ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ?

By Kannadaprabha NewsFirst Published Jan 22, 2020, 7:48 AM IST
Highlights

ಗಾರ್ಮೆಂಟ್‌ಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್ ನೀಡುವ ಪ್ರಸ್ತಾವನೆ ಒಂದನ್ನು ಇದೀಗ ಇಡಲಾಗಿದೆ. 

ಬೆಂಗಳೂರು [ಜ.22]:  ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ನೀಡಿದ ಬೆನ್ನಲ್ಲೇ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರಿಗೂ ವಾರ್ಷಿಕ ಉಚಿತ ಬಸ್‌ ಪಾಸ್‌ ನೀಡುವ ಸಂಬಂಧ ಬಿಎಂಟಿಸಿಯು ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಬಿಎಂಟಿಸಿಯು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ವಾರ್ಷಿಕ ಉಚಿತ ಸಹಾಯಹಸ್ತ ಬಸ್‌ ಪಾಸ್‌ ನೀಡಲು ಮುಂದಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯು ಬಿಎಂಟಿಸಿಗೆ ಬಸ್‌ ಪಾಸ್‌ ಮೊತ್ತ ಪಾವತಿಸಲಿದೆ. ಅದೇ ಮಾದರಿಯಲ್ಲಿ ಇದೀಗ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರಿಗೂ ಉಚಿತ ಬಸ್‌ ನೀಡಲು ಚಿಂತಿಸಿರುವ ಬಿಎಂಟಿಸಿ, ಈ ಸಂಬಂಧ ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಬಸ್ ಓಡಿಸಿ ಟೀಕೆಗೆ ಗುರಿಯಾದ ಬಿಎಂಟಿಸಿ ಎಂಡಿ ಶಿಖಾ; ಇಲ್ಲಿದೆ ನೋಡಿ ವಿಡಿಯೋ!...

ರಾಜಧಾನಿಯಲ್ಲಿ ಸುಮಾರು ಒಂದೂವರೆ ಸಾವಿರ ಗಾರ್ಮೆಂಟ್ಸ್‌ ಕಾರ್ಖಾನೆಗಳಿದ್ದು, ಅವುಗಳಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಬಹುತೇಕರು ನಗರದ ವಿವಿಧ ಪ್ರದೇಶಗಳಿಂದ ಗಾರ್ಮೆಂಟ್ಸ್‌ಗಳಿಗೆ ಕೆಲಸಕ್ಕೆ ಬರುತ್ತಾರೆ. ಬಿಎಂಟಿಸಿ ಬಸ್‌ಗಳಲ್ಲೇ ಹೆಚ್ಚಿನವರು ಪ್ರಯಾಣಿಸುವುದರಿಂದ ಮಾಸಿಕ ಒಂದು ಸಾವಿರ ರು. ವೆಚ್ಚ ಮಾಡುತ್ತಿದ್ದಾರೆ. 

ಈ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ನೀಡುವುದರಿಂದ ಬಹಳ ಸಹಾಯವಾಗುತ್ತದೆ. ಬಸ್‌ ಪ್ರಯಾಣಕ್ಕೆ ವೆಚ್ಚ ಮಾಡುವ ಹಣವನ್ನು ಕುಟುಂಬ ನಿರ್ವಹಣೆಗೆ ಬಳಸಿಕೊಳ್ಳಬಹುದು ಅಥವಾ ಉಳಿತಾಯ ಮಾಡಬಹುದು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಮಿಕ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ಸಿಗುವ ಸೂಚನೆಯಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

click me!