ಐಟಿಬಿಪಿ ನೇಮಕಾತಿಗಾಗಿ ನಡೆಯುತ್ತಿದ್ದ ವೈದ್ಯಕೀಯ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರಾಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಕಲಿ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದು, ಅಸಲಿ ಅಭ್ಯರ್ಥಿ ತಲೆಮರೆಸಿಕೊಂಡಿದ್ದಾನೆ.
ಬೆಳಗಾವಿ (ನ.26): ಐಟಿಬಿಪಿ ನೇಮಕಾತಿಗಾಗಿ ನಡೆಯುತ್ತಿದ್ದ ವೈದ್ಯಕೀಯ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರಾಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಕಲಿ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದು, ಅಸಲಿ ಅಭ್ಯರ್ಥಿ ತಲೆಮರೆಸಿಕೊಂಡಿದ್ದಾನೆ.
ಮಧ್ಯಪ್ರದೇಶ ಮೂಲದ ಮುರೈನ್ ಜಿಲ್ಲೆಯ ಜನಕಪುರ ನಿವಾಸಿ ಅಂಕಿತ ಬಸುದೇವ ಬಂಧಿತ ಆರೋಪಿ. ಇದೇ ಜಿಲ್ಲೆಯ ಪಕ್ಕದ ಗವಾ ಸರ್ಜನಪೂರ ನಿವಾಸಿ ಚೋಟು ದೇವೆಂದರ್ ಸಿಂಗ್ ಎಂಬ ಅಭ್ಯರ್ಥಿಯೇ ಪರಾರಿಯಾದವ. ಈತ ಐಟಿಬಿಪಿ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಬೆಳಗಾವಿಯ ಹೊಸವಂಟಮೂರಿ ಹಾಲಬಾವಿ ಐಟಿಬಿಪಿ 44ನೇ ಕೆಂದ್ರದಲ್ಲಿ ನ.23 ರಂದು ವೈದ್ಯಕೀಯ ಪರೀಕ್ಷೆ ನಡೆದಿತ್ತು. ಈ ವೇಳೆ ದೇವೆಂದರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ. ನ.24ರಂದು ಮರುಪರೀಕ್ಷೆಗೆ ಹಾಜರಾಗು ವಂತೆ ಅಧಿಕಾರಿಗಳು ತಿಳಿಸಿದ್ದರು. ಈ ವೇಳೆ ಯೋಜನೆ ರೂಪಿಸಿದ ಚೋಟು ಸಿಂಗ್ ತನ್ನ ಬದಲಿಗೆ ಸ್ನೇಹಿತ ಅಂಕಿತ್‌ನನ್ನು ದೈಹಿಕ ಪರೀಕ್ಷೆಗೆ ಕಳಿಸಿದ್ದ. ದೈಹಿಕ ಪರೀಕ್ಷೆ ವೇಳೆ ಅನುಮಾನಗೊಂಡ ಐಟಿಬಿಪಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಹಾಗೂ ನಕಲಿ ಅಭ್ಯರ್ಥಿ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಈಗ ಇಬ್ಬರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.