಷ್ಟು ಬ್ಯಾಟರಿಯಲ್ಲಿ ಪ್ರಮಾಣ ಖಾಲಿಯಾಗುತ್ತಿದ್ದಂತೆ ಇನ್ನುಳಿದ ಶೇ.40 ಪ್ರಮಾಣ ಶೀಘ್ರದಲ್ಲಿ ಖಾಲಿಯಾಗುತ್ತಿದೆ. ಜತೆಗೆ, ಪಿಕ್‌ಅಪ್‌ ಅಷ್ಟಾಗಿ ಇರುವುದಿಲ್ಲ ಎನ್ನುವುದು ಸೇರಿದಂತೆ ಹಲವು ತಾಂತ್ರಿಕ ಅಂಶಗಳು ಪರಿಶೀಲನೆಯಲ್ಲಿವೆ.

Bengaluru: ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್‌ ಬಸ್‌!

ಈಗಿರುವ ಡೀಸೆಲ್‌ ಆಧಾರಿತ ಬಸ್‌ಗಳಲ್ಲೇ ಸಾವಿರ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ. ಹೀಗಿರುವಾಗ, ಹೊಸ ಬಸ್‌ಗಳ ಖರೀದಿಗೆ ಇಷ್ಟೊಂದು ಉತ್ಸಾಹ ಮತ್ತು ತರಾತುರಿ ಯಾಕೆ ಎಂಬ ಪ್ರಶ್ನೆಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.

ಒಂದು ಎಲೆಕ್ಟ್ರಿಕ್‌ ಬಸ್‌ ಖರೀದಿಗೆ 1.80 ಕೋಟಿ ರು. ಬೇಕಾಗುತ್ತದೆ. 500 ಬಸ್‌ಗಳಿಗೆ 900 ಕೋಟಿ ರು.ಗಳಿಗೂ ಹೆಚ್ಚು ಆಗಲಿದೆ. ಇದರಲ್ಲಿ ಶೇ. 30ರಷ್ಟು ವೆಚ್ಚವನ್ನು ಸರ್ಕಾರ ಭರಿಸಿದರೂ ಬಾಕಿ 600ರಿಂದ 625 ಕೋಟಿ ರು. ಬಿಎಂಟಿಸಿಯೇ ಭರಿಸಬೇಕಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಅದು ಕಷ್ಟ ಸಾಧ್ಯ. ಹಾಗಾಗಿ, ವಿದ್ಯುತ್‌ ಚಾಲಿತ ಬಸ್‌ಗಳ ಖರೀದಿ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
 

click me!