4 ಮಾರ್ಗಗಳಲ್ಲಿ ಮೆಟ್ರೋ ಫೀಡರ್‌ ಬಸ್‌ ಹೆಚ್ಚಳ, ಯಾವೆಲ್ಲ ಮಾರ್ಗದಲ್ಲಿ ಓಡಾಡಲಿದೆ?

By Kannadaprabha News  |  First Published Nov 26, 2023, 1:47 PM IST

ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್ ಸೇವೆಯನ್ನು ಹೆಚ್ಚಳ ಮಾಡಿದೆ.


ಬೆಂಗಳೂರು (ನ.26): ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್ ಸೇವೆಯನ್ನು ಹೆಚ್ಚಳ ಮಾಡಿದೆ. ಶಾಂತಿನಗರ ಟಿಟಿಎಂಸಿಯಿಂದ ಎರಡು ಮಾರ್ಗಗಳಲ್ಲಿ ಹಾಗೂ ಎಸ್‌ವಿ ಮೆಟ್ರೋ ನಿಲ್ದಾಣ, ವಿಜಯನಗರ ಮೆಟ್ರೋ ನಿಲ್ದಾಣದಿಂದ ತಲಾ ಒಂದು ಮಾರ್ಗದಲ್ಲಿ ನ.27ರಿಂದ ಮೆಟ್ರೋ ಫೀಡರ್‌ ಬಸ್‌ಗಳು ಸಂಚರಿಸಲಿವೆ.

ಶಾಂತಿನಗರ ಟಿಟಿಎಂಸಿಯಿಂದ ಲಾಲ್‌ಬಾಗ್‌ ಮುಖ್ಯರಸ್ತೆ, ಮಹಿಳಾ ಸೇವಾ ಸಮಾಜ, ಕೆ.ಆರ್‌.ಮಾರುಕಟ್ಟೆ, ಕಾರ್ಪೋರೇಷನ್‌ ಮೂಲಕ ಶಾಂತಿನಗರ ಟಿಟಿಎಂಸಿಗೆ ಮರಳಲಿದೆ. ಅದೇ ರೀತಿ ಮತ್ತೊಂದು ಬಸ್‌ ಶಾಂತಿನಗರ ಟಿಟಿಎಂಸಿಯಿಂದ ಹೊರಟು ಪೂರ್ಣಿಮಾ ಚಿತ್ರಮಂದಿರ, ಕೆ.ಆರ್‌.ಮಾರುಕಟ್ಟೆ, ಮಹಿಳಾ ಸೇವಾ ಸಮಾಜ, ಲಾಲ್‌ಬಾಗ್‌ ಮುಖ್ಯರಸ್ತೆ ಮೂಲಕ ಸಾಗಿ ವಾಪಾಸು ಶಾಂತಿನಗರ ಟಿಟಿಎಂಸಿಗೆ ಮರಳಲಿದೆ. ಈ ಮಾರ್ಗಗಳಲ್ಲಿ ಬರುವ ಮೆಟ್ರೋ ನಿಲ್ದಾಣಗಳಲ್ಲಿ ಬಸ್‌ ನಿಲುಗಡೆ ನೀಡಲಿದೆ.

Latest Videos

undefined

ಬೆಂಗ್ಳೂರಲ್ಲಿ ಎಲಿವೇಟೆಡ್‌ ರಸ್ತೆ ಮೇಲೆ ಮೆಟ್ರೋ ನಿರ್ಮಾಣ: ಡಿಕೆಶಿ

ಹಳೇ ಮದ್ರಾಸ್‌ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಹೊರಡುವ ಬಸ್‌ ಬಿಇಎಂಎಲ್‌ ಗೇಟ್‌, ಮಲ್ಲೇಶಪಾಳ್ಯ, ಬಸವನಗರ ಮತ್ತು ರಮೇಶನಗರದವರೆಗೆ ಸಂಚರಿಸಲಿದೆ. ವಿಜಯನಗರ ಮೆಟ್ರೋ ನಿಲ್ದಾಣದಿಂದ ಹೊರಡುವ ಬಸ್ ಬಸವೇಶ್ವರ ನಗರ ಬಸ್‌ ನಿಲ್ದಾಣ, ಕಮಲಾನಗರ ಮಾರುಕಟ್ಟೆ, ಶಂಕರ್‌ನಾಗ್‌ ಬಸ್‌ ನಿಲ್ದಾಣದವರೆಗೆ ಸಂಚರಿಸಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮೆಟ್ರೋ ಫೀಡರ್‌ ಸೇವೆ ಹಾಗೂ ಹೊಸ ಮಾರ್ಗಗಳಲ್ಲಿ ಬಸ್‌ ಸಂಚಾರ ಸೇವೆ ಆರಂಭಿಸಿತ್ತು. ನೈಸ್‌ ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ, ಉಲ್ಲಾಳ ಉಪನಗರ-ಯಶವಂತಪುರ ಟಿಟಿಎಂಸಿ, ಕೆ.ಆರ್‌.ಪುರ-ಬಾಗಲೂರು, ಶಿವಾಜಿನಗರ ಬಸ್‌ ನಿಲ್ದಾಣ-ಯಲಹಂಕ 5ನೇ ಹಂತಕ್ಕೆ ಹೊಸ ಬಸ್‌ ಸೇವೆ ಆರಂಭಿಸಲಾಗಿದೆ.

ಹಳದಿ ಮಾರ್ಗ ಮೆಟ್ರೋಗೆ ಚೀನಾದಿಂದ ಬಂತು ಬೋಗಿ, ಆರಂಭ ಯಾವಾಗ?

ಜತೆಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಬಗಲಗುಂಟೆ, ಆಲೂರು, ನಾಗಸಂದ್ರ, ಚಿಕ್ಕಬಾಣಾವಾರ, ಗಾಣಿಗರಹಳ್ಳಿ, ಗುಣಿಅಗ್ರಹಾರಕ್ಕೆ ಮೆಟ್ರೋ ಫೀಡರ್‌ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಈ ಭಾಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ಪಾರ್ಕಿಂಗ್‌ ಸಮಸ್ಯೆಗೆ ಬಿಎಂಆರ್‌ಸಿಎಲ್‌ ನಿರ್ಧಾರ:
‘ನಮ್ಮ ಮೆಟ್ರೋ’ ಪ್ರಯಾಣಿಕರು ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬೆಂಗಳೂರು ಮೆಟ್ರೋ ನಿಗಮವು ಮುಂದಾಗಿದ್ದು, ನೇರಳೆ ಮಾರ್ಗದ ಎಂಟು ನಿಲ್ದಾಣದಲ್ಲಿ ಪಾರ್ಕಿಂಗ್ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದೆ.

ನಿಲ್ದಾಣಗಳಲ್ಲಿ ಪ್ರಯಾಣಿಕರ ವಾಹನ ನಿಲುಗಡೆ ಸಾಧ್ಯವಾಗದೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಮೈಸೂರು ರಸ್ತೆ, ಮಂತ್ರಿ ಮಾಲ್‌ ನಿಲ್ದಾಣ, ಸೀತಾರಾಮಪಾಳ್ಯ, ನಲ್ಲೂರಹಳ್ಳಿ, ಸತ್ಯಸಾಯಿ ಬಾಬಾ, ಕಾಡುಗೋಡಿ ಟ್ರೀ ಪಾರ್ಕ್, ಬೆನ್ನಿಗಾನಹಳ್ಳಿ ಮತ್ತು ಚಲ್ಲಘಟ್ಟ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯ ಹೆಚ್ಚಿಸಲು ಹಾಗೂ ಹೊಸದಾಗಿ ಕಲ್ಪಿಸಲು ಟೆಂಡರ್ ಕರೆಯಲಾಗಿದೆ.

ಈ ಎಂಟು ಮೆಟ್ರೋ ರೈಲು ನಿಲ್ದಾಣಗಳಲ್ಲಿ ಒಟ್ಟು 8,956 ಚದರ ಮೀಟರ್ ಸ್ಥಳದಲ್ಲಿ ಪಾರ್ಕಿಂಗ್ ಸೌಲಭ್ಯ ಸಿಗಲಿದೆ. ಹೊಸದಾಗಿ ಸ್ಥಳಾವಕಾಶದಲ್ಲಿ 2069 ಬೈಕ್, 150 ಕಾರುಗಳನ್ನು ನಿಲ್ಲಿಸಲು ಹಾಗೂ ಪ್ರತಿ ನಿಲ್ದಾಣದಲ್ಲಿ 10 ಸೈಕಲ್ ನಿಲ್ಲಿಸಲು ಸಹ ಸ್ಥಳಾವಕಾಶ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

 

click me!